Tuesday, 5 February 2013

ಸ್ಮಾರ್ಟ್ ದಾಸರಾಗುತ್ತಿದ್ದೇವಾ?


ಅವನು ಪ್ರತಿಭಾವಂತ ಹುಡುಗ. ಅಪ್ಪ ಅಮ್ಮನಿಗೆ ಒಬ್ಬನೇ ಮಗ. ಮಾತು ಬಹಳ ಕಡಿಮೆ. ನಾಚಿಕೆಯ ಸ್ವಭಾವ. ಅವರಿವರ ಗೋಜಿಗೆ ಹೋಗುವವನಲ್ಲ. ಪಿಯುಸಿ ಮುಗಿದು ನಗರದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದಾಯಿತು. ಮೊದಲ ವರ್ಷದಲ್ಲಿ ಕ್ಲಾಸಿಗೆ ಪ್ರಥಮ. ಎರಡನೆಯ ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಒಬ್ಬಳು ಹುಡುಗಿ ಅವನ ಮನಸ್ಸಿಗೆ ಲಗ್ಗೆ ಇಟ್ಟಳು. ಅವಳು, ಯಾರು ಎಂದು ಗೊತ್ತಿಲ್ಲ. ಬರೀ ನೋಟಕ್ಕೆ ಮಾರು ಹೋಗಿದ್ದ. ದಿನಗಳೆದಂತೆ ಮಂಕಾಗುತ್ತಾ ಹೋದ. ಓದಿನಲ್ಲಿ ಆಸಕ್ತಿ ಕಳೆದುಕೊಂಡ. ಮತ್ತಷ್ಟು ಮೌನಿಯಾದ. ಅವನ ಪ್ರೀತಿಯ ವಿಚಾರ ಅವನ ಗೆಳೆಯರಿಗಿಬ್ಬರಿಗೆ ಗೊತ್ತಿದ್ದಿದ್ದು ಬಿಟ್ಟರೆ ಮತ್ಯಾರಿಗೂ ಅವನು ಹೇಳಿದ್ದಿಲ್ಲ. ಆ ಹುಡುಗಿಯ ಹತ್ತಿರ ಮಾತನಾಡಿಸುವ ಧೈರ್ಯವನ್ನೂ ಮಾಡಿಲ್ಲ. ಏನೋ ತಮಾಷೆ ಮಾಡುತ್ತಿದ್ದಾನೆ ಎಂದು ಗೆಳೆಯರು ಕೂಡ ಸುಮ್ಮನಿದ್ದರು. ಒಂದು ದಿನ ಆ ಹುಡುಗಿ ಯಾವುದೋ ಹುಡುಗನ ಜೊತೆ ಅಡ್ಡಾಡುತ್ತಿರುವುದನ್ನು ನೋಡಿದ. ಅವನು, ಅವಳ ಬಾಯ್‌ಫ್ರೆಂಡ್ ಎಂದು ಯಾರೋ ಇವನಿಗೆ ಹೇಳಿದರು. ಮರುದಿನ ಅವನ ಆತ್ಮಹತ್ಯೆಯ ವಿಷಯ ಇಡೀ ಕಾಲೇಜನ್ನೇ ದಿಗ್ಭ್ರಾಂತಗೊಳಿಸಿತ್ತು.

ದೈನಂದಿನ ಜೀವನದಲ್ಲಿ ಅವೆಷ್ಟೋ ಘಟನೆಗಳು ನಡೆಯುತ್ತವೆ. ಯಾರನ್ನೋ ನೋಡಿ ಹೊಸ ಭಾವನೆಗಳು ಹುಟ್ಟುವುದು, ಹೊಸ ಆಕರ್ಷಣೆಗಳು, ಆಕರ್ಷಣೆ ಪ್ರೀತಿ ಎಂದು ಭಾಸವಾಗುವುದು ಇವೆಲ್ಲ ಸಾಮಾನ್ಯ. ಆದರೆ ಒಂದು ದಿನ, ಒಂದು ಕ್ಷಣದಲ್ಲಿ ಮೊಳಕೆಯೊಡೆದ ಆ ಭಾವನೆ, ಅವನ ಅಂತ್ಯಕ್ಕೆ ನಾಂದಿಯಾಗಿತ್ತು. ಅವನ ಕುಟುಂಬಕ್ಕೆ ನರಕ ವೇದನೆಯಾಯಿತು. ಇದು ಒಂದು ಉದಾಹರಣೆ ಅಷ್ಟೇ. ಇಂತಹ ಎಷ್ಟೋ ಘಟನೆಗಳ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ, ಪೇಪರುಗಳಲ್ಲಿ ಓದುತ್ತಿರುತ್ತೇವೆ. ಪಾಪ' ಎಂದು ಕನಿಕರ ತೋರುತ್ತೇವೆ. ಆದರೆ ಯಾಕೆ ಇಂದಿನ ಯುವಕ ಯುವತಿಯರು ಇಷ್ಟು ದುರ್ಬಲ ಮನಸ್ಸಿನವರಾಗುತ್ತಿದ್ದಾರೆ? ಇದನ್ನು ಹೇಗೆ ಸರಿಪಡಿಸಬಹುದು ಎಂಬ ಆಲೋಚನೆ ಮಾಡುವವರು ಬಹಳ ಕಡಿಮೆ. ಹೀಗೆ ದುರಂತವಾಗಿ ಸುದ್ದಿಯಾಗುವ ಘಟನೆಗಳು ಒಂದೆಡೆಯಾದರೆ, ಶಾಲೆ, ಕಾಲೇಜು, ಆಫೀಸುಗಳಲ್ಲಿ ನಡೆಯುವ, ದೊಡ್ಡ ಪರಿಣಾಮ ಬೀರುವ ಚಿಕ್ಕ ಚಿಕ್ಕ ಘಟನೆಗಳು ಎಷ್ಟೋ ಇವೆ.

ಬೆಳಿಗ್ಗೆಯಿಂದ ಹತ್ತು ಸಲ ಕಾಲ್ ಮಾಡಿದೆ, ಅದೆಷ್ಟೋ ಮೆಸೇಜ್‌ಗಳನ್ನು ಕಳಿಸಿದೆ. ಈಗ ಸಂಜೆಯಾದ ಮೇಲೆ ನನ್ನ ನೆನಪಾಯ್ತ ನಿಂಗೆ?' ಎಂದು ಅವನು ಅವಳ ಮೇಲೆ ರೇಗಾಡಿದ. ಕಾರಣ ಏನೆಂದು ಕೇಳುವ ಸಂಯಮ ಕೂಡ ತೋರಲಿಲ್ಲ. ಸಂಬಂಧದಲ್ಲಿ ಬಿರುಕು ಬಂತು.

ಹಾಸ್ಟೆಲ್‌ನಲ್ಲಿದ್ದು ಎಂಜಿನಿಯರಿಂಗ್ ಮಾಡುತ್ತಿದ್ದ ಸುಮತಿ ನೀನು ಫೇಸ್‌ಬುಕ್ಕಿನಲ್ಲಿ ಎಲ್ಲ ಗೆಳತಿಯರ ಫೋಟೋ ಲೈಕ್ ಮಾಡುತ್ತೀಯ, ನನ್ನದ್ದನ್ನು ಬಿಟ್ಟು. ನಾನಂದರೆ ನಿನಗೆ ಹೊಟ್ಟೆಕಿಚ್ಚು' ಎಂದು ತನ್ನ ಹಾಸ್ಟೆಲ್ ಕೊಠಡಿಗಾತಿಯ ಜೊತೆ ಜಗಳ ಮಾಡಿ ಅವರ ಸ್ನೇಹವೇ ಕೊನೆಯಾಯಿತು.

ದಿನವೂ ತನ್ನ ಸ್ಟೇಟಸ್ ಮೆಚ್ಚುತ್ತಿದ್ದ ತನ್ನ ಗೆಳೆಯ, ಈಗ ಯಾಕೆ ನನ್ನ ಸ್ಟೇಟಸ್‌ಗಳ ನೋಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಅವನು ಏನೇನೋ ಯೋಚಿಸಿ ಖಿನ್ನತೆಗೊಳಗಾದ.

ಪರೀಕ್ಷೆ ಹತ್ತಿರ ಬಂದಂತೆ, ಶಾಂತ ಮನಸ್ಸಿನಿಂದ ಕುಳಿತು ಓದುವ ಬದಲು. ಸಿಲೆಬಸ್ ತುಂಬಾ ದೊಡ್ಡದಿದೆ, ಪಾಸಾಗುವುದಾದರೂ ಹೇಗೆ?' ಎಂಬ ಯೋಚನೆ ಮಾಡುತ್ತಲೇ ಕಾಲ ಕಳೆದ. ಪರೀಕ್ಷೆ ಬಂತು. ಒತ್ತಡದಿಂದ ತಲೆ ನೋವು ಶುರುವಾಯಿತು. ಪರೀಕ್ಷೆಯಲ್ಲಿ ಫೇಲ್ ಆದ.

ತಾನು ಇಷ್ಟು ಕೆಲಸ ಮಾಡಿದರೂ ಮ್ಯಾನೇಜರ್ ಬೈದನಲ್ಲ. ಎಂದು ಅವನು ಖಿನ್ನತೆಗೊಳಗಾದ. ಆಫೀಸಿಗೆ ಬರುವುದೇ ಅವನಿಗೆ ನರಕ ಎನಿಸಿತು. ಕಾರ್ಪೋರೆಟ್ ಬದುಕು ಬೇಡ ಅನಿಸಿತು. ಏನೇನೋ ಆಲೋಚನೆಗಳು ಬಂದು, ಚಿಕ್ಕ ವಯಸ್ಸಿನಲ್ಲೇ ಮಾನಸಿಕ ಕಾಯಿಲೆಗೆ ತುತ್ತಾದ.

ತನ್ನ ಪ್ರಿಯತಮ ಯಾವುದೋ ಹುಡುಗಿಯ ಜೊತೆ ಸಲಿಗೆಯಿಂದ ಮಾತನಾಡುತ್ತಿದ್ದುದನ್ನು ನೋಡಿದ ಅವಳ ಮನಸ್ಸಲ್ಲಿ ಹತ್ತಾರು ಅನುಮಾನಗಳು ತಲೆಯಲ್ಲಿ ಬಂದವು. ಅವನ ಮುಂದೆ ಹತ್ತಾರು ಪ್ರಶ್ನೆಗಳನ್ನಿಟ್ಟಳು. ಏನೂ ತಪ್ಪು ಮಾಡದ ಅವನು ಕ್ರೋಧಿತನಾದ. ಅವರ ಸಂಬಂಧ ಅನುಮಾನಗಳ ಸಂತೆಯಾಯಿತು.

ಈ ಮೇಲಿನ ಕೆಲ ಉದಾಹರಣೆಗಳನ್ನು ನೋಡಿದರೆ, ಆಧುನೀಕರಣ ಮತ್ತು ಇಂದಿನ ಶಿಕ್ಷಣ ಕ್ರಮ ಇವಕ್ಕೆ ಮುಖ್ಯ ಕಾರಣ ಎಂದನಿಸುತ್ತದೆ. ನರ್ಸರಿಯಿಂದಲೇ ಮಕ್ಕಳಲ್ಲಿ ಸ್ಪರ್ಧೆಯ ಬೀಜ ಬಿತ್ತುತ್ತಿದ್ದಾರೆ . ಜೀವನ ಓಟ' ಎಂದು ಮಂದೆಯಲ್ಲಿ ಎಲ್ಲರನ್ನೂ ಓಡಿಸುತ್ತಿದ್ದಾರೆ. ಗೆದ್ದವನಿಗೆ ಬಹುಮಾನ. ಒಡಲಾಗದೆ ದಣಿದು ಕೂತ, ಎಡವಿ ಬಿದ್ದ ಇನ್ನೂ ಬೆಳೆಯದ ಮೊಗ್ಗುಗಳು ಅಲ್ಲಲ್ಲೇ ಚಿವುಟಿ ಹೋಗುತ್ತಿವೆ. ಪರಿಣಾಮವೆಂಬಂತೆ ಬೆಳೆಯುತ್ತ ಕೆಲ ಮಕ್ಕಳು ತಮ್ಮ ಮೇಲೆ ತಾವೇ ವಿಶ್ವಾಸ ಕಳೆದುಕೊಂಡು ದುರ್ಬಲರಾದರೆ, ಇನ್ನು ಹಲವರು ಸಂಕುಚಿತ ಮನೋಭಾವದಿಂದ ಸ್ವಾರ್ಥಿಗಳಾಗುತ್ತಿದ್ದಾರೆ. ಹೆಚ್ಚಿನ ಪಾಲಕರಲ್ಲಿ ತಮ್ಮ ಮಕ್ಕಳೇ ಶಾಲೆಯಲ್ಲಿ ಮೊದಲಿರಬೇಕೆಂಬ ಹಂಬಲ. ತಮ್ಮ ಮಕ್ಕಳು ಬದುಕುವುದನ್ನು ಕಲಿತು, ಸಮಾಜಕ್ಕೆ ಆಸ್ತಿಯಾಗಬೇಕೆಂಬ ಆಲೋಚನೆಯನ್ನು ಈಗಿನ ಪಾಲಕರು ಮಾಡುತ್ತಿಲ್ಲ. ಹೀಗೆ ಒಂದು ಕಡೆ ಮನೆಯಲ್ಲಿ, ಮತ್ತೊಂದು ಕಡೆ ಶಾಲೆಯಲ್ಲಿ ಒತ್ತಡವನ್ನು ಅನುಭವಿಸುತ್ತ ಮಗು ತನ್ನ ಸ್ವಂತಿಕೆ, ಮಾನಸಿಕ ಸ್ಥೈರ್ಯ, ನಂಬಿಕೆ, ಬದುಕುವ ಧೈರ್ಯ ಎಲ್ಲವನ್ನೂ ಕಳೆದುಕೊಂಡು ಬಿಡುತ್ತದೆ. ಬೆಳೆವ ಸಿರಿ ಮೊಳಕೆಯಲ್ಲಿ' ಎಂಬಂತೆ ಅದೇ ರೀತಿ ಬೆಳೆಯುತ್ತ ಹೋಗುತ್ತದೆ.

ಯಾಕೆ ಹೀಗೆ?
ಇನ್ನು ಇಂದಿನ ಆಧುನಿಕ ಯುಗದಲ್ಲಿ ಅವಿಷ್ಕಾರಗಳು ಜಾಸ್ತಿಯಾಗುತ್ತ ಹೋದಂತೆ ನಮ್ಮ ತಾಳ್ಮೆ ಕಡಿಮೆಯಾಗುತ್ತ ಹೋಗುತ್ತಿದೆ. ಕ್ಷಣದಲ್ಲಿ ನಮಗೆ ಎಲ್ಲವೂ ಬೇಕು. ಕಂಪ್ಯೂಟರ್, ಸ್ಮಾರ್ಟ್ ಫೋನ್‌ಗಳ ದಾಸರಾಗುತ್ತ ಸಾಮಾಜಿಕ ಸ್ಪಂದನೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೇವಾ? ಎಲ್ಲದರಲ್ಲೂ ಅತಿ ವೇಗ. ಆಲೋಚಿಸುವ ವ್ಯವಧಾನವಿಲ್ಲ. ಬೇರೆಯವರು ಹೇಳಿದ್ದನ್ನು ಕೇಳುವ ಸಂಯಮವಿಲ್ಲ. ಪರಿಣಾಮವೆಂಬಂತೆ ದೈನಂದಿನ ಜೀವನದಲ್ಲಿ, ಏನೂ ಇರದ ಚಿಕ್ಕ ಚಿಕ್ಕ ವಿಷಯಗಳು ಮನಸ್ಸನ್ನು ಒತ್ತಡಕ್ಕೀಡು ಮಾಡುತ್ತಿವೆ. ಇಂತಹ ಸಣ್ಣ ಸಣ್ಣ ಕಾರಣಗಳಿಂದ ಮಾನಸಿಕ ರೋಗಗಳಿಗೆ ತುತ್ತಾಗುತ್ತಿರುವ ಎಷ್ಟೋ ಯುವಕ ಯುವತಿಯರನ್ನು ನಾವು ಸುತ್ತಮುತ್ತ ನೋಡುತ್ತಿದ್ದೇವೆ. ಇದರ ಪರಿಣಾಮ ಆ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲಷ್ಟೇ ಅಲ್ಲದೆ, ವ್ಯಕ್ತಿಯ ಕುಟುಂಬ ಮತ್ತು ಸಮಾಜದ ಮೇಲೂ ಆಗುತ್ತಿದೆ ಎಂದರೆ ತಪ್ಪಲ್ಲ.

ಇದಕ್ಕೆ ಪರಿಹಾರ ಏನು?
* ಉತ್ತಮ ಓದು, ಧ್ಯಾನ, ಯೋಗ, ಶುದ್ಧ ಮತ್ತು ನಿಯಮಿತ ಆಹಾರ, ಸತ್ಸಂಗಗಳು ದುರ್ಬಲ ಮನಸ್ಸನ್ನು ಗಟ್ಟಿಗೊಳಿಸಿ ಬದುಕಿನಲ್ಲಿ ಹೊಸ ಹುಮ್ಮಸ್ಸನ್ನು ನೀಡುತ್ತವೆ. ಸಾಧನೆಯ ಮಾರ್ಗದಲ್ಲಿ ನಮ್ಮನ್ನು ಕೊಂಡೊಯ್ಯುತ್ತವೆ. ನಮ್ಮ ಮನಸ್ಸಿನ ಭಾವನೆಗಳ ಮೇಲೆ ನಮಗೆ ನಿಯಂತ್ರಣ ಬರುವಂತೆ ಮಾಡುತ್ತವೆ.

* ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುವುದರ ಜತೆಗೆ ಇತರರಿಗೆ ಚಿಕ್ಕ ಪುಟ್ಟ ಸಹಾಯ, ಸೇವೆ ಮಾಡುವುದರಿಂದ ನಾವು ಸದಾ ಉಲ್ಲಾಸದಿಂದ ಇರುತ್ತೇವೆ. ಅಲ್ಲದೇ ಸಾಮಾಜಿಕ ಮನ್ನಣೆಯೂ ಇರುತ್ತದೆ.

* ಶಾಲಾ-ಕಾಲೇಜು ಕ್ಯಾಂಪಸ್‌ಗಳು ತೀವ್ರ ಸ್ಪಧೆ, ದ್ವೇಷ, ಅಸೂಯೆ ಮೂಡಿಸುವ ತಾಣಗಳಾಗಬಾರದು. ಅದರ ಬದಲಾಗಿ ಸ್ನೇಹ ಪ್ರೀತಿಯೊಂದಿಗೆ ಒಬ್ಬರ ಕೈ ಒಬ್ಬರು ಹಿಡಿದು ನಡೆಯುವ ಭಾವೈಕ್ಯ ವಾತಾವರಣ ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣಗೊಳ್ಳಬೇಕು.

* ಬದುಕಲ್ಲಿ ಏನನ್ನೂ ಮಾಡಲಾಗುವುದಿಲ್ಲ. ನಮ್ಮ ಕೈಯಲ್ಲಿ ಸಾಧ್ಯವಿಲ್ಲ ಎಂಬ ಹತಾಶೆ ಸಲ್ಲದು. ಕೈ ಇಲ್ಲದೆಯೂ ಅದ್ಭುತ ಚಿತ್ರ ಬಿಡಿಸುವ, ಕಾಲಿಲ್ಲದಿರೂ ಈಜುವಂಥ, ಕಷ್ಟದ ಕೋಟೆಯಲ್ಲಿದ್ದರೂ ಅನ್ಯರ ಬಾಳಿಗೆ ಬೆಳಕಾದಂಥ ಛಲವಾದಿಗಳ, ಸಜ್ಜನರ ಜೀವನ ನಮ್ಮಲ್ಲಿ ಸ್ಪೂರ್ತಿ ತುಂಬಲಿ.

No comments:

Post a Comment