Saturday 12 November 2011

ಸಾಕ್ಷರ ಭಾರತವು ಎಷ್ಟು ಚೆಂದ!!!

                                       

ಅಕ್ಷರದ ಅರಿವಿಲ್ಲ, ಸಾಕ್ಷರಳು ಇವಳಲ್ಲ
ರಟ್ಟೆ ಬಲದಲಿ ಇವರ ಬದುಕ ಯಾತ್ರೆ
ಇಲ್ಲವೊಂದು ಆಲಯವು, ಸಿಕ್ಕ ಸೂರಿನ ಕೆಳಗೆ
ಅಲ್ಪ ತೃಪ್ತಿಯ ಬಾಳು, ಇವರ ಗೋಳು
"ನಮಗೇಕೆ ಈ ಪಾಡು, ಯಾವ ಪಾಪಕೆ ಶಾಪ"
ಎಂಬ ಪ್ರಶ್ನೆಯು ಎಂದೂ ಕಾಡುತಿರಲು
ವಿದ್ಯೆ ಮನುಜಕೆ ಬೇಕು, ಬುದ್ಧಿ ಇದ್ದರೆ ಬಾಳು
ಇಲ್ಲದಿರೆ ಮನುಜನದು ಕತ್ತೆ ಪಾಡು
"ನಾನಂತೂ ಕಲಿತಿಲ್ಲ, ಹಣದ ಸವಲತ್ತಿಲ್ಲ
ಜೋಳಿಗೆಯ ಒಳಗೆ ಎಂಟಾಣೆ ಇಹುದು
ಹಳೆಯ ರವಿಕೆಯ ಜೊತೆಗೆ ಹರಕು ಸೀರೆಯನುಟ್ಟು
ಜೀತ ಕೆಲಸವ ಮಾಡಿ ಜೀವವಿಹುದು
ನನ್ನಂತ ಕಷ್ಟವದು ನನ್ನ ಮಗಳಿಗೆ ಬೇಡ
ಕಷ್ಟಗಳ ಸರಪಳಿಯು ಮುರಿಯಲಿಲ್ಲೇ
ಎಷ್ಟೇ ಕಷ್ಟವು ಬರಲಿ, ರಕ್ತ ಬೆವರಲಿ ಬರಲಿ
ಕಂದನಾ ಓದಿನಲಿ ಕುಂದು ಬರದು"
ಎಂದೆನುತ ಶಾಲೆಗೆ ಕಲಿಸಿದಳು ಮಗಳನ್ನು
ತನ್ನ ಕಷ್ಟ ಸುಖವ ಪಕ್ಕಕಿಟ್ಟು
ತನ್ನ ಬೆವರೆಣ್ಣೆಯನು ಲೆಕ್ಕಿಸದೆ ಎರೆದಳು
ಸುಜ್ಞಾನ ದೀವಿಗೆಯ ಬೆಳಗಲೆಂದು
ಎಲ್ಲ ಪಾಲಕರಲ್ಲಿ ಇಂಥ ಪ್ರಜ್ಞೆಯು ಬರಲಿ
ಮಕ್ಕಳನು ಕೂಲಿಗೆ ಕಳಿಸರೆಂದು
ಚಿಕ್ಕ ಮಕ್ಕಳ ಹೆಜ್ಜೆ ಶಾಲೆ ಬಾಗಿಲಿನತ್ತ
ಸಾಕ್ಷರ ಭಾರತವು ಎಷ್ಟು ಚೆಂದ!!!

No comments:

Post a Comment