Tuesday 19 March 2013

ಸ್ತ್ರೀ ಎಂದರೆ...


ಗೋಧೂಳಿಯ ಶುಭ ಮುಹೂರ್ತದಲ್ಲಿ, ತಂಗಾಳಿಯ ಚಾಮರದ ನಡುವೆ, ಊರ ದೇವಸ್ಥಾನದ ಬಯಲು ಕಲ್ಯಾಣ ಮಂಟಪದಲ್ಲಿ ಅವಳ ಮದುವೆ. ಶ್ಯಾಮರಾಯರ ಮನಸಲ್ಲಿ  ಮಗಳು  ಗೌರವಾನ್ವಿತ, ಶ್ರೀಮಂತ ಮನೆತನದ ಸೊಸೆಯಾದಳು ಎಂಬ ಸಂತೋಷ ಒಂದೆಡೆಯಾದರೆ, ಮನೆಯ ಸಂತೋಷದ ಹೊನಲಾಗಿದ್ದ, ಇನ್ನೂ ಚಿಕ್ಕ ಮಗುವಂತೆ ಇದ್ದ ಒಬ್ಬಳೇ ಮಗಳು ಗೌರಿ ತಮ್ಮನ್ನು ಬಿಟ್ಟು ಒಂದು ಸಂಸಾರದ ಜವಾಬ್ದಾರಿ ಹೊತ್ತು, ಗೊತ್ತಿಲ್ಲದ ಊರಿಗೆ ಹೋಗುತ್ತಿದ್ದಾಳೆಂಬ ದುಃಖ, ತಳಮಳ ಮತ್ತೊಂದೆಡೆ. ಆದರೂ ಮನಸ್ಸು ಗಟ್ಟಿ ಮಾಡಿಕೊಂಡು ಕನ್ಯಾದಾನದ ಕಾರ್ಯ ಮುಗಿಸುತ್ತಾರೆ. "ಊರಿನಲ್ಲಿಯೇ ಅದ್ದೂರಿ ಮದುವೆ" ಎಂದು ಜನ ಮಾತನಾಡಿಕೊಳ್ಳುತ್ತಿರುವುದನ್ನು ಕೇಳಿ ಹಿಗ್ಗುತ್ತಾರೆ. ಶ್ಯಾಮರಾಯರೆಂದರೆ ಊರಿಗೇ ಹೆಸರುವಾಸಿ. ದೊಡ್ಡ ಕಿರಾಣಿ ವ್ಯಾಪಾರಿ. ಸಮಾಜ ಸೇವೆಯ ಕಾರ್ಯದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡ ಸಜ್ಜನರು. ಅಂದ ಮೇಲೆ ಮದುವೆ ಎಷ್ಟು ಅದ್ದೂರಿ ಇದ್ದಿರಬೇಕೆಂದು ಮತ್ತೆ ಹೇಳಬೇಕೇ.! ಬಂದವರೆಲ್ಲಾ ಅದ್ದೂರಿ ಭೋಜನವನ್ನು ಮುಗಿಸಿ ತೇಗುತ್ತ, ಮನಸ್ಪೂರ್ತಿಯಾಗಿ ವಧು ವರರನ್ನು ಆಶೀರ್ವದಿಸಿ ಹೊರಟರು. 

ವಿದಾಯದ ಸಮಯ. ಅಷ್ಟು ಹೊತ್ತು ದುಃಖವನ್ನು ಎದೆಯೊಳಗೆ ಒತ್ತಿ ಹಿಡಿದುಕೊಂಡಿದ್ದ ಶ್ಯಾಮರಾಯರು ಇನ್ನು ತಡೆದುಕೊಳ್ಳಲಾಗದೇ ಮಗಳನ್ನು ತಬ್ಬಿಕೊಂಡು ಅತ್ತು ಬಿಟ್ಟರು. ತಾಯಿಯಿಲ್ಲದ ಮಗುವಿಗೆ ಅವರೇ ಎಲ್ಲಾ. ಮಗಳನ್ನು ಬಿಟ್ಟರೆ ಬೇರೆ ಲೋಕವಿಲ್ಲ ಶ್ಯಾಮರಾಯರಿಗೆ. ಆಮೇಲೆ ಹಾಗೆಯೇ ಸುಧಾರಿಸಿಕೊಂಡು- " ಇನ್ನು ನಿನ್ನ ಗಂಡನ ಮನೆ ನಿನಗೆ ಸರ್ವಸ್ವ. ಅದು ನಿನ್ನ ಕುಟುಂಬ. ಕಷ್ಟವೋ, ಸುಖವೋ ಹೊಂದಾಣಿಕೆ ಮಾಡಿಕೊಂಡು ಇರಬೇಕು. ಈ ಮನೆಯನ್ನು ಬೆಳಗಿದ್ದೀಯ. ಆ ಮನೆಯನ್ನು ಕೂಡ ಬೆಳಗುವ ದೀಪವಾಗಬೇಕು. ನನ್ನ ಬಗ್ಗೆ ಆಲೋಚನೆ ಬೇಡ. ನಾನು ಇಲ್ಲಿ ಆರಾಮವಾಗಿ ಇರುತ್ತೇನೆ" ಎಂದು ಹೇಳುವಷ್ಟರಲ್ಲಿ ಗೌರಿಯ ದುಃಖದ ಕಟ್ಟೆ ಒಡೆದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಅವಳನ್ನು ಸಮಾಧಾನ ಪಡಿಸಿ ಕಾರಿನಲ್ಲಿ ಕೂರಿಸಿ ವಿದಾಯ ಹೇಳಿದ್ದಾಯಿತು. ಅಲ್ಲಿಂದ ಗೌರಿಯ ಹೊಸ ಬಾಳಿನ ಆರಂಭ. 

ಒಂದು ವಾರ ಕಳೆಯಿತು. ಶ್ಯಾಮರಾಯರೋ, ಅತ್ತ ಇತ್ತ ಗೆಜ್ಜೆ ಶಬ್ದ ಕೇಳಿದರೂ ಗೌರಿ ಇರಬೇಕು ಎಂದು ಥಟ್ಟನೆ ಏಳುತ್ತಿದ್ದರು. ಯಾರು ಮಾತನಾಡಿದರೂ ಮಗಳು ಮಾತನಾಡಿದಂತೆ ಅನಿಸಿ ಒಂದು ಕ್ಷಣ ವಿಚಲಿತರಾಗುತ್ತಿದ್ದರು. ಈ ಬೇಸರ ಕಳೆಯಲು ವ್ಯಾಪಾರದ ಕೆಲಸ, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ಜಾಸ್ತಿ ತೊಡಗಿಸಿಕೊಂಡರು. ತಿಂಗಳು ಕಳೆಯಿತು. ಹಬ್ಬಕ್ಕೆಂದು ಮಗಳು ಅಳಿಯ ಮುಂದಿನ ವಾರ ಮನೆಗೆ ಬರುವವರಿದ್ದರು. ಶ್ಯಾಮರಾಯರು ಆ ಸಂಭ್ರಮದಲ್ಲಿ ಎಲ್ಲ ಮರೆತು ಹಾರಾಡುತ್ತಿದ್ದಾರೆ. ಅದೆಂಥ ರಾಜ ಸತ್ಕಾರ ಮಾಡಬೇಕು ಎಂದು ಅವರಿಗೇ ತಿಳಿಯದಾಗಿದೆ. ಅಂತೂ ಇಂತೂ ವಾರ ಕಳೆಯಿತು. ಮಗಳು, ಅಳಿಯಂದಿರಿಗೆ ರಾಜೋಪಾಚಾರ. "ಬಹಳ ಚೆನ್ನಾಗಿದ್ದೇನೆ. ಗಂಡ ಬಹಳ ಒಳ್ಳೆಯವನು. ಅತ್ತೆ ಮಾವಂದಿರು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಾನು ಆ ಮನೆಯಲ್ಲಿ ರಾಣಿಯ ಥರ ಇದ್ದೇನೆ." ಎಂದು ಮಗಳು ಹೇಳಿದ ಮೇಲಂತೂ ಕೇಳಬೇಕೆ ಶ್ಯಾಮರಾಯರ ಖುಷಿ!" ಮತ್ತಷ್ಟು ಸತ್ಕಾರ. ಚೀಲಗಟ್ಟಲೆ ಧಾನ್ಯ, ತರಕಾರಿಗಳನ್ನು ತುಂಬಿ ಮಗಳನ್ನು ಕಳುಹಿಸಿದ್ದಾಯಿತು. ತನ್ನ ಮಗಳು ಒಳ್ಳೆ ಕಡೆ ಸೇರಿದಳೆಂಬ ಖುಷಿಯ ಜೊತೆ ತಾನು ದೊಡ್ಡ ಸಾಧನೆ ಮಾಡಿದೆನೆಂಬ ಹೆಮ್ಮೆ ಶ್ಯಾಮರಾಯರ ಮನದಲ್ಲಿ. 

ಆರು ತಿಂಗಳುಗಳು ಕಳೆದಿದ್ದವು. ನವರಾತ್ರಿಯ ಸಮಯ. ಸಾಯಂಕಾಲ ದೇವಿ ಪೂಜೆ ಮಾಡಿಸಿ ಮನೆಗೆ ಬಂದಿದ್ದರಷ್ಟೇ. ಗೌರಿಯ ಗಂಡ ನರೇಶ ಹೊಟ್ಟೆ ನೋವೆಂದು ಕಿರುಚಲಾರಂಭಿಸಿದ. ಅವನ ಆ ರೂಪ ನೋಡಿ ಗೌರಿ ಕಂಗಾಲಾಗಿದ್ದಳು. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಯಿತು. ಏನು ನಡೆಯುತ್ತಿದೆ ಎಂದೇ ಗೌರಿಗೆ ತಿಳಿಯದಾಗಿತ್ತು. ಗೌರಿಯ ಮಾವ ವೈದ್ಯರೊಡನೆ ಗಹನವಾದ ಸಮಾಲೋಚನೆಯಲ್ಲಿ ತೊಡಗಿದ್ದರು. ಎರಡು ದಿವಸ ಅಡ್ಮಿಟ್ ಮಾಡಿಸಿ ಸರಿಯಾದ ಮೇಲೆ ಮನೆಗೆ ಬಂದರು." ಅಪೆಂಡಿಕ್ಸ್ ತೊಂದರೆ, ಸರಿಯಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ" ಎಂದು ಮಾವ ಹೇಳಿದ ಮೇಲೆ  ಗೌರಿ ಸ್ವಲ್ಪ ಸುಧಾರಿಸಿಕೊಂಡಳು. ದಿನ ಕಳೆದವು. ನರೇಶನಿಗೆ ಈ ತೊಂದರೆಗಳು ಆಗಾಗ ಬರುತ್ತಿದ್ದವು. ಗೌರಿಯೋ, ಗುಣವಾಗುತ್ತದೆಂಬ ಧೈರ್ಯದಿಂದ ಗಂಡನ ಉಪಚಾರದಲ್ಲಿ ಮಗ್ನಳಾಗಿದ್ದಳು. ನರೇಶ ಎಲ್ಲ ಉತ್ಸಾಹ ಕಳೆದುಕೊಂಡಿದ್ದ. ಪಾಪ, ಗೌರಿಗೆ ವೈವಾಹಿಕ ಜೀವನದ ಸುಖವೂ ದೂರದ ಮಾತಾಗಿ ಹೋಯಿತು. ಗಂಡನಿಗೆ ಬೇಗ ಗುಣವಾಗಲಿ ಎಂದು ಎಲ್ಲೆಲ್ಲೋ ಹರಕೆ ಹೊತ್ತಳು. ಏನೋ ಶನಿ ಇರಬಹುದು. ಒಂದೆರಡು ತಿಂಗಳಲ್ಲಿ ಸರಿಯಾಗಿ ಮತ್ತೆ ನಾವು ಸುಖ ಜೀವನ ನಡೆಸುವುದು ಖಂಡಿತ ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದಳು. ಅಪ್ಪನಿಗೆ ಹೇಳಿದರೆ ಮತ್ತೆ ತಲೆ ಕೆಡಿಸಿಕೊಳ್ಳುತ್ತಾರೆಂದು ಅವರಿಗೂ ಹೇಳಲು ಹೋಗಲಿಲ್ಲ. ತಿಂಗಳುಗಳು ಉರುಳಿದವು. ಯಾವುದೇ ಸುಧಾರಣೆಗಳು ಕಾಣಲಿಲ್ಲ. ಗೌರಿ ಮಾವನ ಬಳಿ ಹೋಗಿ-" ಹೀಗೆ ಸರಿಯಾಗುವಂತೆ ಕಾಣುವುದಿಲ್ಲ. ಆಪರೇಶನ್ ಆದರೂ ಮಾಡಿಸೋಣ" ಎಂದಿದ್ದಕ್ಕೆ ಮಾವ-" ನಿನಗೆ ವೈದ್ಯರಿಗಿಂತ ಜಾಸ್ತಿ ಗೊತ್ತಿದೆಯೇ. ಅವರು ಗುಣ ಆಗುತ್ತದೆಂದು ಹೇಳಿದ್ದಾರಲ್ಲ. ಸ್ವಲ್ಪ ಸಮಾಧಾನವಿರಲಿ" ಎಂದು ಸಿಡುಕಿ, ಮತ್ತೊಂದು ಮಾತಾಡದೇ ಒಳಗೆ ಹೋದರು. ಗೌರಿಗೆ ಏನು ಮಾಡುವುದೆಂದೇ ತೋಚದಾಯಿತು. ಕೊನೆಗೆ ಅಪ್ಪನ ಬಳಿಯಾದರೂ ಒಮ್ಮೆ ಹೋಗಿ ಮಾತನಾಡಿ ಬರುವುದೆಂದು ತೀರ್ಮಾನಿಸಿ ಬ್ಯಾಗ್ ತಯಾರು ಮಾಡುತ್ತಿರುವಾಗ ಅದೆಲ್ಲೋ ಕಪಾಟಿನ ಮೂಲೆಯಲ್ಲಿ ನರೇಶನ ರಿಪೋರ್ಟ್ ಸಿಕ್ಕಿತು. ಗೌರಿಗೆ ಅದನ್ನು ಓದಿ 
ತಿಳಿದುಕೊಳ್ಳುವಷ್ಟು ಜ್ಞಾನವಿಲ್ಲ. ಏನೇ ಆಗಲಿ ಎಂದು ಅದನ್ನೂ ಬ್ಯಾಗಿನೊಳಗೆ ಹಾಕಿ ಎರಡು ದಿನಗಳ ಮಟ್ಟಿಗೆ ತವರಿಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟಳು. 

ಅಚಾನಕ್ಕಾಗಿ ಮಗಳು ಬಂದದ್ದು ನೋಡಿ ಶ್ಯಾಮರಾಯರಿಗೆ ಖುಷಿ, ಆಶ್ಚರ್ಯ ಎರಡೂ ಒಟ್ಟಿಗೆ ಆದವು. ಗೌರಿ ತಡ ಮಾಡದೇ ಎಲ್ಲ ವಿಷಯಗಳನ್ನು ಅಪ್ಪನಿಗೆ ಹೇಳಿದಳು. ರಿಪೋರ್ಟ್ ಕೂಡ ಕೊಟ್ಟಳು. ಸಾಯಂಕಾಲ ಆ ರಿಪೋರ್ಟ್ ತೆಗೆದುಕೊಂಡು ಅವರು ಪರಿಚಯದ ವೈದ್ಯರ ಬಳಿ ಹೋದರು. ಆಗ ವೈದ್ಯರು ಹೇಳಿದ ವಿಷಯ ಇವರ ಮೈ ನಡುಗಿಸಿತ್ತು. ನರೇಶನ ಎರಡೂ ಕಿಡ್ನಿಗಳು ಫೇಲ್ ಆಗಿ, ಕಿಡ್ನಿ ಟ್ರಾನ್ಸಪ್ಲಾಂಟ್ ಶಸ್ತ್ರಚಿಕಿತ್ಸೆ ಆಗಿ ಒಂದು ವರ್ಷ ಕಳೆದಿತ್ತಷ್ಟೆ. "ಇದರ ಪರಿಣಾಮ ನಿಧಾನವಾಗಿ ಗೊತ್ತಾಗುತ್ತದೆ. ಯಾವುದೇ ಧೈರ್ಯವಿಲ್ಲ. ಸರಿಯಾದರೆ ಅದೃಷ್ಟ. ಆದರೂ ಇಂತಹ ಶಸ್ತ್ರಚಿಕಿತ್ಸೆಗಳು ಸಫಲವಾಗುವುದು ಬಹಳ ವಿರಳ. ಅಂದ ಹಾಗೇ ಇದು ಯಾರದ್ದು.?" ಎಂದು ವೈದ್ಯರು ಹೇಳಿದೊಡನೆಯೇ ಶ್ಯಾಮರಾಯರು ಒಂದೇ ಒಂದು ಮಾತನಾಡದೇ ಮಗಳನ್ನು ಕರೆದುಕೊಂಡು ಅಲ್ಲಿಂದ ಎದ್ದು ನಡೆದರು. "ಈ ಕೂಡಲೇ ಹೊರಡೋಣ ನಿನ್ನ ಗಂಡನ ಮನೆಗೆ. ಅವರು ಮೋಸ ಮಾಡಿದರು ನಮಗೆ. ಅದರಿಂದ ನಿನ್ನ ಬಾಳು ಹಾಳಾಯಿತು. ಬೇಡ ಆ ಗೋಳು ನಿನಗೆ. ವಿಚ್ಛೇದನಕ್ಕೆ ಅರ್ಜಿ ಹಾಕೋಣ. ನೀನು ಅಲ್ಲಿ ಕಷ್ಟ ಪಡುವುದನ್ನು ನನಗೆ ಊಹಿಸಲೂ ಸಾಧ್ಯವಿಲ್ಲ" ಎಂದು ಮಗಳಿಗೆ ಹೇಳಿದರು. ಒಂದು ಕ್ಷಣ ಮೌನವಾಗಿದ್ದ ಗೌರಿ- "ಎಂಥ ಮಾತಾಡುತ್ತೀರಿ ಅಪ್ಪ. ಅವರು ಮೋಸವನ್ನೇ ಮಾಡಿದ್ದಿರಬಹುದು ಸರಿ. ಆದರೆ ಅದಕ್ಕೋಸ್ಕರ ನಾನು ಗಂಡನನ್ನು ಬಿಟ್ಟು ಬರುವುದೇ. ಎಲ್ಲಾದರೂ ನಾನು ಮದುವೆಯಾದ ನಂತರ ಆವರಿಗೆ ಈ ಕಾಯಿಲೆ ಬಂದು ಆಪರೇಶನ್ ಆಗಿದ್ದರೆ ನೀವು ಇದೇ ಮಾತನ್ನು ಹೇಳುತ್ತಿದ್ದಿರೆ? ಕಷ್ಟವೋ ,ಸುಖವೋ. ನನಗೆ ವಿಚ್ಚೇದನ ಬೇಡ. ಅವರು ಸರಿಯಾಗುವರೆಂಬ ನಂಬಿಕೆ ನನಗಿದೆ. ಈಗ ನೀವು ಬರುವುದು ಬೇಡ. ತಪ್ಪು ಬರೀ ಅವರದಷ್ಟೇ ಎಂದು ಹೇಳುವಿರೆ? ಒಳ್ಳೆಯ ಸಂಬಂಧ, ಒಳ್ಳೆಯ ಮನೆತನ ಎಂದು ನೀವು ನೋಡಿದಿರಿ. ಶ್ರೀಮಂತಿಕೆ ನೋಡಿದಿರಿ. ಆದರೆ ಎಲ್ಲದಕ್ಕಿಂತ ಮುಖ್ಯ ಆರೋಗ್ಯ. ಅದರ ಬಗ್ಗೆ ನೀವು ವಿಚಾರಣೆ ನಡೆಸಿದಿರೆ? ಶ್ರೀಮಂತರು ಎಂದು ತಿಳಿದೊಡನೆಯೇ ಹಿಂದೆ ಮುಂದೆ ನೋಡದೆ ಥಟ್ಟಂತ ನಿರ್ಧಾರ ತೆಗೆದುಕೊಂಡು ಬಿಟ್ಟಿರಿ. ಈಗ ಮನಸ್ಸಿನಲ್ಲಿ ಅವರ ಹೆಸರು ಬರೆದಾಗಿದೆ. ಅದನ್ನು ಅಳಿಸುವುದು ಅಷ್ಟು ಸುಲಭ ಎಂದುಕೊಂಡಿರೆ? " ಎಂದು ತನ್ನ ಮನೆಗೆ ಹೊರಡಲು ಅನುವಾದಳು.

ಮನಸ್ಸಲ್ಲಿ ಧೈರ್ಯ ತುಂಬಿಕೊಂಡಳು. ಯಾರ ಮೇಲೂ ಸಿಡುಕಿ ಪ್ರಯೋಜನವಿಲ್ಲ. "ನಮ್ಮ ಕೈಯ್ಯಲ್ಲಿ ಏನೂ ಇಲ್ಲ. ಬದುಕು, ಸಾವು ಅವನ ಕೈಯ್ಯಲ್ಲಿರುವುದು. ಎಲ್ಲಾ ಸರಿ ಇದ್ದವನೂ ಕೂಡ ಅಪಘಾತವಾಗಿ ಒಂದೇ ಕ್ಷಣದಲ್ಲಿ ಸಾಯಬಹುದು. ಅವರಿಗಿಂತ ಮೊದಲೇ ನಾನೇ ಸಾಯಬಹುದು. ಬದುಕಿರುವವರೆಗೆ ಪ್ರೀತಿ ಹಂಚಿಕೊಂಡು ಬದುಕುವುದೇ ನಿಜವಾದ ಜೀವನ. ಯಾರದು ತಪ್ಪು, ಯಾರದು ಸರಿ ಎಂದು ತಿಳಿಯಲು ಹೋದರೆ ಮನೆ ಕೋರ್ಟ್ ಆಗುತ್ತದೆ. ಜೀವನ ಜೈಲಾಗುತ್ತದೆ." ಎಂಬ ಆಲೋಚನೆಗಳು ಅವಳಲ್ಲಿ ಮೂಡಿ ಆ ರೀತಿಯಲ್ಲಿ ಬದುಕಲು ಅಣಿಯಾದಳು. ಗೌರಿಗೆ ಎಲ್ಲ ವಿಷಯಗಳು ತಿಳಿದವೆಂದು ಅತ್ತೆ ಮಾವಂದಿರಿಗೆ ಗೊತ್ತಾಯಿತು. ಆದರೂ ಅವಳು ಯಾರ ಮೇಲೂ ಸಿಟ್ಟಾಗದೆ ಹಿಂದಿನಂತೆಯೇ ಗಂಡನ ಸೇವೆಯಲ್ಲಿ ತೊಡಗಿರುವುದನ್ನು ನೋಡಿ ಎಲ್ಲರಿಗೂ ಅವಳ ಮೇಲಿದ್ದ ಪ್ರೀತಿ,ಗೌರವ ಇಮ್ಮಡಿಯಾಯಿತು. ಅವಳು ಆ ಮನೆಯ ಮಗಳಾಗಿ ಬಿಟ್ಟಳು. ಏನೇ ಆದರೂ ನರೇಶನ ಆರೋಗ್ಯದಲ್ಲಿ ಗಣನೀಯವಾದ ಯಾವುದೇ ಸುಧಾರಣೆಗಳು ಕಾಣಲಿಲ್ಲ. ಈ ವಿಷಯದಲ್ಲಿ ವೈದ್ಯರು ಕೂಡ ಕೈಚೆಲ್ಲಿ ಆಗಿತ್ತು. ಆದರೂ ಮತ್ತೇನೇನೋ ಚಿಕಿತ್ಸೆಗಳನ್ನು ಕೊಡಿಸಿ ಪ್ರಯತ್ನ ಪಟ್ಟಿದ್ದಾಯಿತು. ಹಾಗೆಯೇ ಅವರ ಮದುವೆಯಾಗಿ ಒಂದು ವರ್ಷ ಕೂಡ ಮುಗಿದಿತ್ತು. ಹತ್ತು ಹಲವು ಕನಸುಗಳನ್ನು ಹೊತ್ತು ಹೊಸ ಜೀವನಕ್ಕೆ ಕಾಲಿಟ್ಟಿದ್ದ ಗೌರಿ, ತಾನು ಕೊನೆಯ ಬಾರಿ ಎಂದು ನಕ್ಕಿದ್ದೆ ಎಂಬುದನ್ನೂ ಮರೆತಿದ್ದಳು. ಅಂದು ಅವಳ ಮದುವೆಯ ವಾರ್ಷಿಕೋತ್ಸವ. ಕಾಫಿ ತೆಗೆದುಕೊಂಡು ಗಂಡನ ಬಳಿ ಬಂದರೆ- ಅವಳು ಕಂಡಿದ್ದು ಅವನ ಆತ್ಮರಹಿತ ದೇಹ. ಅವನ ಅಧ್ಯಾಯದ ಅಂತ್ಯ. ಗೌರಿ ಸ್ತಬ್ಧಳಾಗಿದ್ದಳು. ಅವಳ ಆಸೆ, ಕನಸು ನಂಬಿಕೆಗಳೆಲ್ಲ ನುಚ್ಚುನೂರಾಗಿದ್ದವು. ಶವ ಸಂಸ್ಕಾರ ಮುಗಿಯಿತು. ಗೌರಿ ಮೌನಿಯಾಗಿಬಿಟ್ಟಳು. ಶ್ಯಾಮರಾಯರು ಗೌರಿಯ ಅತ್ತೆ ಮಾವಂದಿರ ಮೇಲೆ ಸೇಡು, ಕೋಪದಿಂದ ತುಂಬಿದ ದೃಷ್ಟಿಯನ್ನು ಬೀರಿ, ಗೌರಿಯನ್ನು ಕರೆದುಕೊಂಡು ಮನೆಗೆ ಹೋಗಿದ್ದಾಯಿತು. ಅವರ ಎದೆಯಲ್ಲಿ ಸೇಡಿನ ಜ್ವಾಲೆಯೇ ಉರಿಯುತ್ತಿತ್ತು. ಆದರೆ ಏನುಪಯೋಗ. ಮಗಳು ವಿಧವೆಯಾಗಿ ಆಗಿದೆ. 

ತಿಂಗಳು ಕಳೆಯಿತು. ಗೌರಿಗೆ ಮತ್ತೊಂದು ಮದುವೆ ಮಾಡಬೇಕು. ಮನೆ ಅಳಿಯನನ್ನು ತರಬೇಕು. ಸಮಯ ನೋಡಿ ಈ ಬಗ್ಗೆ ಅವಳಲ್ಲಿ ಮಾತಾಡಬೇಕೆಂಬ ಆಲೋಚನೆಗಳೆಲ್ಲ ಶ್ಯಾಮರಾಯರ ಮನಸ್ಸಿನಲ್ಲಿ ಹುಟ್ಟಿದ್ದವು. ಆದರೆ ಗೌರಿಯ ಮಾನಸಿಕ ಸ್ಥಿತಿ ಚೂರೂ ಸರಿಯಿರಲಿಲ್ಲವೆಂಬುದೂ ಅವರಿಗೆ ಗೊತ್ತಿತ್ತು. ಮತ್ತೊಂದು ಮದುವೆ ಮಾಡಿದ ಮೇಲಾದರೂ ಸರಿಯಾದರೆ ಆಗಲಿ ಎಂದು ಆ ದಿನ ಶ್ಯಾಮರಾಯರು ಆ ವಿಷಯದ ಬಗ್ಗೆ ಪ್ರಸ್ತಾಪ ಇಟ್ಟೇ ಬಿಟ್ಟರು. ಇಷ್ಟು ದಿನ ಮೌನದ ಒಡತಿಯಾಗಿದ್ದ ಗೌರಿ ಈ ಮಾತು ಕೇಳಿದೊಡನೆಯೇ ಮುರಿದು ಬಿದ್ದಳು. ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಅಪ್ಪನ ತೋಳಿನಲ್ಲಿ ಮಲಗಿ- " ನನ್ನಿಂದ ಇದು ಸಾಧ್ಯವಿಲ್ಲ. ನಿಮ್ಮೆಲ್ಲರ ಪಾಲಿಗೆ ನರೇಶ ಸತ್ತಿರಬಹುದು. ಆದರೆ ನನ್ನ ಮನದಲ್ಲಿ ಅವನು ಸದಾ ಜೀವಂತ. ಎಲ್ಲವನ್ನೂ ಅವರಿಗೆ ಸಮರ್ಪಿಸಿ ಆಗಿದೆ. ನೀವೇ ಹೇಳಿದ್ದಿರಿ.  ಇನ್ನು  ಗಂಡನ ಮನೆಯೇ ಸರ್ವಸ್ವ. ಅದನ್ನು ಬೆಳಗುವ ಜ್ಯೋತಿಯಾಗು ಎಂದು. ಆ ಮನೆಯನ್ನು ಕತ್ತಲಲ್ಲಿ ಬಿಟ್ಟು ನಾನು ಬೇರೊಬ್ಬನನ್ನು ಮದುವೆಯಾಗುವುದು ಧರ್ಮವೇ. ಒಂದು ವರ್ಷ ಅವರೊಡನೆ ಬದುಕಿಯೇ ನಾನು ಅವರಲ್ಲಿ ಇಷ್ಟು ಲೀನಳಾಗಿದ್ದೇನೆ. ಇನ್ನು ಅವರನ್ನು ಹೆತ್ತು, ಹೊತ್ತು ಬೆಳೆಸಿದ ಅತ್ತೆ ಮಾವರ ಶೋಕ ಅದೆಂಥದ್ದಾಗಿರಬಹುದು! ಬರೀ ಅವರ ಹೆಂಡತಿ ಎಂಬಷ್ಟಕ್ಕೆ ಆ ಮನೆಯಲ್ಲಿ ನನ್ನ ಸಂಬಂಧ ಸೀಮಿತವಲ್ಲ. ಅತ್ತೆ ಮಾವನ ಸೊಸೆ ನಾನು. ಆ ಮನೆಯ ಒಂದು ಕಣ್ಣು. ಒಂದು ಕಣ್ಣು ಹೋಯಿತೆಂದು , ನಾನೂ ಹೋಗಿ ಮನೆಯನ್ನು ಕುರುಡು ಮಾಡಿ ಬಿಡುವುದೇ? ಮದುವೆ ಎಂದರೆ ಅರ್ಥ ಇದೇ ಏನು? ನೀವೇ ಹೇಳಿ ಅಪ್ಪ. ಇಂದು ಹೊರಡುತ್ತಿದ್ದೇನೆ ನನ್ನ ಮನೆಗೆ" ಎಂದಳು. ಶ್ಯಾಮರಾಯರ ಬಾಯಿಂದ ಒಂದು ಮಾತೂ ಹೊರಡಲಿಲ್ಲ.

ಗೌರಿ ಸ್ವಲ್ಪ ಸುಧಾರಿಸಿಕೊಂಡಿದ್ದಳು. ಮಗಳಂತೆ ಅತ್ತೆ ಮಾವರನ್ನು ನೋಡಿಕೊಂಡು ಮಗನಿಲ್ಲದ ದುಃಖವನ್ನು ಮರೆಸಿದಳು. ಕತ್ತಲಾಗಿದ್ದ ಆ ಮನೆಗೆ ಮತ್ತೆ ಬೆಳಕು ಹರಿದಂತಾಗಿತ್ತು. ತನ್ನ ದುಃಖವನ್ನು ಮನದೊಳಗೆ ಬಚ್ಚಿಟ್ಟು, ಪ್ರೀತಿಯ ಹೊಳೆ ಹರಿಸಿದಳು. ತನ್ನ ಕಾಲಿನ ಮೇಲೆ ತಾನು ನಿಲ್ಲಬೇಕೆಂದು ಹೊಸ ಉದ್ಯೋಗಕ್ಕೆ ಸೇರಿಕೊಂಡಳು. ಮನಸ್ಸಿನ ಕಾಮನೆಗಳನ್ನು ಹತೋಟಿಯಲ್ಲಿಡಲು ಆಧ್ಯಾತ್ಮದ ಮೊರೆ ಹೋದಳು. ಅಷ್ಟು ಕಿರಿಯ ವಯಸ್ಸಿನಲೀಯೇ ಸಾಧ್ವಿಯಾಗಿ ಬಿಟ್ಟಳು."ಮದುವೆ" ಎಂಬುದರ ನಿಜವಾದ ಅರ್ಥವನ್ನು ಅವಳ ಜೀವನ ಎತ್ತಿ ತೋರುತ್ತಿತ್ತು.  ಒಂದು ದಿನ ಬೆಳಿಗ್ಗೆ ಗೌರಿ ಕೈತೋಟದಲ್ಲಿ ಗಿಡಕ್ಕೆ ನೀರು ಹಾಕುತ್ತಿದ್ದಳು. ಮನೆಯ ಗೇಟಿನ ಬಳಿ ಶ್ಯಾಮರಾಯರು ಬಂದದ್ದನ್ನು ನೋಡಿ- " ಅಪ್ಪಾ" ಎಂದು ಓಡಿ ಹೋಗಿ ಜೋರಾಗಿ ತಬ್ಬಿಕೊಂಡಳು. ಶ್ಯಾಮರಾಯರು ಮಗಳನ್ನು ನೋಡಿ- "ನಿನ್ನನ್ನು ಮಗಳಾಗಿ ಪಡೆದಿದ್ದಕ್ಕೆ ನಾನು ಸಾರ್ಥಕನಾದೆ. ನೀನು ನನ್ನ ಮಗಳಲ್ಲ. ತಾಯಿ. ಮುಂದಿನ ಜನ್ಮ ಎಂದಿದ್ದರೆ ನೀನೇ ನನ್ನ ಮಗಳಾಗಿ ಹುಟ್ಟಬೇಕು. ಸಂಸಾರ ಬೆಳಗುವ ದೀಪವಾಗು ಎಂದು ನಿನಗೆ ಹೇಳಿದ್ದೆ. ನೀನು ಬರಿಯ ದೀಪವಲ್ಲ. ಯಾವ ಬಿರುಗಾಳಿಗೂ ಆರದ ಅನವರತ ಬೆಳಗುತ್ತಿರುವ ನಂದಾದೀಪ." ಎನ್ನುವಷ್ಟರಲ್ಲಿ ಮನೆಯೊಳಗೆ ಫೋನ್ ರಿಂಗಣಿಸುತ್ತಿತ್ತು. " ಅಪ್ಪ, ಒಳಗೆ ಬನ್ನಿ" ಎಂದು ಹೇಳುತ್ತಾ ಫೋನ್ ಕರೆ ತೆಗೆದುಕೊಳ್ಳಲು ಒಳಗೆ ಓಡಿದಳು.ಫೋನ್ ಎತ್ತಿದರೆ - "ಆದಷ್ಟು ಬೇಗ ಬನ್ನಿ. ನಿನ್ನ ಅಪ್ಪನಿಗೆ ಹೃದಯಾಘಾತ ಆಗಿ ಪರಿಸ್ಥಿತಿ ಗಂಭೀರವಿದೆ"- ಎಂಬ ಮಾತುಗಳು. ಕೇಳಿದವಳು, ಅಲ್ಲೇ ಕುಸಿದುಬಿದ್ದಳು.

3 comments:

  1. ತುಂಬಾ ಚೆನ್ನಾಗಿದೆ ಕಥೆ... ಜೀವನದಲ್ಲಿ ಬರುವ ಘಟನೆಗಳು ಮನುಷ್ಯನನ್ನು ಫ್ರೌಡತೆಗೆ ತಳ್ಳುತ್ತದೆ.

    ReplyDelete
  2. ಮದುವೆ ನಿಜವಾದ ಅರ್ಥ ತಿಳಿಸಿದ್ದರೂ ಗೌರಿಯ ಆತ್ಮಸ್ಥೈರ್ಯ ಮೆಚ್ಚುವಂತದ್ದೇ..! ನಮ್ಮ ಈಗಿನ ಯುವತಿಯರು ಪಾನಿಪೂರಿ ಕೊಡಿಸಲಿಲ್ಲವೆಂದು ಸಣ್ಣಪುಠ್ಠ ಕಾರಣಕ್ಕೆ ವಿಚ್ಛೇದನಕ್ಕೆ ಅರ್ಜಿ ಹಾಕುವವರು ಇದನ್ನೊಮ್ಮೆ ಓದಿ ತಿಳಿಯಬೇಕು.

    ReplyDelete
  3. ಪರೇಶಣ್ಣ ಎಷ್ಟು ಸುಂದರವಾಗಿ ಕಥೆ ನೇಯುತ್ತೀರಿ ಮಾರಾಯ್ರೆ. ನಾನು ಅನ್ಯಾಯಕ್ಕೆ ಸಿಲುಕಿ ದುರಂತ ನಾಯಕಿಯಾಗಬಹುದೆಂದುಕೊಂಡಿದ್ದ ಗೌರಿ ಹೊಳೆಯುವ ನಕ್ಷತ್ರವಾದಳು. ಒಂದು ಭಾರತೀಯ ನಾರಿಯ ಮನದಾಳವನ್ನು ಹೊಕ್ಕು ಅಲ್ಲಿಯೇ ಕೂತು ಹೊಸೆದ ಕಥೆ ಇದು. ಬಹಳ ಚೆನ್ನಾಗಿದೆ, ಹಿಡಿಸಿತು :)

    - ಪ್ರಸಾದ್.ಡಿ.ವಿ.

    ReplyDelete