Tuesday 5 February 2013

ಅಂತರ್ಜಾಲದಲ್ಲೊಂದು ಹೊಸ ಪ್ರಪಂಚ


ನಮ್ಮೆಲ್ಲರ ದಿನನಿತ್ಯದ ಬದುಕಿನಲ್ಲಿ ಹತ್ತು ಹಲವಾರು ಘಟನೆಗಳು ನಡೆಯುತ್ತವೆ. ಈ ಘಟನೆಗಳು ಅನುಭವವಾಗಿ ಅವು ಲೇಖನಿಯ ಮೂಲಕ ಕವಿತೆಯಾಗಿಯೋ, ಲೇಖನವಾಗಿಯೋ, ಚಿತ್ರವಾಗಿಯೋ  ಹೊರಹೊಮ್ಮುತ್ತಿರುತ್ತವೆ. ತಮ್ಮ ಅನುಭವಗಳನ್ನು ನಾಲ್ಕು ಜನರೊಂದಿಗೆ ಹಂಚಿ ಅವರ ಅಭಿಪ್ರಾಯಗಳನ್ನು ಪಡೆಯಬೇಕೆಂಬ ಆಶಯ ಪ್ರತಿಯೊಬ್ಬನಲ್ಲೂ ಸಹಜ. ಹಾಗೆಂದು ನಮ್ಮೆಲ್ಲ ಬರಹಗಳು ಪತ್ರಿಕೆಯಲ್ಲಿ ಮುದ್ರಿತವಾಗಿ ಎಲ್ಲರೂ ಓದಬೇಕು ಎಂಬುದೂ ಅಸಾಧ್ಯ. ಈ ದಿಶೆಯಲ್ಲಿ ನಮ್ಮ ವಿಚಾರಗಳನ್ನು ಹಂಚಿಕೊಳ್ಳಲು, ನಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆ ಸಾಮಾಜಿಕ ತಾಣಗಳು ಮತ್ತು ಬ್ಲಾಗ್ ಲೋಕ.

ಅವನೊಬ್ಬ ಯುವ ಬರಹಗಾರ. ತನ್ನ ಲೇಖನಿಯಿಂದ ಅದ್ಭುತ ಬರಹಗಳನ್ನು ಕೊಡುವ ಶಕ್ತಿ ಹೊಂದಿದವನು. ಸಣ್ಣ ಪ್ರಾಯದವನು ಎಂದು ಯಾರೂ ಅವನ ಸಾಹಿತ್ಯದೆಡೆ ಗಮನ ಕೂಡ ಹರಿಸುತ್ತಿರಲಿಲ್ಲ. ಆತ ಎಲೆ ಮರೆಯ ಕಾಯಾಗಿಯೇ ಉಳಿದಿದ್ದ. ಪುಸ್ತಕ ಪ್ರಕಟಿಸುವಷ್ಟು ಶಕ್ತಿ ಕೂಡ ಅವನ ಬಳಿ ಇಲ್ಲ .  ಆಗ ತನ್ನ ಬರಹಗಳನ್ನು ಯಾರದೇ ಹಂಗಿಲ್ಲದೆ ಓದುಗರ ಮುಂದಿಡಲು ವೇದಿಕೆಯಾಗಿದ್ದು ಬ್ಲಾಗ್ ಮತ್ತು ಸಾಮಾಜಿಕ ತಾಣಗಳು. ಎಲ್ಲೋ ಮೂಲೆಯಲ್ಲಿದ್ದ ಅವನ ಸಾಹಿತ್ಯ ಈ ಮೂಲಕ ಓದುಗರ ಕೈ ಸೇರಿತು. ಆತ ಪ್ರಸಿದ್ಧನಾದ.ಹೀಗೆ  ಕ್ಷಣದಲ್ಲಿ ನಮಗನಿಸಿದ್ದನ್ನು ಬರೆದು ಹಂಚಿಕೊಳ್ಳಬಹುದು. ವಿಶ್ವದ ಯಾವುದೋ ಮೂಲೆಯಲ್ಲಿರುವ ಯಾರೋ ಅದನ್ನು ಓದಿ ಅಭಿಪ್ರಾಯಿಸುತ್ತಾರೆ. ನಮ್ಮ ಬರಹ ಹೊಸ ಚರ್ಚೆಗೆ ಚಾವಡಿ. ಒಬ್ಬರ ಮುಖ ಒಬ್ಬರು ನೋಡದಿದ್ದರೂ ಹೊಸ ಸ್ನೇಹಗಳು ಹುಟ್ಟಿಕೊಳ್ಳುತ್ತವೆ. ಸಮಾನ ಮನಸ್ಕರ ಒಂದು ಗುಂಪು ಸೃಷ್ಟಿಯಾಗುತ್ತದೆ.  ಹೊಸ ಹೊಸ ಅನುಭವಗಳಿಗೆ ಅನುವು ಮಾಡಿಕೊಡುತ್ತದೆ. 

ಇನ್ನು ಓದುಗರಿಗೆ  ಬ್ಲಾಗುಗಳು ಅಪಾರ ಮಾಹಿತಿಗಳ ಕಣಜ. ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ, ವೈದ್ಯಕೀಯ, ಕಾನೂನು, ಆಟೋಮೊಬೈಲ್, ಸಿನೆಮ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ನುರಿತವರು ತಮ್ಮ ಬ್ಲಾಗ್ ಮೂಲಕ ನವ ನವೀನ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಜೀವನದ ಬಗ್ಗೆ ಅನುಭವಗಳನ್ನು ಹಂಚಿಕೊಳ್ಳುವ ಬ್ಲಾಗುಗಳು ನಮ್ಮ ಆತ್ಮ ವಿಮರ್ಶೆಗೆ ಸಹಾಯಕವಾದರೆ, ವ್ಯಂಗ್ಯ ವಿಡಂಬನೆಯಿಂದ ಕೂಡಿದ ಹಲವು ಬ್ಲಾಗುಗಳು ಈ ಒತ್ತಡದ ಜೀವನದಲ್ಲಿ ಮುಖದಲ್ಲಿ ನಗು ಮೂಡಿಸುತ್ತವೆ. ಕವಿತೆ, ಕಥೆ, ಲೇಖನಗಳಿಂದ ಕೂಡಿದ ಸಾಹಿತ್ತಿಕ ಬ್ಲಾಗುಗಳು ಸಾಹಿತ್ಯ ಆಸ್ವಾದಕರಿಗೆ ರಸದೂಟ ಇದ್ದಂತೆ.ಛಾಯಾ ಚಿತ್ರ ಬ್ಲಾಗುಗಳು ಕಲಾತ್ಮಕತೆಯನ್ನು ಬಿಂಬಿಸುವುದರೊಂದಿಗೆ,  ಕುಳಿತಲ್ಲಿಯೇ ಪ್ರಪಂಚ ದರ್ಶನ ಮಾಡಿಸುತ್ತವೆ.  ರಾಜಕೀಯ ಮತ್ತು ಧಾರ್ಮಿಕ ಬ್ಲಾಗುಗಳು ಹಲವು ವಿಚಾರ ವಿಮರ್ಶೆಗಳಿಗೆ  ಎಡೆ ಮಾಡಿಕೊಡುತ್ತವೆ. ಉದಾಹರಣೆಗೆ ಒಬ್ಬ ರಾಜಕೀಯ ವ್ಯಕ್ತಿ ದೇಶದ ಅಭಿವೃದ್ಧಿಯ ಬಗ್ಗೆ ತನ್ನ ನಿಲುವನ್ನು ಬ್ಲಾಗ್ ಮೂಲಕ ಪ್ರಕಟಿಸಿದಾಗ, ಸಾಮಾನ್ಯ ಪ್ರಜೆಗಳು ತಮ್ಮ ಪರ ಅಥವಾ ವಿರೋಧ ಪ್ರತಿಕ್ರಿಯೆ ನೀಡುವುದರ ಮೂಲಕ ಆ ವ್ಯಕ್ತಿ ತನ್ನ ನಿಲುವುಗಳ ಪರಾಮರ್ಶೆ ಮಾಡಿಕೊಳ್ಳುವಲ್ಲಿ ಸಹಾಯಕವಾಗಬಹುದು.ಇನ್ನು ಹಲವಾರು ಸಮಾಜ ಸೇವಾ ಸಂಸ್ಥೆಗಳು ಕೂಡ ತಮ್ಮ ಸತ್ಕಾರ್ಯಗಳನ್ನು ಬ್ಲಾಗ್ ಮೂಲಕ ಹಂಚಿಕೊಳ್ಳುತ್ತಿರುತ್ತವೆ. ಇದು  ಹಲವು ದಾನಿಗಳನ್ನು ಆಕರ್ಷಿಸುವುದರ ಮೂಲಕ ಇಂತಹ ಸಂಸ್ಥೆಗಳು ಬೆಳೆಯಲು ಬಲು ಸಹಕಾರಿ.    ಹೀಗೆ  ಬ್ಲಾಗ್ ಗಳ ದೆಸೆಯಿಂದ ಇಂಥ ಹತ್ತು ಹಲವು ಕ್ಷೇತ್ರಗಳ ಆಗುಹೋಗುಗಳನ್ನು  ಕ್ಷಣದಲ್ಲಿ, ಮನೆಯಲ್ಲಿ ಕುಳಿತಲ್ಲಿಯೇ ಸವಿವರವಾಗಿ ತಿಳಿದುಕೊಳ್ಳಬಹುದು. ನಮ್ಮ ಜ್ಞಾನ ಭಂಡಾರವನ್ನು ಹಿರಿದಾಗಿಸಬಹುದು. 


ಕನ್ನಡ ಬ್ಲಾಗ್ ಲೋಕ ಬೆಳೆಯುತ್ತಲೇ ಇದೆ. ಈ ಬೆಳವಣಿಗೆಯಲ್ಲಿ ಯುವಮನಗಳ ಪಾತ್ರ ಬಹಳ ಮಹತ್ವದ್ದು. ತಮ್ಮ ಕೆಲಸ ಕಾರ್ಯಗಳ ಒತ್ತಡದ ಮಧ್ಯೆಯೂ ಹವ್ಯಾಸವೆಂಬಂತೆ  ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಬ್ಲಾಗ್ ಮತ್ತು ಸಾಮಾಜಿಕ ತಾಣಗಳ ಮೂಲಕ ಅವನ್ನು ಹಂಚಿಕೊಂಡು, ಮಾಹಿತಿ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳುತ್ತಿರುವುದು ಶ್ಲಾಘನೀಯ. ಪ್ರತಿ ಬರಹಗಾರನಿಗೂ ಪುಸ್ತಕ ರೂಪದಲ್ಲಿ ಬರಹಗಳನ್ನು ತರುವ ಶಕ್ತಿ ಇರುವುದಿಲ್ಲ. ಅಂತ ಸಂದರ್ಭದಲ್ಲಿ ಬ್ಲಾಗ್ ಗಳು ಓದುಗರನ್ನು ತಲುಪುವ ಖರ್ಚಿಲ್ಲದ ಮತ್ತು  ಸರಳ ಮಾರ್ಗ.  ಇನ್ನು ಸಾಮಾಜಿಕ ತಾಣಗಳಲ್ಲಿರುವ  ಸಾಹಿತ್ಯದ ಗುಂಪುಗಳು, ಯುವ ಬರಹಗಾರರಿಗೆ ತಮ್ಮ ಬರಹಗಳನ್ನು ಹಂಚಿಕೊಂಡು, ಅನ್ಯರ ಬರಹಗಳನ್ನು ಓದಿ ಹೊಸ ಕಲಿಕೆಯನ್ನು ನೀಡುವ ಸಾಹಿತ್ಯ ಶಾಲೆಗಳಿದ್ದಂತೆ. ಬರಹಗಾರನ ವೈಯಕ್ತಿಕ ಬೆಳವಣಿಗೆಯಲ್ಲಿ ಕೂಡ ಇಂತಹ ಗುಂಪುಗಳು ಮಹತ್ವದ ಪಾತ್ರ ವಹಿಸುತ್ತವೆ. ಹಲವಾರು ಅಂತರ್ಜಾಲ  ಪತ್ರಿಕೆಗಳು ಯುವ ಬರಹಗಾರರ ಬರಹಗಳನ್ನು ಪ್ರಕಟಿಸಿ ಅವರನ್ನು ಪ್ರೋತ್ಸಾಹಿಸುತ್ತಿರುವುದು ಬಹಳ ಸ್ಪೂರ್ತಿದಾಯಕ. ಇವೆಲ್ಲ  ಪಾಶ್ಚ್ಯಾತ್ಯೀಕರಣದ ನಡುವೆ, ಕನ್ನಡ ಉಳಿಸಿ, ಬೆಳೆಸುವಲ್ಲಿ ಹೊಸ ಕ್ರಾಂತಿ ಮಾಡುತ್ತಿವೆ ಎಂದರೆ ತಪ್ಪಾಗಲಾರದು.

ಇವೆಲ್ಲಾ ಒಂದೆಡೆಯಾದರೆ, ಇನ್ನೊಂದೆಡೆ ಕೆಲವು ಸಮಾಜ ಘಾತುಕರು  ವೈಯಕ್ತಿಕ ನಿಂದೆ, ಧಾರ್ಮಿಕ ನಿಂದನೆ, ಗುಂಪುಗಳ ನಡುವಿನ ಜಗಳಗಳಿಗೆ ಬ್ಲಾಗ್ ಲೋಕವನ್ನು ಉಪಯೋಗಿಸಿಕೊಳ್ಳುತ್ತಿರುವುದು ನಿಜಕ್ಕೂ ಖೇದನೀಯ.  ಬ್ಲಾಗ್ ಗಳು   ನಮ್ಮ ಸ್ವಾರ್ಥ ಸಾಧನೆಯ ಮಾಧ್ಯಮವಾಗದೆ ಸಾಹಿತ್ಯ, ಸಂಸ್ಕೃತಿ, ಪ್ರತಿಭೆಗಳನ್ನು ಬೆಳೆಸುವ ವೇದಿಕೆಯಾಗಲಿ. ತಂತ್ರಜ್ಞಾನದ ಫಲವಾಗಿರುವ ಬ್ಲಾಗ್ ಲೋಕವನ್ನು ಉಪಯೋಗಿಸಿಕೊಂಡು ಸಮಾಜದ  ಸಕಾರಾತ್ಮಕ ಬೆಳವಣಿಗೆಗೆ ನಾಂದಿ ಹಾಡೋಣ.  

No comments:

Post a Comment