Friday, 26 October 2012

ಮನುಷ್ಯ ರೋಬೋಟ್ ಆಗುತ್ತಿರುವನೇ?!"ಎರಡು ಮೂರು ಹೆಣ್ಣುಗಳನ್ನು ಒಪ್ಪಲಿಲ್ಲ ಅವರು. ಆಮೇಲೆ ನಮ್ಮ ಸಂಬಂಧಿಕರ ಮನೆಯ ಯಾವುದೋ ಸಮಾರಂಭದಲ್ಲಿ ನನ್ನನ್ನು ನೋಡಿದ್ದರಂತೆ. ನನ್ನ ಅಂದ ನೋಡಿ ಮನೆಗೆ ಹೋಗಿ ನಾನೇ ಬೇಕೆಂದು ಹೇಳಿ, ಆಮೇಲೆ ಅವರ  ಮನೆಯವರು ನನ್ನ ಜಾತಕ ತರಿಸಿ, ಮೇಳಾಮೇಳಿ ನೋಡಿ ಹೆಣ್ಣು ನೋಡುವ ಕಾರ್ಯಕ್ರಮ ಇಟ್ಟುಕೊಂಡರು. ನಮ್ಮದೂ ಒಂಥರಾ ಪ್ರೇಮ ವಿವಾಹವೇ. ಆಗಿನ ಕಾಲದ ಪ್ರೇಮವೇ ಬೇರೆ. ಮದುವೆ ನಿಶ್ಚಯವಾದ ಮೇಲೆ ಎರಡು ಮೂರು ಸಾರಿ ಶಿರೂರು ಸಂತೆಗೆ ಬಂದು ನನ್ನ ಮಾಮನನ್ನು ಭೇಟಿಯಾಗಿ ನನ್ನ ಬಗ್ಗೆ ತಿಳಿದುಕೊಂಡು ಹೋಗುತ್ತಿದ್ದರಂತೆ. ನನ್ನ ಅಂದ ಆ ಥರ ಹುಚ್ಚು ಮಾಡಿತ್ತು ಅವರನ್ನು. ನಿನ್ನಜ್ಜ ಬಹಳ ಕೋಪಿಷ್ಟ. ಆದರೂ ಒಂದು ದಿನಕ್ಕಿಂತ ಜಾಸ್ತಿ ನಮ್ಮ ಜಗಳ ನಡೆಯುತ್ತಿರಲಿಲ್ಲ. ಹೊಂದಾಣಿಕೆ ಇತ್ತು. ಹತ್ತು ಮಕ್ಕಳಿದ್ದರೂ ಬೆಳೆಸಿ ಎಲ್ಲರೂ ದೊಡ್ಡ ದೊಡ್ಡ ಹುದ್ದೆಗಳಿಗೆ ಸೇರುವಂತೆ ಮಾಡಿದರು. ಅವರು ಛಲವಾದಿ" ಎಂದು ನನ್ನಜ್ಜಿ ಹೇಳುತ್ತಿದ್ದ ನೆನಪು. ಆಗ ನಾನಿನ್ನೂ ಚಿಕ್ಕವ. ಈಗ ಅಜ್ಜಿ ಇಲ್ಲದಿದ್ದರೂ ಅವರ ಈ ಮಾತುಗಳು ಯಾವಾಗಲೂ ಮನಸ್ಸಿಗೆ ಬಂದು ಏನೋ ಅವ್ಯಕ್ತ ಸಂತೋಷವನ್ನು ನೀಡುತ್ತವೆ. 

ಆ ದಿನ ಅಜ್ಜಿಯ ತಿಥಿ ಇತ್ತು. ಅಮ್ಮ ಫೋನ್ ಮಾಡಿ ಹೇಳಿದರು. ಕಾಲೇಜಿನ ಹೊರಗಿನ ಬಸ್ ಸ್ಟ್ಯಾಂಡ್ ಬಳಿ ನಿಂತಿದ್ದೆ. ಅಜ್ಜಿ ಹೇಳಿದ ಕಥೆಗಳೆಲ್ಲ ಮತ್ತೆ ನೆನಪಾದವು. ಅಷ್ಟರಲ್ಲಿ ಅಲ್ಲೇ ಪಕ್ಕದ ಮೂಲೆಯಲ್ಲಿ ಹುಡುಗಿಯೊಬ್ಬಳು ಧ್ವನಿಯೆತ್ತಿ ಮಾತನಾಡುತ್ತಿರುವುದು ಕೇಳಿಸಿತು."ಎಷ್ಟು ಮಿಸ್ ಕಾಲ್ ಇದೆ ನೋಡು ನಿನ್ನ ಮೊಬೈಲ್ನಲ್ಲಿ. ನಿನಗೆ ಚೂರಾದರೂ ಕಾಳಜಿ ಇದೆಯಾ. ನನಗಿಂತ ಬೇರೆಲ್ಲ ದೊಡ್ಡದು ನಿನಗೆ. ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೆ ಗೊತ್ತಾ ನಿನ್ನನ್ನು. ಗಂಟೆಗೆ ಒಂದು ಸಾರಿಯಾದರೂ ಕಾಲ್ ಅಥವಾ ಮೆಸೇಜ್ ಮಾಡುತ್ತಿದ್ದೆ ನೀನು. ಈಗ ನಿನಗೆ ನಾನು ಬೋರಿಂಗ್ ಅನಿಸುತ್ತಿದ್ದೆನೇನೋ! ಹಾಗಿದ್ದರೆ ಹೇಳಿ ಬಿಡು. ಲೆಟ್ಸ್ ಬ್ರೇಕ್ ಅಪ್" ಎಂದು ಕಡ್ಡಿ ಮುರಿದಂತೆ ಮುಂದೆ ನಿಂತ ಹುಡುಗನ ಮೇಲೆ ಸಿಡುಕಾಡಿದಳು. "ಇಲ್ಲ, ಪ್ಲೀಸ್ ಹಾಗೆ ಹೇಳಬೇಡ. 
ನಾನು ಜಿ.ಆರ್.ಇ. ಪ್ರವೇಶ ಪರೀಕ್ಷೆಯ ತಯಾರಿಯಲ್ಲಿಯೇ ಮುಳುಗಿದ್ದೇನೆ. ಕೋಚಿಂಗ್ ಕ್ಲಾಸ್ನಲ್ಲಿ ಇದ್ದೆ ನೀನು ಕಾಲ್ ಮಾಡುವಾಗ. ಈ ಸಲ ನಾನು ಎಂ.ಎಸ್. ಮಾಡಲು ಹೋಗಲೇಬೇಕು.  ನಿನಗೆ ಎಲ್ಲ ಗೊತ್ತಿದ್ದೂ ಈ ರೀತಿ ಮಾತನಾಡುತ್ತೀಯಲ್ಲ.ಅರ್ಥ ಮಾಡಿಕೋ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಆ ಹುಡುಗ ಗೋಗರೆದ. 

ಈ ಎರಡು ಘಟನೆಗಳನ್ನು ಹೋಲಿಸಿ ನೋಡಿದಾಗ ಈ ಹಾಯ್ ಟೆಕ್ ಯುಗದಲ್ಲಿ ಪ್ರೀತಿ, ಬಾಂಧವ್ಯಗಳು ಎಷ್ಟು ದುರ್ಬಲವಾಗಿವೆ, ಮನುಷ್ಯ ಸಂಬಂಧಗಳು ಎಷ್ಟು ಕೃತಕವಾಗಿವೆ ಎಂಬುದು     ಸ್ಪಷ್ಟವಾಗಿ ತೋರುತ್ತದೆ. ಆಧುನೀಕತೆಯ ಗೋಡೆಗಳ ಮಧ್ಯೆ  ನಂಬಿಕೆ, ಸಂವೇದನೆ, ಭಾವುಕತೆಗಳ ಅರ್ಥವನ್ನೇ ಮರೆತು, ಬದುಕು ಕೂಡ ಕಂಪ್ಯೂಟರ್ ಪ್ರೋಗ್ರಾಮ್ ಆಗುತ್ತಿದೆ ಅಂದರೆ ಅತಿಶಯೋಕ್ತಿಯಲ್ಲ. ಆಗಿನ ಆ ಪ್ರೇಮಪತ್ರಗಳು, ಒಬ್ಬರನ್ನೊಬ್ಬರು ನೋಡದಿದ್ದರೂ ಹುಟ್ಟುತ್ತಿದ್ದ ಪವಿತ್ರ ಪ್ರೇಮದ ಸಂವೇದನೆಗಳು, ಹತ್ತು ಹಲವು ಜಗಳಗಳು ನಡೆದರೂ ಎಲ್ಲ ಮರೆತು ಮತ್ತೆ ಒಂದಾಗಿ ಬಾಳುವ ಗಟ್ಟಿತನವುಳ್ಳ ಪ್ರೀತಿ ಇವೆಲ್ಲ ನಿಧಾನವಾಗಿ ಮರೆಯಾಗುತ್ತಿವೆ. ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಮೆಸೇಜ್ ಮಾಡಿದರೆ, ಆ ವ್ಯಕ್ತಿಗೆ ಅದು ತಲುಪಿದೆಯೋ, ಅವನು ಅದನ್ನು ಓದಿದ್ದಾನೆಯೋ ಎಂದು ತಿಳಿಯುವಷ್ಟು ಮಟ್ಟಕ್ಕೆ ತಂತ್ರಜ್ಞಾನ ಬೆಳೆದಿದೆ. ಅದರ ಫಲಶ್ರುತಿ ಈಗಿನ ದುರ್ಬಲ ಸಂಬಂಧಗಳು. "ನಿನಗೆ ಫೇಸ್ಬುಕ್ ನಲ್ಲಿ ಅದ್ಯಾರದೋ ಚಿತ್ರಕ್ಕೆ ಲೈಕ್ ಮಾಡುವಷ್ಟು ಸಮಯ ಇದೆ. ಆದರೆ ನಾನು ಕಳಿಸಿದ ಸಂದೇಶ ನೋಡಿ ಸಹ ನನಗೆ ಪ್ರತಿಕ್ರಿಯಿಸಲಿಲ್ಲ ನೀನು" ಎಂದು ಹೇಳುವಷ್ಟು ಮಟ್ಟಿಗೆ ಸಂಶಯ ಪಿಶಾಚಿ ತಲೆಯ ಮೇಲೆ ಕುಳಿತುಕೊಳ್ಳುತ್ತಿದೆ.

ಎಲ್ಲ ಸ್ನೇಹ, ಸಂಬಂಧಗಳೂ ಆಧುನಿಕತೆಯೊಂದಿಗೆ ಯಾಂತ್ರಿಕವಾಗುತ್ತಿವೆ. ಬಾಲ್ಯದಲ್ಲಿ ಸಂಕ್ರಾಂತಿ ಬಂತೆಂದರೆ ಗ್ರೀಟಿಂಗ್ ಕಾರ್ಡ್ಸ್ ಗಳನ್ನು ಖರೀದಿಸಿ, ಅವುಗಳಲ್ಲಿ  ವಿವಿಧ ಬಣ್ಣದ ಪೆನ್ನುಗಳಿಂದ ಶುಭಾಶಯ ಬರೆದು ಸಂಕ್ರಾಂತಿ ಕಾಳುಗಳನ್ನು ತುಂಬಿಸಿ ಸಂಬಂಧಿಕರಿಗೆ, ಸ್ನೇಹಿತರಿಗೆ ಕಳುಹಿಸುತ್ತಿದ್ದ ನೆನಪು. ಅದು ಮಾಡುವಾಗಿದ್ದ   ಆ ಹುರುಪು, ಆಮೇಲೆ ಸಿಗುವ ಖುಷಿ ಅವರ್ಣನೀಯ. ಈಗ ಎಸ್.ಎಂ.ಎಸ್ ನಲ್ಲಿ ಹಬ್ಬದ ಶುಭಾಶಯಗಳು, ಫೇಸ್ಬುಕ್ಕಿನಲ್ಲಿ ಜನ್ಮದಿನದ ಹಾರೈಕೆಗಳು, ಇ ಮೇಲ್ ನಲ್ಲಿ ರಕ್ಷಾಬಂಧನದ ರಾಖಿ ಇವೆಲ್ಲವುಗಳಿಂದ  ಮನುಷ್ಯ ಸಂಬಂಧದಲ್ಲಿರಬೇಕಾದ ಆಪ್ತತೆ ಗಣನೀಯವಾಗಿ ಕುಸಿದಿದೆ. 

ಹಬ್ಬ ಹರಿದಿನವಾದರೆ ಅಕ್ಕ ಪಕ್ಕದ ಮನೆಯವರೊಡನೆ ನಮ್ಮ ಸಂತೋಷ ಹಂಚಿಕೊಂಡು, ಸಮಾಜದಲ್ಲೊಬ್ಬರಾಗಿ ನಾವು ಬೆಳೆದಿದ್ದು, ಮತ್ತು ಅಕ್ಕ ಪಕ್ಕದವರು ಯಾರೆಂದು ಗೊತ್ತಿಲ್ಲದೇ ಹಬ್ಬ ಹರಿದಿನಗಳ ಮಹತ್ವವೂ ಗೊತ್ತಿಲ್ಲದೇ ಎ.ಸಿ. ಕಾರಿನಲ್ಲಿ ಮಾಲುಗಳಿಗೆ ಹೋಗಿ ಸುತ್ತಾಡಿ ಬರುವ ಈಗಿನ ಮಕ್ಕಳು ಬೆಳೆಯುತ್ತಿರುವ ರೀತಿ ನೋಡಿದರೆ ಯಾಕೆ ಈಗಿನ ಮಕ್ಕಳು ಸಂಕುಚಿತರಾಗುತ್ತಿದ್ದಾರೆ, ದುರ್ಬಲರಾಗುತ್ತಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಬಹುದು. ಚಿಕ್ಕವರಿದ್ದಾಗ ಹೊರಗೆ ಗಂಟೆಗಟ್ಟಲೆ ಮಣ್ಣಲ್ಲಿ ಆಟವಾಡಿ ಕೊಳಕಾಗಿ ಮನೆಗೆ ಬಂದು ಅಮ್ಮ ಹೊಡೆಯುತ್ತಿದ್ದ ನೆನಪು. ಆದರೆ ಈಗಿನ ಚಿಕ್ಕ ಚಿಕ್ಕ ಮಕ್ಕಳು ಕಂಪ್ಯೂಟರ್ ಮುಂದೆ ಆಂಗ್ರಿ ಬರ್ಡ್ಸ್ ಆಡಲು ಕುಳಿತರೆಂದರೆ ಹೊರಗೆ ಹೋಗಿ ಆಟವಾದೆಂದು ಗೋಗರೆದರೂ ಹೋಗಲು ತಯಾರಿರುವುದಿಲ್ಲ. 

ಹೀಗೆ ನಮ್ಮ ಅಭಿರುಚಿಯ ಮತ್ತು ಜೀವನ ಶೈಲಿಯ  ಬದಲಾವಣೆಯ ಪರಿಣಾಮವೆಂಬಂತೆ  , ಪ್ರಪಂಚ ಚಿಕ್ಕದಾಗುವುದರ ಜೊತೆಗೆ ನಮ್ಮ ಮನಸ್ಸೂ ಚಿಕ್ಕದಾಗುತ್ತ ಹೋಗಿದೆ. ಸ್ವಾರ್ಥ , ಅಪನಂಬಿಕೆ, ಸಂಕುಚಿತತೆ ತುಂಬಿದ ಮನಸ್ಸುಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಮನುಷ್ಯ ರೋಬೋಟ್ ಆಗುವ ಕಾಲ ಸನ್ನಿಹಿತವಾಗುತ್ತಿದೆಯೇ?!
http://vijaykarnataka.indiatimes.com/articleshow/17442686.cms

4 comments:

 1. Tumba chennagide lekhana! :)

  ReplyDelete
 2. ನಿಜವಾಗಲೂ, ಈಗಾಗಲೇ ನಾವು ನಗರವಾಸಿಗಳು ಯಂತ್ರ ಮಾನವರೇ!

  ReplyDelete
 3. ಈಗಿನ ಆಹಾರಗಳ ಸೇವನೆಯಿಂದಲೂ , ಮನೆಯಲ್ಲೇ ಕುಳಿತು ಎಲ್ಲಿಯೂ ಹೊರಹೋಗದೆ ,ಟಿವಿ ,ಕಂಪ್ಯೂಟರ್ ನೋಡುತ್ತಾ ಕಾಲಕಳೆಯುವ ಮಕ್ಕಳಿಗೆ , ಬೊಜ್ಜು ಬಂದು , ಆ ಮಕ್ಕಳು ಏದುಸಿರುಬಿಡುತ್ತಾ ನಿತ್ಯ ನಡೆಯುವ ರೀತಿ ನೋಡಿದರೆ ನಿಜಕ್ಕೂ ಬೇಸರವೆನಿಸುತ್ತದೆ . ಹಾಗೆಯೇ ಆತೀ ಹೆಚ್ಚು ಹೊತ್ತು ಕಂಪ್ಯೂಟರ್ ,ಮೊಬೈಲ್ ಗಳ ಮುಂದೆ ತಲೆ ಬಾಗಿ ಕೂರುವದರಿಂದ ದೃಷ್ಟಿಯಲ್ಲಿ ದೋಷ ಬಂದು ಚಿಕ್ಕಂದಿನಿಂದಲೇ ಕನ್ನಡಕ ಇಟ್ಟು ಕೊಳ್ಳುವುದು ಸಾಮಾನ್ಯವಾಗಿದೆ .ಈಗಿನ ಮಕ್ಕಳ ಬೆಳವಣಿಗೆಯ ರೀತಿಗೂ ಇಪ್ಪತ್ತು ಇಪ್ಪತೈದು ವರುಷಗಳ ಹಿಂದೆ ನಾವು ಬೆಳೆದ ರೀತಿಗೂ ತುಂಬಾ ವ್ಯತ್ಯಾಸ ಉಂಟು .
  ಇದು ಮಕ್ಕಳ ಸಮಸ್ಯೆ ಆದರೆ,ನಮ್ಮೆಲ್ಲರ ಸಮಸ್ಯೆ ನೀವು ಹೇಳಿದ ಹಾಗೆ ತೇಟ್ ರೋಬೋಟ್ ತರವೇ .ಯಂತ್ರಗಳ ಸಹಾಯವಿಲ್ಲದೆ ಯಾವ ಕೆಲಸವೂ ಅಸಾಧ್ಯ.ಮುಂದಿನ ದಿನಗಳಲ್ಲಿ ಏನೆಲ್ಲಾ ಆಗುತ್ತಾ ಆ ದೇವನೇ ಬಲ್ಲ .ಒಳ್ಳೆಯ ಲೇಖನ ಪರೇಶಣ್ಣ

  ReplyDelete
 4. ಯಾಂತ್ರಿಕತೆಗೆ ಒಡ್ಡಿಕೊಂಡು ಜೀವನವನ್ನು ಸರಳಗೊಳಿಸಿರೆಂದು ಯಾಂತ್ರಿಕರ ಕೈ ಹಿಡಿದ ಮೇಲೆ ನಾವೂ ಯಂತ್ರಗಳೇ ಆಗಿದ್ದೇವೆ, ಉಸಿರಾಡುವ ಯಂತ್ರಗಳು! ಮಾನವೀಯ ಮೌಲ್ಯಗಳ ತಳ ಶೋಧಿಸಿ ಗಟ್ಟಿ ಕಾಳುಗಳನ್ನು ಹೆಕ್ಕುವ ಪ್ರಯತ್ನ ಮಾಡಿದ್ದೀರಿ. ನಿಮ್ಮ ವಸ್ತುವನ್ನು ಸಾಕ್ಷೀಕರಿಸಲು ಆರಿಸಿಕೊಂಡ ಸಂಕ್ರಾಂತಿಯ ನೆನಪು ಸಂಭ್ರಮವನ್ನೂ, ಗೌಜು ಗದ್ದಲವನ್ನು, ಮನೆಯಂಗಳದ ರಂಗೋಲಿಯನ್ನೂ, ಸ್ನೇಹಿತರ ಒಡನಾಟದ ಸುಖವನ್ನೂ, ಚಂದದ ಸೀರೆಯುಟ್ಟು ಮಂದಗಮನೆಯರಂತೆ ಬಳುಕಿ ತೂಗುವ ಹೆಂಗೆಳೆಯರನ್ನು ನೆನಪಿಸಿದರೆ! ಅಜ್ಜಿಯ ಪ್ರೇಮದ ನೆನಪು ನಮ್ಮ ಜೀವನದಲ್ಲಿ ಅಗತ್ಯವಾಗಿರುವ, ಇತ್ತೀಚೆಗೆ ಕಾಣೆಯಾಗುತ್ತಿರುವ, ನಾವು ಕಳೆದುಕೊಂಡೂ ಹಲುಬುವ ನೈಜ ಪ್ರೇಮದ ಸವಿಯನ್ನು ಉಣಬಡಿಸಿತು. ಲೇಖನ ಚೆನ್ನಾಗಿದೆ. :)

  ReplyDelete