Thursday 22 December 2011

ಹೆಣ್ಣ ಕಣ್ಣಿನಲಿ ಮೂರ್ತವೆತ್ತ ಕನಸುಗಳು




ಕಾಡಿಗೆಯು ಅಂಚಿನಲಿ,
ಚೂಪಾದ ರೆಪ್ಪೆಗಳು 
ಪಟ ಪಟನೆ ಬಡಿಯುತಿರೆ 
ತೆಪ್ಪಗದುವು 
ನಯನದೊಳು ಅಡಗಿರುವ 
ಕನಸುಗಳ ಮೂಟೆಯದು
ಅತ್ತಿತ್ತ ಕುಣಿಯುತಿದೆ 
ಸಪ್ಪಗದುವು 

ಕನಸಿನಾ ಹಾದಿಯಲಿ 
ಚೆಂದದರಮನೆ ಇಹುದು 
ಅದರೊಳಗೆ ಒಬ್ಬನಿಹ 
ಯುವರಾಜನು 
ಕಣ್ಣಲ್ಲಿ ಕಣ್ಣಿಟ್ಟು 
ಪ್ರೀತಿಯಾ ಸೆಲೆ ಹರಿಸಿ 
ಬಾಳ ಹಸನಾಗಿಸೋ 
ತರುಣನಿಹನು

ಕಾಲದಾ ತೆಕ್ಕೆಯಲಿ 
ಬಾಳಿನಾ ರೆಕ್ಕೆಯಡಿ 
ವರುಣನವ ನೀರೆರೆಚೆ 
ಕನಸ ಮೇಲೆ 
ಜಾರುವಾ ಬಂಡಿಯಾ 
ಮೇಲೆ ಕುಳಿತಿಹ ಅವಳು 
ಧೊಪ್ಪೆಂದು ಜಾರುವಳು  
ಆಯ ತಪ್ಪಿ 

ಹೆಣ್ಣಿನಾ ಮನವದುವು 
ದೀಪದಾ ಹುಳದಂತೆ 
ನಾಜೂಕಿನಿಂದಲಿ ಗೆಲ್ಲಬಹುದು 
ಆತುರದಿ ಕೈ ಹಾಕಿ 
ಹಿಡಿಯ ಹೊರಟರೆ ಅದುವು
ಬೆಂಕಿಯಾ ಮೇಲೆಗರಿ 
ಸುಡುಕೊಂಬುದು

ತಾಳ್ಮೆ ಸಹನೆ ತ್ಯಾಗ 
ಮೂರ್ತವೆತ್ತರೂ ಹೆಣ್ಣು 
ಒಳಗೆ ಕನಸುಗಳಾ
ಕೋಟೆ ಇಹುದು 
ಆ ಕೋಟೆ ಬೇಧಿಸುವ 
ರಾಜ ಸಿಕ್ಕರೆ ಆಗ 
ಅವಳ ಸಂತಸಕದುವೆ
ಎಲ್ಲೆ ಇರದು...

1 comment:

  1. ಭೇಷ್ ಪರೇಶ್, ಬೆಳಕಿಂಡಿಯ ಮಗದೊಂದು ಪ್ರಯತ್ನ ಸೂಕ್ಷ್ಮ ವಿಷಯಗಳ ಸುತ್ತ ಸುತ್ತುತ್ತಾ ಮನಸೂರೆಗೊಳ್ಳುತ್ತದೆ..:))) ಹೆಣ್ಣಿನ ಮನಸ್ಸು ಮತ್ತು ಕನಸೊಳಗಿನ ಸೂಕ್ಷ್ಮಗಳನ್ನು ಅದ್ಭುತವಾಗಿ ಕವಿತೆಯ ರೂಪಕ್ಕಿಳಿಸಿದ್ದೀರಿ.. ಹೆಣ್ಣಿನ ಮನಸ್ಸು ಅರಳುವ ಹೂವಿದ್ದಂತೆ ಆಕೆಯನ್ನು ರಮಿಸಿ, ನಗಿಸಿ, ಅಹ್ಲಾದದಿಂದಿರುವಂತೆ ನೋಡಿಕೊಂಡರೆ ಇನ್ನಷ್ಟು ಅರಳುತ್ತಾಳೆ.. ಆಕೆಯನ್ನು ಬಾಡಿಸಲು ಒಂದೆ ಒಂದು ಬಿರು ನುಡಿ ಸಾಕು.. ಎಲ್ಲಾ ಸೂಕ್ಷ್ಮಗಳನ್ನು ಅತೀ ಸೂಕ್ಷ್ಮವಾಗಿ ಕವಿತೆಯ ಭಾವಕ್ಕೆ ಒಗ್ಗಿಸಿರುವ ನಿಮ್ಮ ಪ್ರಯತ್ನ ಶ್ಲಾಘನೀಯ..:)))
    ತಾಳ್ಮೆ ಸಹನೆ ತ್ಯಾಗ
    ಮೂರ್ತವೆತ್ತರೂ ಹೆಣ್ಣು
    ಒಳಗೆ ಕನಸುಗಳಾ
    ಕೋಟೆ ಇಹುದು
    ಆ ಕೋಟೆ ಬೇಧಿಸುವ
    ರಾಜ ಸಿಕ್ಕರೆ ಆಗ
    ಅವಳ ಸಂತಸಕದುವೆ
    ಎಲ್ಲೆ ಇರದು...
    ಈ ಸಾಲುಗಳು ಹೆಣ್ಣಿನಲ್ಲಿನ ಸೂಕ್ಷ್ಮತೆಗೊಂದು ಕೈಗನ್ನಡಿ.. ಚೆಂದವಾದ ಕವಿತೆ..

    ReplyDelete