Tuesday 12 June 2012

ಹನಿ ಕಥೆಗಳು




ಭಾಷಣ
=====
ಎಲ್ಲ ವೃತ್ತಿಗಳು ಸಮಾನ, ಎಲ್ಲದಕ್ಕೂ ತನ್ನದೇ ಆದ ಘನತೆಯಿದೆ ಎಂದು ಬೆಳಿಗ್ಗೆ ಭೀಷಣವಾಗಿ ಭಾಷಣ ಬಿಗಿದವ ಸಾಯಂಕಾಲ ಹೋಟೆಲ್ ನಲ್ಲಿ ವೇಟರ್ ನನ್ನು ಶಿಳ್ಳೆ ಹೊಡೆದು ಕರೆಯುತ್ತಿದ್ದ.



ಪ್ರೀತಿ??!!

======

ನಾಯಿಯನ್ನು ಮನುಷ್ಯರಂತೆ ತನ್ನದೇ ಹಾಸಿಗೆ ಮೇಲೆ ಮಲಗಿಸಿ ಸಾಕುವ ವ್ಯಕ್ತಿ, ತನ್ನನ್ನು ಮನುಷ್ಯನಾಗಿ ಮಾಡಿದ ಅಪ್ಪ ಅಮ್ಮನನ್ನು ಬೀದಿಗೆ ಹಾಕಿದ್ದ. 


ಮಜಾ-ಸಜಾ 
========
ಅಮಾಯಕನೊಬ್ಬನನ್ನು ಕಿಡಿಗೇಡಿಗಳು ಥಳಿಸುತ್ತಿದ್ದಾಗ ಮಜಾ ನೋಡುತ್ತಿದ್ದವನೊಬ್ಬ ಒಂದು ದಿನ ಮಧ್ಯ ರಸ್ತೆಯಲಿ ಏನೂ ತಪ್ಪಿಲ್ಲದೆ ಪೆಟ್ಟು ತಿಂದಿದ್ದ. ಆಗ ಗೊಣಗುತ್ತಿದ್ದ-"ಸಹಾಯಕ್ಕೆ ಬರಲು ಯಾರಿಗೂ ದಮ್ಮಿಲ್ಲವೇ?" ಎಂದು.

ಫೇಸ್ಬುಕ್ ಜ್ವರ 
=========
ಸಮಾರಂಭವೊಂದರಲ್ಲಿ ಪರಿಚಿತೆ ಯುವತಿಯೊಬ್ಬಳನ್ನು ಕಂಡ ಯುವಕನೊಬ್ಬ ಅವಳ ಅಂದಕ್ಕೆ ಮಾರು ಹೋಗಿ ಅದನ್ನು ವ್ಯಕ್ತ ಪಡಿಸಲು ಲೈಕ್ ಬಟನ್ ಹುಡುಕುತ್ತಿದ್ದ.

ಕುರುಡು ಪ್ರೀತಿ 
=========
ಅನ್ನವಿಲ್ಲದೆ ಎರಡು ದಿನ ಕಳೆದವ, ಅರ್ಧ ದಿನ ತನ್ನ ಲ್ಯಾಪ್ಟಾಪ್ ಇಲ್ಲದೆ ಹುಚ್ಚನಂತೆ ನರಳುತ್ತಿದ್ದ.

ಬುದ್ಧಿ(ಹೀನ) ಜೀವಿ
===========
ಬೇರೆಯವರ ಒಳ್ಳೆ ಕಾರ್ಯಗಳಲ್ಲಿ ತಪ್ಪು ಹುಡುಕಿ ಟೀಕಿಸುವ ಸ್ವಘೋಷಿತ ಬುದ್ಧಿ ಜೀವಿ, ಫೋರ್ಜರಿ ಕೇಸ್ ನಲ್ಲಿ ಕಂಬಿ ಎಣಿಸುತ್ತಿದ್ದ.


ಕಾಳಜಿ 
=====
ಶಾಲೆಯಲ್ಲಿ ಮೇಷ್ಟ್ರು ಕೊಟ್ಟ ಚಡಿಯೇಟಿನ ಹಿಂದಿನ ಸದುದ್ದೇಶ, ಈಗ ಮ್ಯಾನೇಜರ್ ರ ಕೃತಕ ಸಿಹಿ ಮಾತುಗಳಲ್ಲಿ ಇಲ್ಲ ಎಂದು ತಿಳಿದಾಗ ನೈಜ ಕಾಳಜಿ ಎಲ್ಲಿತ್ತೆಂದು ಅರಿವಾಗಿ ಕಾಲ ಹಿಂದೆ ಹೋಗಬೇಕೆನಿಸಿತು.


ಲೀಲೆ 
====
ಮಠದ ಹೊರಗಿನ ದೊಡ್ಡ ಸಭಾಂಗಣದಲ್ಲಿ ಪವಾಡ ಪುರುಷ ಸ್ವಾಮೀಜಿ ತಮ್ಮ ಪ್ರವಚನದಲ್ಲಿ ಕೃಷ್ಣ ಲೀಲೆಗಳನ್ನು ಹೇಳುತ್ತಿದ್ದರು.ಒಳಗೆ ತೂಗುತ್ತಿದ್ದ ತೊಟ್ಟಿಲುಗಳು ಇವನ ಲೀಲೆಗಳನ್ನು ಹೇಳುತ್ತಿದ್ದವು.


ಎಲ್ಲಿ ಸುಖ??!!
==========
"ಸರ್ವೇ ಜನಃ ಸುಖಿನೋ ಭವಂತು" ಎಂದ ಪೂಜಾರಿ ಶ್ರೀಮಂತ ಭಕ್ತನಿಗೆ ಭಾರೀ ಪ್ರಸಾದಗಳನ್ನು ಕೊಟ್ಟು, ಹೊಟ್ಟೆಗಿಲ್ಲದೆ ಹೊರಗೆ ಕೂತ ಹೆಳವನನ್ನು ಹೊಡೆದು ಓಡಿಸಿದ್ದ.

ಆರೋಗ್ಯವೇ ಸಂಪತ್ತು
==============
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದರ ಹೊರಗೆ ಬರೆದಿತ್ತು. "ನಿಮ್ಮ ಆರೋಗ್ಯವೇ ನಮಗೆ ಸಂಪತ್ತು" (ಯುವರ್ ಹೆಲ್ತ್ ಇಸ್ ಅವರ ವೆಲ್ತ್).ಎಂದು. ಒಳಗೆ ನೋಡಿದರೆ ಆರೋಗ್ಯದಿಂದ ಇದ್ದವನಿಗೆ ದಿನಕ್ಕೊಂದು ರೋಗ ಇದೆ ಎಂದು ಹೇಳಿ ನಲವತ್ತು ಸಾವಿರ ಬಿಲ್ ಮಾಡಿದ್ದರು.ಆ ಧ್ಯೇಯ ವಾಕ್ಯ ಅಕ್ಷರಶಃ ನಿಜವೆನಿಸಿತು.

ಶಿಕ್ಷೆ
====
ಮೇಷ್ಟ್ರು ತನ್ನ ಮಗನಿಗೆ ಹೊಡೆದರೆಂದು ತಾಯಿ ಹೋಗಿ ಮೇಷ್ಟ್ರಿಗೆ ಬೈದು ಬಂದಿದ್ದಳು. ಕೆಲವು ದಿನಗಳ ನಂತರ ಮಗ ತಪ್ಪು ಮಾಡಿದ ಎಂದು ತಾಯಿ ಹೊಡೆದಾಗ ಮಗ ಮನೆ ಬಿಟ್ಟು ಓಡಿ ಹೋಗಿದ್ದ. ಮೇಷ್ಟ್ರು ನಕ್ಕರು.


ಸಂಭಾವಿತ
=======
ರೋಡಿನಲ್ಲಿ ಹೋಗುವ ಹುಡುಗಿಯರಿಗೆ ಅಸಹ್ಯ ಮಾತಾಡಿ ಟಾರ್ಚರ್ ಕೊಡುತ್ತಿದ್ದ ಮಹಾನುಭಾವ, ತನ್ನ ತಂಗಿಯನ್ನು ಯಾರೋ ಕೆಟ್ಟ ದೃಷ್ಟಿಯಿಂದ ನೋಡಿದ್ದನ್ನು ನೋಡಿ ಕೆಂಡಾಮಂಡಲವಾಗಿದ್ದ.

ವಾಂಛೆ 
=====
ಹೆಂಡತಿ ತವರಿಗೆ ಹೋದಾಗ ಕಾಮವಾಂಛೆಯಲಿ ಮತಿಗೆಟ್ಟು ಅವನು ವೇಶ್ಯೆಯನ್ನು ಮನೆಗೆ ಕರೆಸಿಕೊಂಡ. ಅವನ ಮೊಬೈಲ್ ನಲ್ಲಿ ರೀಮೈಂಡರ ಶಬ್ದವಾಯಿತು. ಅದರಲ್ಲಿ ಬರೆದಿತ್ತು "ಮಾತ್ರೆ ತೆಗೆದುಕೊಂಡು ಮಲಗಿ. ರಾತ್ರಿ ಕನಸಲ್ಲಿ ಬರುವೆ. ಲವ್ ಯೂ" ಎಂದು.  ಸಮಯ ಕೈಜಾರಿತ್ತು. ಮನವನಾವರಿಸಿದ್ದ ಕಾಮ ಹೊರ ಬಂದು ಇವನ ನೋಡಿ ಗಹಗಹಿಸಿ ನಗುತ್ತಿತ್ತು.


ಬೆಲೆ 
====
ಯಾವುದೋ ಹುಡುಗಿಯ ಜೊತೆ ಚಕ್ಕಂದವಾಡುತ್ತಾ ಜೋರಾಗಿ ಕಾರು ಓಡಿಸಿಕೊಂಡು ಬಂದ ಅವನು ಸಿಗ್ನಲ್ ಬಳಿ ಥಟ್ಟಂತ ಬ್ರೇಕ್ ಹಾಕಿದ. ಅಲ್ಲೇ ಪಕ್ಕ ಹರಕು ಸೀರೆ ಉಟ್ಟು ಕೂತಿದ್ದ ಹೆಂಗಸಿನ ಮೇಲೆ ಎರಡು ರೂಪಾಯಿ ಎಸೆದ.ಆಕೆ ಆ ಎರಡು ರೂಪಾಯಿಯ ಜೊತೆ ತನ್ನ ಜೋಳಿಗೆಯ ಒಳಗಿದ್ದ ಎರಡು ರೂಪಾಯಿ ಸೇರಿಸಿ ಅವನ ಕೈಯ್ಯಲ್ಲಿಟ್ಟು, "ನಿನ್ನಲ್ಲಿರುವ  ಲಕ್ಷ ರೂಪಾಯಿಗಿಂತ ಜಾಸ್ತಿ ಬೆಲೆ ನನ್ನ ಈ ಎರಡು ರೂಪಾಯಿಗಿದೆ. ನಿನ್ನ ದುಡ್ಡಲ್ಲಿ ಸೆಂಟಿನ ವಾಸನೆಯಿದೆ.ಆದರೆ ಇದರಲ್ಲಿ ನನ್ನ ಬೆವರಿನ ಘಮವಿದೆ. ಇಟ್ಟುಕೋ" ಎಂದು ಹೊರಟು ಹೋದಳು.

ಕಳ್ಳ 
===
ಬಸ್ ಸ್ಟ್ಯಾಂಡ್ ನ ಹೊರಗೆ "ಎಚ್ಚರಿಕೆ" ಎಂದು ಚಿಲ್ಲರೆ ಪಿಕ್ ಪಾಕೆಟ್ ಮಾಡುವವರ ಫೋಟೋ ಅಂಟಿಸಿದ್ದಾರೆ. ಒಳಗೆ ಕೋಟಿ ಕೋಟಿ ಹಗಲು ದರೋಡೆ ಮಾಡಿದ ಮಂತ್ರಿ ಹೊಸ ಯೂನಿಟ್ ಉದ್ಘಾಟನೆ ಮುಗಿಸಿ ಹಾರ ಹಾಕಿಸಿಕೊಳ್ಳುತಿದ್ದಾನೆ.

ದುಡ್ಡೇ ಜೀವನವಾದಾಗ 
==================
ದುಡ್ಡೇ ಜೀವನವೆಂದು ತಿಳಿದು ಪೈಸೆ ಪೈಸೆ ಒಟ್ಟು ಮಾಡಿ, ಸ್ನೇಹ ಸಂಬಂಧಗಳನ್ನೇ ಮರೆತ ವ್ಯಕ್ತಿ, ಮಾಡಿಟ್ಟಿದ್ದನ್ನು ಅನುಭವಿಸುವ ಸಮಯ ಬಂದಾಗ ಅನಾರೋಗ್ಯದಿಂದ ಅಸುನೀಗಿದ್ದ. ಚಟ್ಟಕ್ಕೆ ಹೆಗಲು ಕೊಡುವವರೇ ಇರಲಿಲ್ಲ.


ಭವಿಷ್ಯ


======

ಕೂಲಿ ಮಾಡಿ ಕಷ್ಟ ಪಟ್ಟು ಮಗನನ್ನು ಓದಿಸಿದ . ಮಗನಿಗೆ ಒಳ್ಳೆಯ ಕೆಲಸ ಸಿಕ್ಕಿದ್ದಾಯಿತು. ಅಪ್ಪನ 


ಭವಿಷ್ಯ ತಿಳಿಯಲು ಮಗ ಜ್ಯೋತಿಷಿಯ ಬಳಿ ಕರೆದುಕೊಂಡು ಹೋದ. ಜ್ಯೋತಿಷಿ ಕೈ ನೋಡಿದ. 

ಭೂತ ಕಾಲ ಮಾತ್ರ ಕಾಣುತ್ತಿತ್ತು.


ಸನ್ಮಾನ 
======

ದೊಡ್ಡ ಮನುಷ್ಯ ಟ್ರೇನ್ ನಿಂದ ಇಳಿದ. ಬಂದ ಕೂಡಲೇ ಎಲ್ಲರೂ ಮಾಲೆ ಹಾಕಿ, ಹೂ ಗುಚ್ಛ ನೀಡಿ ಸ್ವಾಗತಿಸಿದರು. ಅವನು ಅವುಗಳನ್ನೆಲ್ಲ ಪಕ್ಕಕ್ಕೆ ಎಸೆದ. ಅಲ್ಲೇ ಕೂತಿದ್ದ ಬಡ ಮುದುಕ ಹೂವುಗಳ ವಾಸನೆಯಿಂದಲೇ ಹೊಟ್ಟೆ ತುಂಬಿಸಿಕೊಂಡ.

1 comment: