Wednesday 30 November 2011

ವಿವಾಹೋತ್ಸವ............





ಚೆಂಡು ಮಲ್ಲಿಗೆ ಹೂವ ಕಂಪದುವೆ ಘಮ್ಮೆಂದು 
ನಾಸಿಕದ ತುದಿಗದುವೆ ಬಡಿಯುತಿರಲು 
ಅತ್ತರಿನ ಪರಿಮಳವು ಮೃದುವಾಗಿ ಅಲ್ಲಿಲ್ಲಿ
ಅಂದದನುಭವವನ್ನು ನೀಡುತಿರಲು

ಮನೆ ತುಂಬಾ ತೋರಣವು, ಹಸಿರೆಲೆಯ 
ಚಪ್ಪರವು, ಎಲ್ಲೆಲ್ಲೂ ಗೊಂಡೆಯಾ  ಹಾರವಿರಲು 
ಅಗ್ನಿಯಾ ಕುಂಡಗಳು, ಜ್ಹಗ ಮಗಿಸೊ ದೀಪಗಳು 
ಎಲ್ಲರಲು ಉತ್ಸಾಹ ಚಿಮ್ಮುತಿರಲು 

ಮನೆಯ ಹೆಂಗಳೆಯರೆಲ್ಲ ವಿಧ ವಿಧದ ಶೈಲಿಯಲಿ 
ಮೊಳಗಟ್ಲೆ  ಸೀರೆಯಲಿ ಮಿಂಚುತಿರಲು
ರತ್ನದೊಡವೆಯಲಿ ಮುಳುಗಿ, ಚೆಂದದಂಗನೆ-
ಯರೆಲ್ಲ ಠಾಕು ಠೀಕಿನಲದುವೆ ನಡೆಯುತಿರಲು

ಖಾದ್ಯಗಳ ಪರಿಮಳವು, ಬಾಳೆಲೆಯ ಕಟ್ಟುಗಳ
ಬಂದವರು ನೋಡಿ ಬಾಯ್ ಚಪ್ಪರಿಸುತಿರಲು 
ರಂಗೋಲಿ ಚಿತ್ತಾರ, ಮನೆಯ ಹಸಿಯಂಗಳದಿ
ಚೆಲುವಿನಲಿ ನೃತ್ಯವನು ಮಾಡುತಿರಲು

ವೈದಿಕರ ಮಂತ್ರದೊಡೆ, ವಾಲಗದ ಸದ್ದಿನಲಿ
ಹಿರಿಯರೆಲ್ಲರ ಎದುರು,ಅಗ್ನಿಯಾ ಸಾಕ್ಷಿಯಲಿ
ಎರಡಾತ್ಮ ಒಂದಾಗೋ ಸಮಯವಿದುವು 
ಹೊಚ್ಚ ಹೊಸ ಜೀವನದ ಉದಯವಿದುವು....



No comments:

Post a Comment