Wednesday 27 June 2012

ಸ್ವಚ್ಛ ಭಾರತದ ನಿರೀಕ್ಷೆಯಲ್ಲಿ




ಯುವಕನೊಬ್ಬ ಎರಡು ವರ್ಷ ಶ್ರದ್ಧೆಯಿಂದ ಹಗಲು ರಾತ್ರಿಯೆನ್ನದೆ ಓದಿ ಕೊನೆಗೂ ಭಾರತೀಯ ಆಡಳಿತ ಸೇವೆಯಲ್ಲಿ ಅಗ್ರ ಸ್ಥಾನ ಗಳಿಸಿ ಆಯ್ಕೆಯಾದ.ಹೊಸ ಹುರುಪಿನೊಂದಿಗೆ ಹೊಸ ಹುದ್ದೆಯನ್ನು ದಕ್ಷತೆಯಿಂದ ನಿಭಾಯಿಸಿ ದೇಶಕ್ಕೆ ಸೇವೆ ಮಾಡುವ ಪಣ ತೊಟ್ಟು ಎಲ್ಲ ತರಬೇತಿಗಳನ್ನು ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾದ. ತನ್ನ ಹುದ್ದೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಹಲವು ಕ್ರಿಯಾತ್ಮಕ ವಿಚಾರಗಳು ಇವನ ತಲೆಯಲ್ಲಿದ್ದವು. ಆದಷ್ಟು ಬೇಗ ಅವನ್ನೆಲ್ಲಾ ಕಾರ್ಯರೂಪಕ್ಕೆ ತಂದು ಯಶಸ್ವೀ ಅಧಿಕಾರಿಯಾಗಿ ಗುರುತಿಸಿಕೊಳ್ಳುವ ತೀವ್ರ ಹಂಬಲದಿಂದ, ಅತಿ ಶೃದ್ಧೆಯಿಂದ ಕಾರ್ಯ ನಿರ್ವಹಣೆ ಮಾಡಲಾರಂಭಿಸಿದ. ಪ್ರತಿಫಲವಾಗಿ ಸಿಕ್ಕಿದ್ದು ವರ್ಗಾವಣೆ ಪತ್ರ. ವ್ಯವಸ್ಥೆ ಬದಲಿಸುವ ಹಂಬಲದಲ್ಲಿ ಒಳ ಹೊಕ್ಕವನು ಕೊನೆಗೆ ತಾನೂ ನಿಧಾನವಾಗಿ ಆ ವ್ಯವಸ್ಥೆಯಲ್ಲಿ ಒಬ್ಬನಾದ. 

ಇವನ್ನೆಲ್ಲ ನೋಡುವಾಗ ಮೊದಲಿಗೆ ಅನಿಸುವುದು ದಕ್ಷ ಅಧಿಕಾರಿಯೊಬ್ಬನಿಗೆ ವ್ಯವಸ್ಥೆ ನೀಡಿದ ಗೌರವವೇನು. ಅವನ ಅವಿರತ ಪರಿಶ್ರಮಕ್ಕೆ ಅರ್ಥವೇನು?ಹೊಸ ಬದಲಾವಣೆಯನ್ನು ತರುವ ಕಿಡಿಯನ್ನು ಹೊತ್ತು ಬಂದ ಅವನ ಆ ಕಿಡಿ ಕೆಲವೇ ಕೆಲವು ದಿನಗಳಲ್ಲಿ ಆರಿ ಹೋಯಿತು. ಒಂದೇ, ಸ್ವಾಭಿಮಾನದಿಂದ ಬದುಕಿ ವ್ಯವಸ್ಥೆಯನ್ನು ಎದುರಿಸಬೇಕು. ಹಾಗೆ ಎದುರಿಸಬೇಕೆಂದರೆ- ತಿಂಗಳಿಗೊಂದು ವರ್ಗಾವಣೆ, ಬೆದರಿಕೆ, ಸುಳ್ಳು ಆರೋಪಗಳ ಬಲೆಯಲ್ಲಿ ಸಿಕ್ಕಿ ಬೀಳಬೇಕು. ಇಲ್ಲವೇ ಸ್ವಾಭಿಮಾನವನ್ನು ಒತ್ತೆಯಿಟ್ಟು ವ್ಯವಸ್ಥೆಯಲ್ಲಿ ತಾನೂ ಒಬ್ಬನಾಗಬೇಕು. ಅಷ್ಟೆಲ್ಲ ಕಷ್ಟ ಪಟ್ಟು ಒಳಗೆ ಬಂದವನು ಎರಡನೇ ಆಯ್ಕೆಗೇ ಶರಣಾಗಿ ಎಲ್ಲರೊಳಗೊಂದಾಗುತ್ತಾನೆ. 

ಒಬ್ಬ ಅಧಿಕಾರಿಯಾಗಬೇಕಾದರೆ, ಒಬ್ಬ ವಿಜ್ಞಾನಿಯಾಗಬೇಕಾದರೆ, ಒಬ್ಬ ವೈದ್ಯ ಅಥವಾ ಅಭಿಯಂತರನಾಗಬೇಕಾದರೆ ಅದೆಷ್ಟೋ ಅರ್ಹತೆಗಳನ್ನು ಹೊಂದಿರಬೇಕು. ಎಷ್ಟೋ ಮಾನದಂಡಗಳು. ಎಷ್ಟೋ ವಿಷಯಗಳ ಬಗ್ಗೆ ಪ್ರಾಯೋಗಿಕ ಜ್ಞಾನ ಹೊಂದಿರಬೇಕು. ಅವರವರ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಣೆ
ಮಾಡುವಂತಹ ಸಾಮರ್ಥ್ಯ ಮತ್ತು ಚಾಕಚಕ್ಯತೆ ಇದ್ದರೆ ಮಾತ್ರ ತಮ್ಮ ಕ್ಷೇತ್ರಗಳಲ್ಲಿ ಅವರು ಮುಂದುವರಿಯಲು ಸಾಧ್ಯ. ಹೀಗಿರುವಾಗ "ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಒಬ್ಬ ವ್ಯಕ್ತಿ ರಾಜಕಾರಣಿಯಾಗಲು ಯಾವ ಅರ್ಹತೆ ಹೊಂದಿರಬೇಕು, ಅದಕ್ಕೆ ಏನೂ ಮಾನದಂಡವಿಲ್ಲವೇ? ದೇಶದ ಜನರ ಅಭಿವೃದ್ಧಿ , ಮತ್ತು ಸಂಪತ್ತಿನ ನಿರ್ವಹಣೆಯ ಮೂಲಕ ನಮ್ಮ ನಾಯಕನಾಗಿರುವ ಇಂತಹ ದೊಡ್ಡ ಹುದ್ದೆಗೆ ಎಂಥವನಾದರೂ ಬಂದು ಕುಳಿತುಕೊಳ್ಳಬಹುದೇ?" ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ ಸಿಗುವ ಉತ್ತರ- "ಹಣವಿರಬೇಕು, ರಾಜಕೀಯ ಕೌಟುಂಬಿಕ ಹಿನ್ನೆಲೆ ಇರಬೇಕು, ಮತ್ತು ಆತ್ಮ ದ್ರೋಹ ಮಾಡಿಕೊಳ್ಳಲು ತಯಾರಿರಬೇಕು" ಎಂದು. 

ಇಷ್ಟು ಯೋಚಿಸಿದೊಡೆ ಮನಸಲ್ಲಿ ಮೂಡುವ ದೊಡ್ಡ ಜಿಜ್ಞಾಸೆ- "ವಿದ್ಯಾವಂತರು, ಯುವಕರು ಯಾಕೆ ಮುಂದೆ ಬಂದು ಭಾಗವಹಿಸಬಾರದು ಎಂದು." ನಮ್ಮ ದೇಶದಲ್ಲಿ ರಾಜಕೀಯ ಹೊಲಸು ಎಂದು ಮೂಗು ಮುಚ್ಚಿಕೊಳ್ಳುವವರ ಸಂಖ್ಯೆ ಜಾಸ್ತಿ ಇದ್ದರೂ ಹಲವು ಬುದ್ಧಿ ಜೀವಿಗಳು ಮತ್ತು ಯುವಕರು ಮುಂದೆ ಬಂದು 
ಚುನಾವಣೆಯ ಕಣಕ್ಕಿಳಿದು ಹೀನಾಯವಾಗಿ ಸೋಲನ್ನು ಅನುಭವಿಸಿದ ಜೀವಂತ ಉದಾಹರಣೆಗಳು ನಮ್ಮ ಕಣ್ಣ ಮುಂದೇ ಇವೆ. ನಮ್ಮ ಸುತ್ತ ಮುತ್ತ- ದೇಶ ಅಭಿವ್ರದ್ಧಿಯಾಗಬೇಕು, ಭ್ರಷ್ಟಾಚಾರ ತೊಲಗಬೇಕು ಎನ್ನುವ ಬುದ್ಧಿ ಜೀವಿಗಳ ಕಾಳಜಿ ಈ ಸಮಯದಲ್ಲಿ ಎಲ್ಲಿ ಹೋಯಿತು ಎನ್ನುವುದು ದುರಂತ ಪ್ರಶ್ನೆ. 

ವ್ಯವಸ್ಥೆ ಬದಲಿಸುವ ಹಂಬಲ ಕೇವಲ ಮನದಲ್ಲಿ ಮತ್ತು ಮಾತಿನಲ್ಲಿರದೆ ಬದಲಿಸುವ ಅವಕಾಶ ಇರುವಲ್ಲೆಲ್ಲ ತಪ್ಪದೇ ಭಾಗವಹಿಸಿದಲ್ಲಿ ಮಾತ್ರ ನಮ್ಮ ಹಂಬಲ ನಿಜವಾಗಲು ಸಾಧ್ಯ. ಕೋಟಿ ಕೋಟಿ ಜನಸಂಖ್ಯೆಯ ನಮ್ಮ ಭಾರತದಲ್ಲಿ ಉತ್ತಮ ನಾಯಕರ ಅಭಾವ ಖಂಡಿತ ಇಲ್ಲ. ಆದರೂ ಅನರ್ಹರ ಕೈಯ್ಯಲ್ಲಿ ದೇಶ ಹೋಗುತ್ತಿರುವುದಕ್ಕೆ ಕಾರಣ- ಹೊಲಸು ರಾಜಕಾರಣವೆಂದು ದೂರ ಹೋಗುವ ಮನೋಭಾವ ಮತ್ತು ಬಾಯಲ್ಲಿ ಮಾತಾಡಿ ಏನಾದರೂ ಮಾಡಲು ಅವಕಾಶವಿರುವಾಗ ಮಾಡದೇ ಇರುವ ನಿರ್ಲಕ್ಷ ಭಾವ. ಈ ಹೊಲಸನ್ನು  ಎಲ್ಲ ಸಹೃದಯಿಗಳೂ ಸ್ವಲ್ಪ ಸ್ವಲ್ಪ ಬ್ಲೀಚಿಂಗ್ ಪುಡಿ ಹಾಕಿ ತೊಳೆದರೆ ವ್ಯವಸ್ಥೆ ಸ್ವಚ್ಚವಾಗುವುದೆಂಬ ಪುಟ್ಟ ಆಶಯ. ಸ್ವಚ್ಛ ಭಾರತದ ನಿರೀಕ್ಷೆಯಲ್ಲಿ...

4 comments:

  1. ಹೌದು ಗೆಳೆಯಾ .. ಈ ಅವ್ಯವಸ್ಥೆಗೆ ಸ್ವಲ್ಪ ಬ್ಲೀಚಿಂಗ್ ಹುಡಿ ಹಾಕಿ ತೊಳೆದರೆ ಖಂಡಿತಾ ಸ್ವಚವಾಗುವುದು.. ಅದಕ್ಕೆ ವಿಧ್ಯಾವಂತ ಯುವಕರು ರಾಜಕೀಯ ಸೇರಬೇಕು.. ನಿಮ್ಮ ಈ ಕರೆಗೆ ಯುವಕರು ಖಂಡಿತ ಓಗೊಡಲಿದ್ದಾರೆ ..
    ಹುಸೇನ್

    ReplyDelete
  2. ಆಶಯ ಅನುಪಮವಾದುದು.ಕೈಗೂಡಲಿ ಎಂದಷ್ಠೇ ಬಯಸುತ್ತೇನೆ.ಸ್ವಚ್ಛ ಭಾರತದ ನಿರೀಕ್ಷೆಯಲ್ಲಿ ಎಲ್ಲರೂ ಸಾಗೋಣ.

    ReplyDelete
  3. ನಿತ್ಯವೂ ಕಾಡುವ ಕಥೆ ಮತ್ತು ಪ್ರತಿಯೊಬ್ಬ ಭಾರತೀಯನ ಮನದ ಅಳಕು ಮತ್ತು ಬದಲಾವಣೆ ಬಯಸುವ ಮನಸ್ಸು . ಆದರೆ ಬೇರೆಯವರು ಮಾಡಲಿ ಎಂದು ಸುಮ್ಮನೆ ಕೂರುವ ಮನೋಭಾವ . ಸತ್ಯವಾಗಿಯೂ ಹೇಳುತ್ತೇನೆ ಭಾರತ ಬದಲಾಗಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ಅವರವರೆ ಕರ್ತವ್ಯ ನಿಭಾಯಿಸಿಕೊಂಡು ಹೋದರೆ ಸಾಕು .ಕಾರ್ಯ ನಿರ್ವಹಣೆ= ಕಾರ್ಯನಿರ್ವಹಣೆ ,, ಹಾಗೆ ಕೆಲವು ಕಡೆ ಸ್ಪೇಸ್ ಕೊಟ್ಟಿಲ್ಲ ಅನ್ಸುತ್ತೆ ಅಕ್ಷರಗಳು ಮಿಶ್ರಿತ ಗೊಂಡಿವೆ ಸರಿ ಮಾಡಿಬಿಡಿ ಪರೇಶ್ ಭೈ :))) ನಿಮ್ಮ ಕಾಳಜಿ ಚೆನ್ನಾಗಿದೆ :)))) ಆ ಶಂಭುಲಿಂಗ ನಮ್ಮೆಲರಿಗೂ ಬದಲಾಗಿ ಬದಲಾಯಿಸುವ ಶಕ್ತಿ ಕೊಡಲಿ ಎಂದು ಆಶಿಸುತ್ತೇನೆ :)))

    ReplyDelete
  4. ಭೇಷ್ ಕಣಪ್ಪಾ,

    ಯುವ ಜನಾಂಗ ಎಲ್ಲೋ ಲೋಪಾಶ್ಚಿಮಾತ್ಯಕ್ಕೆ ಒಗ್ಗಿ ವಾಸ್ತವತೆಯನ್ನು ಮರೆಯುತ್ತಿದೆಯೋ ಏನೋ ಎಂಬ ಆತಂಕ ಕಾಡುತ್ತಿತ್ತು.

    ಸಭ್ಯ ನಾಗರೀಕತೆಯನ್ನು ಬೆಳೆಸುವ ನಿಮ್ಮ ಆಶಯ ನನಗೆ ಮೆಚ್ಚಿಗೆಯಾಯ್ತು.

    ReplyDelete