Thursday 2 February 2012

ಇಳೆ-ಕೊಳೆ



ಇಳೆಯವಳು ಮೈದಳೆದು ನಿಂತಿಹಳು 
ಹೊರಗೆ ಬಿನ್ನಾಣ, ಚೆನ್ನ 
ನಗುತಿಹಳು ಎಂದಿನಂತೆ 
ತ್ಯಾಗಮಯಿ, ಎಲ್ಲರಮ್ಮ 
ಕೋಟಿ ಮಕ್ಕಳ ಹೊತ್ತು 

ತನುಜರಿವರು ಅಂಧರೇ ?
ಆಸೆಯಾ ಮಿತಿ ಮೀರಿ 
ಕಿತ್ತು ತಿನ್ನುತಿರುವರವಳ 
ಹತ್ತು ಹಲವೆಡೆಯಿಂದ
ಚಿತ್ತವೊತ್ತಿ ಹಿಡಿದಿಹಳವಳು 
ತಾಯಿಯನುರಾಗದಲಿ 

ವಿಷದನಿಲ ಹೊರಗೆಡವಿ  
ಛಿದ್ರವದು  ಪುಪ್ಪುಸವು 
ರಕ್ತವನು ಕೊಳೆ ನೀರ ಮಾಡಿರುವರು 
ಹುಟ್ಟಿದುದರದಿ ಕೆಸರ ಎರಚಾಡಿ 
ಮೆರೆಯುತಲಿ ಅಮ್ಮನನೆ
ಮೈಲಿಗೆಯ ಮಾಡಿರುವರು 

ಭುವಿ ತಾಯಿ ನರಳುತಿರೆ 
ತನ್ನೊಡಲ ಬೇಗೆಯಲಿ 
ಯಾರದೋ ಎಂಬಂತೆ ಕುಳಿತಿರುವರು
ತಾಯ ನೆರಳಲಿ ಬದುಕಿ 
ಬಯಸಿ ಅವಳಿಗೆ ಕೆಡುಕು 
ತಾನಲ್ಲವೆಂಬಂತೆ ಮಲಗಿರುವರು 

ಇಳೆಯವಳು ಮುನಿದರೆ 
ಸಕಲ ಸಂತತಿ ನಾಶ 
ಅವಳೇನೆ ನಮ್ಮಲಿಹ 
ಜೀವಕೋಶ 
ಮೂಢ ಮನುಜರು ಇವರು 
ರಾಡಿ ಮಾಡುತಲಿಹರು
ಎಂದು ನಿಲ್ಲುವುದಿವರ 
ಹುಚ್ಚು ವೇಷ??!!!!!

3 comments:

  1. ಬೆಳಕಿಂಡಿಯಿಂದ ಹೊರಟ ಮತ್ತೊಂದು ಕಿಡಿ ಚೆಂಡು ಈ ಕವಿತೆ.. ಭೂಮಿತಾಯಿಯನ್ನು ಹಂಚಿ ತಿನ್ನುತ್ತಿರುವ ಈ ನೀಚ ಮನುಜನ ಮನಸ್ಥಿತಿಯನ್ನು ಬಟಾ ಬಯಲು ಮಾಡಿದೆ ನಿಮ್ಮ ಕವಿತೆ.. ನಿಮ್ಮ ಕವಿತೆಗಳ ವೈಶಿಷ್ಠ್ಯವೇ ಅದು, ಒಂದು ಸಾಮಾಜಿಕವಾಗಿ ತುಡಿಯುವ ಮನದ ಒಂದು ನೋಟವಿರುತ್ತದೆ.. ಪ್ರಾಕೃತಿಕ ನೆಲೆಗಟ್ಟಿನಲ್ಲಿ ಗಟ್ಟಿಯಾಗಿ ನಿಲ್ಲುವ ಕವಿತೆ ಇದೆ.. ಕವಿತೆಯಲ್ಲಿ ಒಂದು ಸೂಕ್ಷ್ಮತೆ ಇದೆ, ಭೂಮಿ ತಾಯಿಯನ್ನು ಹೇಗೆಲ್ಲಾ ಕಾಡಿಸಿ, ಅವಳ ಒಡಲಿಗೆ ಬೆಂಕಿ ಹಚ್ಚಿ ಕೊಳೆಯ ಕೂಪಕ್ಕೆ ತಳ್ಳುತ್ತಿರುವ ನೀಚ ಮನಸ್ಥಿತಿಗಳಿಗೆ ವಿರುದ್ಧವಾದ ನಿಮ್ಮ ಸಾತ್ವಿಕ ಪ್ರತಿಭಟನೆಯ ಧ್ವನಿ ಮನಮುಟ್ಟುವಂತದ್ದು.. ತುಂಬಾ ಚೆನ್ನಾಗಿದೆ ಪರೇಶಣ್ಣ..:)

    ReplyDelete
  2. ಮನುಜ ಬಲು ಸ್ವಾರ್ಥಿ.
    ಭುವಿಯ ಒತ್ತೆ ಇಟ್ಟಾದರೂ ಸರಿಯೇ ತಾನು ಸುಖಿಸಬೇಕು!

    ಪರೇಶ್ ಅತ್ಯಂತ ಪರಿಸರ ಪ್ರೇಮಿ ಕಾವ್ಯ ಯತ್ನ.

    ReplyDelete
  3. ಬಹು ಅರ್ಥಪೂರ್ಣ ಕವನ.ಇಳೆಯ ಕೊಳೆಯ ತೊಳೆವ ಸಮಾಜಮುಖಿ ಆಶಯಹೊತ್ತ ಸುಂದರ ಕವಿತೆ.ಕವಿಯ ಆಲೋವನೆಯೇ ತುಂಬು ಕಾಳಜಿಯುಳ್ಳದ್ದು.ಇಷ್ಟಪಟ್ಟು ಓದಿ ಅನುಭವಿಸಿದೆ.

    ReplyDelete