Tuesday 5 February 2013

ಮೌನ ಬಂಗಾರ


ಆಕೆ ಮಾತನಾಡಲು ಶುರು ಮಾಡಿದರೆ ಎಕ್ಸ್ಪ್ರೆಸ್ ರೈಲಿನಂತೆ. ಒಂದು ಮಾತೂ ಅವಳ ಮನಸ್ಸಿನಲ್ಲಿ ನಿಲ್ಲುವುದಿಲ್ಲ. ಇದ್ದಿದ್ದು ಇಲ್ಲದ್ದು ಎಲ್ಲ ಸೇರಿಸಿ ದೊಡ್ಡ ಕಥೆ ಹೇಳುವುದು ಅವಳ ಅಭ್ಯಾಸ. ಕೆಲವರು "ಆಲ್ ಇಂಡಿಯಾ ರೇಡಿಯೋ" ಎಂದೂ, ಮತ್ತೆ ಕೆಲವರು "ಹರಕು ಬಾಯಿ ಸುಬ್ಬಿ" ಎಂದೂ ಹೆಸರು ಇಟ್ಟಿದ್ದರು ಅವಳಿಗೆ. ಹಾಗೆಂದು ಸ್ವಭಾವತಃ ಆಕೆ ಒಳ್ಳೆಯ ಹುಡುಗಿಯೇ. ಏನು ಮಾತನಾಡಬೇಕು, ಏನು ಹೇಳಬಾರದು, ಯಾವ ಸಂದರ್ಭದಲ್ಲಿ ಹೇಗಿರಬೇಕು ಎನ್ನುವ ಪರಿಜ್ಞಾನ ಅವಳಲ್ಲಿಲ್ಲ. ಅದೇ ಅವಳಿಗೆ ಮಾರಕವಾಯಿತು. ಅದರಿಂದ ಎಷ್ಟೋ ಸಂಬಂಧಗಳು ಮುರಿದು ಹೋದವು. ಎಷ್ಟೋ ಜನ ಅವಳ ಬಳಿ ಮಾತನಾಡುವುದನ್ನು ಕೂಡ ನಿಲ್ಲಿಸಿಬಿಟ್ಟರು. ಕೊನೆಗೆ ಆಕೆ ಒಂಟಿಯಾಗಿದ್ದಳು.

ಈ ನಿದರ್ಶನ ನೋಡುವಾಗ ನಮಗೆ ಮೌನದ ಮಹತ್ವ ಅರಿವಾಗುತ್ತದೆ. ಹಲವು ಸ್ನೇಹ, ಸಂಬಂಧಗಳು ಮಾತಿನಿಂದ ಶುರುವಾಗುತ್ತವೆ. ಆದರೆ ಅತಿ ಮಾತಿನಿಂದ ಅವೆಷ್ಟೋ ಸಂಬಂಧಗಳು ಮುರಿಯುತ್ತವೆ. ಯೋಚನೆ ಮಾಡದೇ ಬಾಯಿಂದ ತಪ್ಪಿ ಹೊರಬರುವ ಕೆಲವು ಮಾತುಗಳು ಬೀರುವ ಪರಿಣಾಮಗಳು ಬಹಳ ಗಹನವಾದುವು. ಅದಕ್ಕೆ ಹಿರಿಯರು ಹೇಳಿದ್ದು- "ಮಾತು ಆಡಿದರೆ ಹೋಯಿತು, ಮುತ್ತು ಉದುರಿದರೆ ಹೋಯಿತು", "ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು", "ಮಾತು ಬೆಳ್ಳಿ, ಮೌನ ಬಂಗಾರ" ಎಂದೆಲ್ಲ. ನಮ್ಮ ದೈನಂದಿನ ಜೀವನದಲ್ಲೇ ತಪ್ಪಿ ಬಾಯಿಂದ ಬಂದ ಮಾತಿಂದ ಆಗುವ  ಹಲವು ಅನಾಹುತಗಳನ್ನು ಕೇಳುತ್ತಿರುತ್ತೇವೆ:

  • ವಧುವಿನ  ಕಡೆಯವರು ಏನೋ ಜಂಭ ಕೊಚ್ಚಿಕೊಂಡರೆಂದು ವರನ ಕುಟುಂಬದವರಿಗೆ ಕೋಪ ಬಂದು ಮದುವೆಗಳು ಮುರಿದು ಬೀಳುವುದು.
  • ಸೊಸೆ ಅಧಿಕ ಪ್ರಸಂಗ ಮಾಡಿದಳೆಂದು ಅತ್ತೆ, ಸೊಸೆ ಜಗಳವಾಗಿ ಅವರ ಕುಟುಂಬ ವಿಭಜನೆಯಾಗುವುದು.
  • ರಾಜಕಾರಣಿಯೊಬ್ಬ ಯೋಚನೆ ಮಾಡದೇ ಏನೋ ಹೇಳಿಕೆ ಕೊಟ್ಟು ತನ್ನ ವರ್ಚಸ್ಸನ್ನೇ ಕಳೆದುಕೊಳ್ಳುವುದು.
  • ತನ್ನ ಬಗ್ಗೆ ಯಾರಲ್ಲೋ ಗೆಳೆಯ ಚಾಡಿ ಹೇಳಿದ ಎಂದು ತಿಳಿದು ಸ್ನೇಹ ಮುರಿದು ಬೀಳುವುದು.
  • ಆಪ್ತ  ಸಂಬಂಧಿಕನೊಬ್ಬ ತಾನು ಹೇಳಿದ ಗುಟ್ಟನ್ನು ಬೇರೆಯವರಿಗೆ ಹೇಳಿದ ವಿಷಯ ತಿಳಿದು ಸಂಬಂಧದಲ್ಲಿ ಬಿರುಕು ಬರುವುದು.
ಹೀಗೆ ಒಂದಲ್ಲ, ಎರಡಲ್ಲ.  ಉತ್ಸಾಹದಲ್ಲೋ, ಕೊಪದಲ್ಲೋ ತಿಳಿದೋ, ತಿಳಿಯದೆಯೋ  ಆಡಿದ ಒಂದು ಮಾತಿನಿಂದಾಗುವ ಇಂತಹ ಘಟನೆಗಳು  ಅವೆಷ್ಟೋ. ಒಮ್ಮೆ  ಮಾತನಾಡಿ ಆಮೇಲೆ ಎಷ್ಟು ಪಶ್ಚಾತ್ತಾಪ ಪಟ್ಟರೂ, ಕ್ಷಮೆ ಕೇಳಿದರೂ ನಾವಾಡಿದ ಮಾತನ್ನು ವಾಪಸ್ ತೆಗೆದುಕೊಳ್ಳುವುದು ಅಸಾಧ್ಯ. ಸಂಬಂಧಗಳನ್ನು ಉಳಿಸಿಕೊಂಡು ಹೋಗಲು ಹಲವು ಸಲ ಮೌನವೇ ಮಾರ್ಗ ಅನಿಸುತ್ತದೆ. ನೂರಾರು ಮಾತಾಡಿ, ಅವರು ಹೇಗೆ  ಅಂದುಕೊಂಡರೋ, ನಾನು ತಪ್ಪಾಗಿ ಮಾತನಾಡಿದೆನೇನೋ, ಆತುರದಲ್ಲಿ ಹೇಳಿಬಿಟ್ಟೆ ಎಂದೆಲ್ಲ ಎಷ್ಟೋ ಬಾರಿ ಯೋಚಿಸುತ್ತೇವೆ. ಇದರಿಂದ ಮನಸ್ಸಲ್ಲಿ ಕಿರಿಕಿರಿ, ಉದ್ವೇಗ ಉಂಟಾಗಿ ಎಷ್ಟೋ ಜನರಿಗೆ ಮಾನಸಿಕ ಪರಿಣಾಮ ಕೂಡ ಬೀರುತ್ತದೆ. ಇಂತಹ ಎಲ್ಲ ಸಮಸ್ಯೆಗಳಿಂದ ದೂರ ಇರುವ ದಾರಿ ಎಂದರೆ- ಹಿತ ಮಿತವಾದ ಮಾತು. ಒಂದು ಮಾತನಾಡುವಾಗ ಹತ್ತು ಸಲ ಯೋಚನೆ ಮಾಡಿ ಮಾತನಾಡುವುದು ಒಳಿತು. ಹಲವಾರು ಸಂದರ್ಭಗಲ್ಲಿ ಮುಖದ ಮೇಲೊಂದು  ಕಿರುನಗೆಯೊಂದಿಗೆ, ಮೌನವಾಗಿರುವುದೇ ಉತ್ತಮ. 

No comments:

Post a Comment