Thursday 1 December 2011

ಲಂಚದಾ ಮಂಚದಲಿ ಅತ್ಯಾಚಾರಿ...


ಲಂಚದಾ ಮಂಚದಲಿ 
ಹಾ ಎಂದು ಬಾಯ್ತೆರೆದು
ಕಾಯುತ್ತ ಕುಳಿತಿರುವ
ದುರುಳನೋ ನೀನು
ದೇಶದಾ ಪ್ರಜೆಗಳಾ
ಸುಲಿಗೆಯನು ಮಾಡುತಲಿ
ಕಿತ್ತು ತಿನ್ನುತಲಿರುವೆ ಅವರ
ಕರುಳನ್ನು ನೀನು
ನಿನ್ನ ಹಾಸಿಗೆ ಕೆಳಗೆ
ನಮ್ಮ ನೋಟಿನ ಕಂತೆ
ಗೊತ್ತಿದ್ದೂ ನಾಚದೆಯೇ
ಮಲಗಿರುವೆಯ?
ಬಡವನಾ ಹೊಟ್ಟೆಗೆ
ಬರೆಯನ್ನು ಎಳೆಯುತಲಿ
ಇನ್ನೆಷ್ಟು ಮನೆಗಳನು
ಕಟ್ಟಿಸುವೆಯ?
ನಿನ್ನ ಅರಮನೆಯ ಅಡಿ
ನಮ್ಮ ಬೆವರಿನ ಹನಿಯು,
ನಿನಗಲ್ಲಿ ಪನ್ನೀರ
ಅಭಿಷೇಕವೋ ?
ನಮ್ಮ ಚಪ್ಪಲಿ ಸವೆಸಿ
ಬಂದ ಆ ಹಣದಲ್ಲಿ
ನಿನಗೆ ರತ್ನಗಂಬಳಿಯ
ಸನ್ಮಾನವೋ?
ನೋಟಿನಾ ಮೂಟೆಯಲೇ
ಮನೆಯನ್ನು ಕಟ್ಟಿರುವೆ
ರಾಜ ವೈಭೋಗದಲಿ
ಮೆರೆಯುತಿರುವೆ.
ಸಣ್ಣ ಕಿಡಿಯದುವೊಂದು
ನಿನ್ನರಮನೆಯನು ಸೋಕೆ
ನಿನ್ನ ದಹನದಿ
ಲೋಕ ಕಲ್ಯಾಣವು.....
 












No comments:

Post a Comment