Thursday 24 November 2011

ಲೋಕಪಾಲನ ಹುಡುಕಾಟದಲಿ.......






ಗರುಡ ಗಮನನ, ಗೋಪಿ ನಾಥನ 
ಹುಡುಕಿ ಹೊರಟೆ ಕನಸಲಿ 
ಗುಡಿಯ ಬಾಗಿಲ ಕದವ ತಟ್ಟುತ
ಕರೆದೆ ಗಂಟೆಯ ಸದ್ದಲಿ 
ಕೋಟಿ ಮೈಲಿ ದೂರ ನಡೆದೆನು 
ಅವನ ರೂಪವ ಗೃಹಿಸುತ
ವಿಶ್ವರೂಪನ ನೋಡೋ ಆಸೆಯು 
ಮನದ ಗೂಡಲಿ ಸಂತತ
ಕನಸಿಂಗಳದ್ಹೊರಗೆ ಬರಲು 
ಹರಿಯ ಕಾಣುವ ತವಕವು
ಅವನನೆಲ್ಲಿ ಹುಡುಕಲೆಂದು 
ಮನವ ಕೇಳೆ ಮರುಕವು 
ಬಾಳ ತುಂಬಾ ಹುಡುಕಿ ಬೆಂದೆ
ಕಾಣದಿರುವಾ ಹರಿಯನು 
ನಿನಗೆ ತಿಳಿಯದೆ ನಿನ್ನ ಆತ್ಮದಿ
ಅವನು ಲೀನ ಆಗಿರುವನು 
ಎಲ್ಲರಾತ್ಮದಿ ಅವನು ಇರುವ 
ಅದ ನೋಡೋ ನಯನವ ಪಡೆಯೋ ನೀ 
ಎಲ್ಲ ಕಡೆಯೂ ಹುಡುಕಿ ಬಂದೆ ನೀ 
ನಿನ್ನೊಳಗೆ ಹುಡುಕಲಿಲ್ಲವೋ 
ನೀರು ಝರಿಯಲಿ, ಭತ್ತ ತೆನೆಯಲಿ 
ಉರಿವ ಜ್ಯೋತಿಯಲಿರುವನು 
ನೀನು ಮಾಡುವ ಒಳ್ಳೆ ಕಾರ್ಯದಿ 
ಮನದ ಕಣ್ಣಿಗೆ ಕಾಣ್ವನು
ಅಣ್ಣ ಬಸವನು ಕಂಡ ಅವನನು
ತಾನು ಮಾಡುವ ಕಾರ್ಯದಿ 
ಹಿರಣ್ಯಕಷ್ಯಪನ ಎದುರು ಬಂದ 
ಅವನ ಮನೆಯ ಕಂಬದಿಂ  
ನಿನ್ನ ಸಜ್ಜನ ಭಾವದಲ್ಲಿ 
ಹುದುಗಿರುವನು ಆ ದೇವನು
ದುರುಳತನದಾ ದೆವ್ವ ಬರಲು
ಎದ್ದವನು ಸೆದೆ ಬಡಿವನು
ಅಂತರಂಗದ ಶುದ್ಧಿ ಮಾಡಿ
ಲೋಕಪಾಲನ ಕಾಣುವ 
ಎಲ್ಲ ಜೀವದಿ ಅವನ ಕಾಣುತ
ಮೋಕ್ಷ ಪಥದಲಿ ಸಾಗುವ.... 








No comments:

Post a Comment