Monday, 21 January 2013

ಹೇಳದೇ ಉಳಿದ ಮಾತುಗಳು


ಅಷ್ಟು ದಿನ ಮನೆಯಲ್ಲಿ ಅಪ್ಪ ಅಮ್ಮನ ಪ್ರೀತಿ, ಆರೈಕೆಯಲ್ಲಿ ಬೆಳೆದ ರಾಜೇಶನಿಗೆ, ಊರು ಬಿಟ್ಟು ದೂರ ಹೋಗುವ ಅನಿವಾರ್ಯತೆ ಬಂದಿತ್ತು. ಪಿ.ಯು.ಸಿ. ಮುಗಿದು ಬೆಂಗಳೂರಿನ ಪ್ರತಿಷ್ಥಿತ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಸೀಟು ಸಿಕ್ಕಿತ್ತು. ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಕ್ಕಿದ ಖುಷಿ ಒಂದೆಡೆಯಾದರೆ, ಮನೆ ಬಿಟ್ಟು ಹೋಗಬೇಕಲ್ಲ ಎಂಬ ಬೇಸರ ಇನ್ನೊಂದೆಡೆ. ಅಂತೂ ಕೊನೆಗೂ ಕಾಲೇಜು ಶುರುವಾಗುವ ದಿನ ಬಂದೇ ಬಿಟ್ಟಿತು. ಬಸ್ ಹತ್ತುವಾಗ ಅವನ ಕಣ್ಣಲ್ಲಿ ನೀರೇ ಬಂದು ಬಿಟ್ಟಿತ್ತು. "ಬೇಜಾರು ಮಾಡಿಕೊಳ್ಳಬೇಡ ಮಗಾ. ಬರೀ ಒಂದು ರಾತ್ರಿ ಪ್ರಯಾಣ ಅಲ್ಲಿಂದ ಇಲ್ಲಿ. ಬೇಕಾದಾಗ ಬರಬಹುದು" ಎಂದು ಅಮ್ಮ ಕೂಗಿ ಹೇಳುತ್ತಿದ್ದುದು ಕೇಳಿಸಿದ್ದೇ ಖುಷಿಯಾಗುವ ಬದಲು ಮತ್ತಷ್ಟು ದುಃಖ ಉಮ್ಮಳಿಸಿ ಬಂತು. ಯಾರಿಗೂ ತಿಳಿಯದಂತೆ ಕಣ್ಣು ಒರೆಸಿಕೊಂಡು, ತೆಪ್ಪಗೆ ತನ್ನ ಸೀಟಿನ ಮೇಲೆ ಕೂತ. ಹಾಗೇ ನಿದ್ದೆಗೆ ಜಾರಿದ.

ಬೆಳಿಗ್ಗೆಯಾಯಿತು. "ಮೆಜೆಸ್ಟಿಕ್ ಮೆಜೆಸ್ಟಿಕ್" ಎಂದು ಕ್ಲೀನರ್ ಕೂಗಿಕೊಳ್ಳುತ್ತಿದ್ದ. ರಾಜೇಶ  ದೊಡ್ಡ ಬ್ಯಾಗ್ ಹೊತ್ತು ಬಸ್ಸಿನಿಂದ ಇಳಿದ. ಎಲ್ಲವೂ ಹೊಸತೆನಿಸಿತು. ಸುತ್ತಲೂ  ಜನಜಂಗುಳಿ ಇದ್ದರೂ  "ತನ್ನವರ್ಯಾರೂ ಇಲ್ಲ" ಎಂಬ ಒಂಟಿತನದ ಹೆದರಿಕೆ ಆಗಲೇ ಕಾಡಲು ಶುರುವಾಯಿತು. ಎಲ್ಲರೂ ತನ್ನವರೇ ಎಂಬತ್ತಿದ್ದ ಹಳ್ಳಿ ನೆನಪಾಯಿತು. "ಈ ಓದು ವಿದ್ಯೆ ಏನೂ ಬೇಡ, ಮತ್ತೆ ಬಸ್ ಹತ್ತಿ ಊರಿಗೆ ಹೋಗಿ ಅಲ್ಲಿ ಚಿಕ್ಕ ಅಂಗಡಿ ಆದರೂ ಹಾಕಿಕೊಂಡು ಇರೋಣ" ಎಂಬ ಯೋಚನೆ ತಲೆಗೆ ಬರುತ್ತಿದ್ದಂತೆಯೇ ಅಮ್ಮನ ಕಾಲ್ ಬಂತು. "ತಲುಪಿದೆಯಾ? ನಮಗೆ ಬಹಳ ಹೆಮ್ಮೆ. ಕುಟುಂಬದವರೆಲ್ಲಾ, ನೀನು ಒಳ್ಳೆ ಕಾಲೇಜಿನಲ್ಲಿ ಸೀಟು ತಗೊಂಡೆ ಎಂದು ಹೊಗಳುತ್ತಾ ಇದ್ದಾರೆ." ಎಂದಾಕ್ಷಣವೇ ತನ್ನ ಆಲೋಚನೆಗೆ ಬ್ರೇಕ್ ಹಾಕಿ ಕಾಲೇಜಿನ ಕಡೆ ಹೋಗುವ ಬಸ್ ಹಿಡಿದ. 

ಬ್ಯಾಗ್ ತೆಗೆದುಕೊಂಡು ಹಾಸ್ಟೆಲ್ ಒಳಗೆ ಹೋದ. ತನಗೆ ಕೊಟ್ಟ ಕೊಠಡಿಯೊಳಗೆ ಹೋಗಿ, ಪೆಚ್ಚು ಮೋರೆ  ಹಾಕಿಕೊಂಡು ಕುಳಿತ. ಎಲ್ಲವೂ ಹೊಸತು. ಮತ್ತೆ ಮನೆಗೆ ಹೋಗಬೇಕೆಂಬ ತವಕದಲ್ಲಿಯೇ ಎರಡು ದಿನಗಳು ಕಳೆದವು. ಹೊಸ ಹೊಸ ಸಹಪಾಠಿಗಳ ಸ್ನೇಹವಾಯಿತು. "ಎಲ್ಲರೂ ತನ್ನಂತೆಯೇ ಮನೆ ಬಿಟ್ಟು ಓದಲು ಬಂದವರೇ" ಎಂಬ ಆಲೋಚನೆ ಅವನಿಗೆ ಸಮಾಧಾನ ನೀಡಿತ್ತು. ದಿನ ಕಳೆದಂತೆ ಹಾಸ್ಟೆಲ್  ಜೀವನಕ್ಕೆ ಹೊಂದಿಕೊಳ್ಳುತ್ತಾ ಹೋದ. ಆ ಮೆಸ್ಸು, ಪರೀಕ್ಷೆಯ ಕೊನೆಯ ದಿನದ  ಗ್ರೂಪ್ ಸ್ಟಡೀಸ್, ನೈಟ್ ಔಟ್ಸ್ ಗಳ ಸಂಭ್ರಮಗಳು ಮನೆಯನ್ನೇ ಮರೆಸಿ ಬಿಟ್ಟವು. ಗೆಳೆಯರ ಗುಂಪು ಕೂಡ ಬೆಳೆಯಿತು. ಅವರಲ್ಲಿ ಬಲು ಹತ್ತಿರದ ಗೆಳೆಯನೆಂದರೆ ರಾಜೀವ್. ಅವನು ದೆಹಲಿಯ ಹುಡುಗ. ಬಹಳ ಶ್ರೀಮಂತ. ರಾಜೇಶನಿಗೆ ಹಿಂದಿ ಬರುವುದಿಲ್ಲವೆಂದು ಹಿಂದಿಯಲ್ಲಿ ಬೈದಿದ್ದ. ರಾಜೇಶ ಯಾರಿಂದಲೋ ಕೆಲವು ಬೈಗುಳಗಳನ್ನು ಕಲಿತು ಅವನಿಗೆ ಬೈದ. ಇಬ್ಬರೂ ಬೈದುಕೊಂಡರು. ಹಾಗೆಯೇ ಹತ್ತಿರವಾದರು. ಅವನೊಡನೆ ಇದ್ದು ರಾಜೇಶ ಕೂಡ ಹಿಂದಿ ಮಾತನಾಡುವುದು ಕಲಿತ. ಸ್ನೇಹ ಬೆಳೆಯಿತು. ವರ್ಷದೊಳಗೆ ಎಷ್ಟು ಆಪ್ತರಾಗಿದ್ದರೆಂದರೆ, ಪರೀಕ್ಷೆ ಮುಗಿದ ಮೇಲಿನ ರಜೆಯ ಸಮಯದಲ್ಲಿ ಒಬ್ಬರನ್ನೊಬ್ಬರು ಬಿಟ್ಟು ಮನೆಗೆ ಹೋಗುವ ಮನಸ್ಸು ಕೂಡ ಇರಲಿಲ್ಲ ಅವರಿಗೆ. 

ಜೀವದ ಗೆಳೆಯರಾದರು. ಹಾಸ್ಟೇಲಿನಲ್ಲೆಲ್ಲಾ ಇವರದೇ ದರಬಾರು. ಎಲ್ಲದರಲ್ಲೂ ಇವರೇ ಮುಂದು. ಒಂದು ರಜೆಯಲ್ಲಿ ಅವನ ಜೊತೆ ದೆಹಲಿಗೆ ಕೂಡ ಹೋಗಿ ಬಂದಿದ್ದಾಯಿತು. ವರ್ಷಗಳು ಉರುಳಿದವು. ಕ್ಯಾಂಪಸ್ ಪ್ಲೇಸ್ಮೆಂಟ್ ನಲ್ಲಿ ಇಬ್ಬರಿಗೂ ಒಳ್ಳೆಯ ನೌಕರಿ ಸಿಕ್ಕಿತು. ವರ್ಷಗಳು ಎಷ್ಟು ಬೇಗ ಉರುಳಿದ್ದವೆಂದರೆ ಇನ್ನು ಇಂಜಿನಿಯರಿಂಗ್ ಮುಗಿಯಲು ಬರೀ ಮೂರು ತಿಂಗಳುಗಳು ಉಳಿದಿದ್ದವು. ಅಷ್ಟರಲ್ಲಿ ಯಾರ ದೃಷ್ಟಿ ಬಿದ್ದಿತ್ತೋ ಏನೋ, ರಾಜೇಶ ಮತ್ತು ರಾಜೀವನ ಸ್ನೇಹದಲ್ಲಿ ಬಿರುಕು ಬಂದು ಬಿಟ್ಟಿತ್ತು. ಯಾರ ಬಳಿಯೋ  ರಾಜೀವ ತನ್ನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದಾನೆ ಎಂದು ರಾಜೇಶನಿಗೆ ಯಾರೋ ಹೇಳಿದರು. ರಾಜೇಶನ ಮನಸು ಒಡೆದಿತ್ತು. ರಾಜೀವನ ಎದುರು ಮೌನಿಯಾದ. ಅವನನ್ನು ನಿರ್ಲಕ್ಷಿಸಲು ಶುರು ಮಾಡಿದ. ಯಾಕೆ ಹೀಗೆ ಮಾಡುತ್ತಿದ್ದಾನೆಂದು ಕಾರಣ ಕೂಡ ಹೇಳಲಿಲ್ಲ.

ಕೊನೆಯ ತಿಂಗಳು. ಗೋವಾ ಪ್ರವಾಸಕ್ಕೆ ಹೋಗೋಣ ಎಂದು ಅವನ ಗೆಳೆಯರ ಗುಂಪು ಯೋಜನೆ ಹಾಕಿತ್ತು. ರಾಜೇಶ ಹೋಗಲು ನಿರಾಕರಿಸಿದ. "ಇನ್ನು ಮೌನ ಸಾಕು. ಇನ್ನೇನು ಕಾಲೇಜು ಬಿಟ್ಟು  ಎಲ್ಲರೂ ಹೋಗುತ್ತೇವೆ. ಇದು ನಮ್ಮ ಕೊನೆಯ ಟ್ರಿಪ್." ಎಂದು ರಾಜೀವ ಕರೆಯಲು ಬಂದಾಗ ರಾಜೇಶನ ಮನಸ್ಸು ಕೊಂಚ ಅರಳಿತ್ತಾದರೂ, "ಸ್ವಲ್ಪ ಬುದ್ಧಿ ಕಲಿಯಲಿ, ಇವರು ಟ್ರಿಪ್ ಗೆ ಹೋಗಿ ಬಂದ ಮೇಲೆ ಒಂದಾದರಾಯಿತು."ಎಂದುಕೊಂಡ. ರಾಜೇಶನ ಅಪ್ಪ ಅಮ್ಮ ಕೂಡ ಟ್ರಿಪ್ ಗೆ ಹೋಗಲು ನಿರಾಕರಿಸಿದ್ದರೆಂಬ ಕಾರಣ ಕೂಡ ಅದರೊಡನೆ ಸೇರಿತ್ತು. "ಇಲ್ಲ, ನನಗೆ ಬರಲು ಮನಸ್ಸಿಲ್ಲ" ಎಂದು ಹೇಳಿಬಿಟ್ಟ. 

ಮರುದಿನ ರಾಜೇಶನಿಗೆ ಒಂದು ದುರಂತ ಸುದ್ಧಿ ಕಾದಿತ್ತು. ರಾಜೀವ ಗೋವಾದ ಸಮುದ್ರದ ತೆರೆಗಳೊಳಗೆ ಲೀನನಾಗಿದ್ದ. ಇಂಥ ದೊಡ್ಡ ದುರಂತ ರಾಜೇಶನ ಜೀವನದಲ್ಲೇ ಮೊದಲ ಬಾರಿ ಆಗಿದ್ದು.ಅವನಿಗೆ  ಊಹಿಸಲು ಕೂಡ ಅಸಾಧ್ಯವಾಗಿಬಿಟ್ಟಿತ್ತು. ಮನಸ್ಸು ಬ್ಲ್ಯಾಂಕ್ ಆಗಿ ಬಿಟ್ಟಿತು. ಕೂಡಲೇ ಮೆಜೆಸ್ಟಿಕ್ ಕಡೆ ಹೋಗಿ ಗೋವಾದ ಬಸ್ ಹಿಡಿದ. ಪ್ರಯಾಣದಲ್ಲೆಲ್ಲ ಗರಬಡಿದವನಂತೆ ಸುಮ್ಮನೆ ಕುಳಿತಿದ್ದ. ಪೋಸ್ಟ್ ಮೊರ್ಟೆಮ್ ಮಾಡಿ ರಾಜೀವನ ಶವವನ್ನು ಹೊರಗಡೆ ತಂದಿದ್ದರು. ರಾಜೇಶನ ಹೃದಯ ಜೋರಾಗಿ ಬಡಿದುಕೊಳ್ಳಲಾರಂಭಿಸಿತು. "ಗೆಳೆಯ ಸತ್ತಿದ್ದಾನೆ" ಎಂದು ಅವನ ಮೆದುಳು ಹೃದಯಕ್ಕೆ ಹೇಳುತ್ತಿದ್ದರೆ, "ಇಲ್ಲ, ಇದು ಸಾಧ್ಯವೇ ಇಲ್ಲ" ಎಂದು ಮನಸ್ಸು, ಮೆದುಳಿಗೆ ಹೇಳಿ ಸಮಾಧಾನ ಮಾಡಿಕೊಳ್ಳುತ್ತಿತ್ತು. ಈ ಆಲೋಚನೆಗಳ ತಾಕಲಾಟದ ನಡುವೆಯೇ ರಾಜೀವನ ಶವದ ಬಳಿ ಹೋದ. "ಹೌದು, ಗೆಳೆಯ ಸತ್ತಿದ್ದಾನೆ" ಎಂದು ಅವನ ಮನಸ್ಸಿಗೂ ಖಾತ್ರಿಯಾದದ್ದೇ ತಡ ದುಃಖ ಉಮ್ಮಳಿಸಿ ಬಂತು. "ನೀನು ನನ್ನ ಜೀವನದಲ್ಲಿ ಎಷ್ಟು  ಮುಖ್ಯ ಎಂದು ಗೊತ್ತೇನೋ?! ನೀನೂ ನನ್ನ ಕುಟುಂಬದ ಸದಸ್ಯನಂತೆ, ಜೀವದ ಗೆಳೆಯ, ಕಷ್ಟ ಸುಖಗಳಲ್ಲಿ ಹೆಗಲಾಗಿ ನಿಂತ ಸೋದರ, ಈ ಕಾಲೇಜು ಬಿಟ್ಟು ಹೋಗುವಾಗ ನನಗೆ ಬೇಜಾರಾದರೆ  ಅದಕ್ಕೆ ಮೊದಲ ಕಾರಣ ನೀನೇ ಗೆಳೆಯ" ಎಂದು ರಾಜೀವನ ಬಳಿ ಹೇಳಬೇಕೆಂದು ಅವನ ಮನ ಹಾತೊರೆಯುತ್ತಿತ್ತು. ರಾಜೀವ ಏನೂ ತಿಳಿಯದಂತೆ ಸುಮ್ಮನೆ ಮಲಗಿದ್ದ. ಈಗಲೂ ರಾಜೀವನ ನೆನಪು ಬಂದಾಗಲೆಲ್ಲ  ಈ ಹೇಳದೆ ಉಳಿದ ಮಾತುಗಳು ರಾಜೇಶನನ್ನು ಕಾಡುತ್ತಲೇ ಇರುತ್ತವೆ.

1 comment:

  1. ರಾಜೀವನ ಸಾವು ಮತ್ತು ಅಲ್ಲಿಯವರೆಗೂ ಮುನಿದಿದ್ದ ರಾಜೇಶ ಎರಡೂ ಪಾತ್ರಗಳು ನನಗೆ ನೆನಪಾದದ್ದು ನನ್ನವೇ ಕಾಲೇಜು ದಿನಗಳು.

    ಒಳ್ಳೆಯ ಕಥನ.

    ReplyDelete