Saturday, 3 December 2011

ಯಾರು ಮುತ್ತೈದೆ?


ಹೃದಯ ಸಿಂಹಾಸನದಲವನು
ರಾರಾಜಿಸುತಿರುವ
ಕಾಣುವ,ತುಟಿಯಂಚಿನ ನಗುವಲಿ 
ಮನದಾಳದ ನೋವಲಿ 
ಕಣ್ಣಂಚಿನ ನೀರಲಿ 
ಹೊರ ಬರಲಾಗದೆ ಒದ್ದಾಡುತಿರುವ
ಒಲವಲಿ, ಮಾನಸದಲವನು
ಆರದ ನಂದಾದೀಪ 

ಕೈಯಲ್ಲಿಲ್ಲ ಹಸಿರು ಬಳೆ,ಕುಂಕುಮದ ಬೊಟ್ಟಿಲ್ಲ 
ತಾಳಿಯ ಸರವಿಲ್ಲ 
ಸಮಾಧಿಯಾಗಿರುವವವು
ಕಟ್ಟುಪಾಡುಗಳ ಹೊಂಡದಲಿ 
ಅವಳಿನಿಯನ ದೇಹದ ಜೊತೆ 
ಕಟ್ಟಿರುವಳಿವಳು ನೆನಪಿನ ಕೋಟೆ
ಗುಂಡಿಗೆಯ ಮಧ್ಯದಲಿ 
ಸಿಂಹಾಸನದಲ್ಲಿ ಕುಳಿತಿರುವನವ

ಇಲ್ಲೊಬ್ಬಳು ಗಂಡನ ದುಡ್ಡಿನ 
ಕೋಟೆಯ ಮಧ್ಯ, 
ಹೊಂಚು ಹಾಕುತಿರುವಳು ಎಲ್ಲ ಹೊಡೆಯಲು
ಆಗಿರುವಳು ಕಾಂಚಾಣಕೆ ಮದುವೆ
ಅವನಿಗಲ್ಲ, 
ಇವಳ ತಾಳಿ ಅವನ ಕತ್ತಿಗೆ ನೇಣು, 
ಅವನು ಅರ್ಧಾಂಗಿ ತೋರಿಕೆಗೆ 
"ಯಾರು ಮುತ್ತೈದೆ?"1 comment:

  1. ಬೆಳಕಿಂಡಿಯ ನವಾಬರು ಮತ್ತೊಂದು ಸಮಾಜಮುಖಿ ಧಾರೆ ಹಿಡಿದು ಬಂದಿದ್ದಾರೆ.. ಆದರೆ ಈಗ ಎಂದಿನ ಬಿರುಸು ಬಿರುಸಾದ ವಿಷಯಗಳಿಗೆ ಅಲ್ಪ ವಿರಾಮ ನೀಡಿ ಮನಸ್ಸಿನ ಸೂಕ್ಷ್ಮತೆಗಳಿಗೆ ಇಣುಕಿದ್ದಾರೆ.. ಅದ್ಭುತವಾದ ಕವಿತೆ ಪರೇಶಣ್ಣ.. ಕವಿತೆಯ ಎರಡು ಮಜಲುಗಳನ್ನು ಸಮೀಕರಿಸುವುದನ್ನು ತುಂಬ ಚೆನ್ನಾಗಿ ಸಿದ್ಧಿಸಿಕೊಂಡಿದ್ದೀರಿ.. ತನ್ನ ಗಂಡನನ್ನು ಕಳೆದುಕೊಂಡಿದ್ದರೂ ಅವನನ್ನೇ ಮನಸ್ಸಿನಲ್ಲಿ ಧ್ಯಾನಿಸುವ ಆ ಮಹಾ ಗೃಹಿಣಿ ನಿಜವಾದ ಮುತೈದೆ.. ಸಂಬಂಧಗಳು ನಾವು ಭಾವಿಸಿಕೊಂಡಷ್ಟು ಆಳವಾಗಿ ಬೇರೂರುತ್ತವೆ.. ಕೇವಲ ಹಣದೊಂದಿಗೆ ಸಂಬಂಧ ಬೆಸೆದವರಿಗೆ ಇಂತಹ ಸೂಕ್ಷ್ಮಗಳೆಲ್ಲಾ ಹೇಗೆ ಅರ್ಥವಾಗಬೇಕು.. ಮದುವೆ ಎನ್ನುವುದು ಹೆಣ್ಣಿಗೆ ಆಗಲಿ ಗಂಡಿಗೇ ಆಗಲಿ ಸಂಗಾತಿಯೊಂದಿಗೆ ಆಗಬೇಕೇ ಹೊರತು ಹಣವೇ ಸಂಗಾತಿಯಾದರೆ.. ಗಂಡನ/ಹೆಂಡತಿಯೊಂದಿಗಿನ ಸಂಸಾರ ವ್ಯಭಿಚಾರವೆನ್ನಿಸಿಕೊಂಡೀತು.. ಸೂಕ್ಷ್ಮತೆಯ ಒಳ ಹೊಕ್ಕಿರುವ ಪರಿ ತುಂಬಾ ಚೆನ್ನಾಗಿದೆ..

    ReplyDelete