Tuesday, 30 October 2012

ಇಡೂರು ಮಳ್ಳಿ


ಆ ದಿನ ಶನಿವಾರ. ಒಂದು ಒಪ್ಪತ್ತು ಶಾಲೆ. ಶಾಲೆ ಬಿಡುವ ಗಂಟೆ ಹೊಡೆದಾಗಿತ್ತು. ಆರನೆಯ ಕ್ಲಾಸಿನ ಹುಡುಗರದು ಒಂದು ದೊಡ್ಡ ಕ್ರಿಕೆಟ್ ಆಡುವ ಗುಂಪಿದೆ. ಶಾಲೆ ಬಿಟ್ಟಿದ್ದೆ ತಡ ಬ್ಯಾಟು, ಬಾಲು ಹಿಡಿದುಕೊಂಡು ಶಾಲೆಯ ಹಿಂದಿರುವ ಮೈದಾನದ ಕಡೆ  ಓಟ ಶುರು. ಗುಂಪಿನೊಳಗೊಬ್ಬ ಪೋಲಿ ಕೂಗಿದ- "ಅಲ್ನೋಡು ಇಡೂರು ಮಳ್ಳಿ." ಸುಮ್ಮನೆ ಕೆಳಗಿರುವ ಕಲ್ಲು ತೆಗೆದು ಅವಳ ಕಡೆ ಎಸೆದ. ಅವಳು ಏನಾಗಿದೆ ತಿಳಿಯದೆ ಸಿಟ್ಟಿನಿಂದ ತನ್ನ ಕೈಯ್ಯಲ್ಲಿದ್ದ ಏನನ್ನೋ ತೆಗೆದು ಮಕ್ಕಳ ಕಡೆ ಎಸೆದಳು. ಮಕ್ಕಳಿಗೆ ಇದು ಆಟವಾಯಿತು. ಕೊನೆಗೆ ಅವರೊಗೆದ ಒಂದು ದೊಡ್ಡ ಕಲ್ಲು ಅವಳ ತಲೆಗೆ ಬಡಿದು ರಕ್ತ ಸೋರಲಾರಂಭಿಸಿತು.ಇಷ್ಟಾಗಿದ್ದೇ ತಡ , ಮಕ್ಕಳೆಲ್ಲ ಅಲ್ಲಿಂದ ಪರಾರಿ. 

***********

ಅವಳು ಊರೆಲ್ಲಾ ಫೇಮಸ್ಸು. ಊರ ಕನ್ನಡ ಶಾಲೆಯ ಹಿಂದಿರುವ ರಂಗ ಮಂದಿರದಲ್ಲೇ ಅವಳ ವಾಸ. ಅವಳದೇ ಒಂದು ಲೋಕ. ಬಾಹ್ಯ ಲೋಕವೊಂದಿದೆ ಎನ್ನುವುದನ್ನು ಮರೆತಿದ್ದಳು ಎನ್ನುವಂತಿತ್ತು ಅವಳ ಜೀವನ. ಶಿರಾಡಿಗೆ ಅವಳು ಬಂದು ಇಪ್ಪತ್ತು ವರ್ಷಗಳ ಮೆಲಾಗಿತ್ತೇನೋ. ಅಷ್ಟು ಚಿರಪರಿಚಿತೆ ಅವಳು ಊರವರಿಗೆಲ್ಲ. ಯಾರಿಗೂ ಏನೂ ತೊಂದರೆ ಕೊಟ್ಟವಳಲ್ಲ. ಮೌನಿ. ಶಾಲೆಯ ಹಿಂದೆ ಒಂದು ಬಾವಿ ಇದೆ . ಆ ಕಡೆ ಜನವಾಸ ಕಡಿಮೆ. ಒಂದಿಬ್ಬರು ಮುಂಚೆ ಆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದೂ ಇದೆ. ಅವಳು ಶಿರಾಡಿ ಸೇರಿ ಒಂದೆರಡು ವರ್ಷ ಕಳೆದಿತ್ತೇನೋ. ಆತ್ಮಹತ್ಯೆ ಮಾಡಿಕೊಳ್ಳಲು ಬಂದ ಹುಡುಗಿಯೊಬ್ಬಳನ್ನು ತಡೆದು, ಜೋರಾಗಿ ಕೂಗಿಕೊಂಡಳಂತೆ. ಊರವರು ಬಂದು ಆ ಹುಡುಗಿಯನ್ನು ಎಳೆದುಕೊಂಡು ಹೋದರು. ಆಮೇಲೆ ಅಲ್ಲಿ ಯಾವುದೇ ಆತ್ಮಹತ್ಯೆ ಘಟನೆಗಳು ನಡೆದಿಲ್ಲ ಎಂದು ಹೇಳುತ್ತಾರೆ. ಈ ಘಟನೆಯ ನಂತರ ಊರ ಜನರಿಗೂ ಇವಳ ಮೇಲೆ ವಿಶೇಷ ಪ್ರೀತಿ.ಎಂದೂ ಯಾರ ಮುಂದೂ ಕೈ ಒಡ್ಡಿ ನಿಂತವಳಲ್ಲ ಅವಳು. ಆದರೂ ಊರವರ ಪ್ರೀತಿಯಿಂದ ಅವಳ ಊಟ ತಿಂಡಿಗೆ ಏನೂ ತೊಂದರೆಯಿರಲಿಲ್ಲ. ಅವಳು ಊರಿನ ಅವಿಭಾಜ್ಯ ಅಂಗವೇ ಆಗಿ ಬಿಟ್ಟಿದ್ದಳು. 

ಶಿರಾಡಿಯಿಂದ ಇಪ್ಪತ್ತು ಮೈಲು ದೂರವಿರುವ ಇಡೂರಿಗೆ ಸೊಸೆಯಾಗಿ ಬಂದವಳು ರತ್ನಮ್ಮ. ಜಾಸ್ತಿ ಕಲಿತಿಲ್ಲವಾದರೂ ಬಹಳ ಚುರುಕು ಬುದ್ಧಿಯವಳು. ಎಂಥ ಕೆಲಸವನ್ನಾದರೂ ಮಾಡಬಲ್ಲ ಗಟ್ಟಿ ಜೀವಿ.ಅವಳು  ಮಾತನಾಡಲು ನಿಂತರೆ ಊರಿನ ಹೆಂಗಸರೆಲ್ಲ ಕ್ಷಣದಲ್ಲೇ ಒಟ್ಟಾಗಿಬಿಡುತ್ತಿದ್ದರು. ಊರಿನ ಯಾವುದೇ ಮನೆಯ ಯಾವುದೇ ಸಮಾರಂಭವಿರಲಿ ಅಲ್ಲಿ ರತ್ನಮ್ಮನ ಹಾಜರಿ ಇರಲೇಬೇಕು. ಇಲ್ಲದಿದ್ದರೆ ಆ ಸಮಾರಂಭ ಅಪೂರ್ಣ ಎನ್ನುವಷ್ಟು ಮಟ್ಟಿಗೆ ಊರಿನವರಿಗೆಲ್ಲ ಬೇಕಾದವಳಾಗಿಬಿಟ್ಟಳು. ಗಂಡ ಮಾಸ್ತಪ್ಪ ಸ್ವಲ್ಪ ಮೊಂಡ. ಸಿಟ್ಟು ಜಾಸ್ತಿ. ಆಗಾಗ ಕುಡಿಯುವ ಅಭ್ಯಾಸವೂ ಇತ್ತು. ಆದರೂ ರತ್ನಮ್ಮ  ಎಲ್ಲಾ ಸುಧಾರಿಸಿಕೊಂಡು ಚಾಣಾಕ್ಷತೆಯಿಂದ ಸಂಸಾರ ಬಂಡಿಯನ್ನು ಸುಗಮವಾಗಿ ಸಾಗಿಸಿಕೊಂಡು ಹೋಗುತ್ತಿದ್ದಳು.

ಮಾಸ್ತಪ್ಪನದು ಮೇಸ್ತ್ರಿ ಕೆಲಸ. ಅವಳದೂ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನವಲ್ಲ. ಬೀಡಿ ಕಟ್ಟುವುದು, ಬುಟ್ಟಿ ಹೆಣೆಯುವುದು, ಅದು ಇದು ಎಂದು ಅಷ್ಟಿಷ್ಟು ಹಣ ಸಂಪಾದಿಸುತ್ತಿದ್ದಳು. ತಿಂದುಂಡು ಆರಾಮಾಗಿ ಜೀವನ ನಡೆಸಲು ಮನೆ, ಹಣ ಎಲ್ಲ ಇದ್ದವು. ಒಂದೆಕರೆ ಜಮೀನು ಕೂಡ ಇತ್ತು. ಆದರೆ ಮದುವೆಯಾಗಿ ವರ್ಷಗಳು ಉರುಳಿದರೂ ಮಕ್ಕಳಾಗಲಿಲ್ಲ. ಸುಮಾರು ಹರಕೆಗಳನ್ನು ಹೊತ್ತಿದ್ದಾಯಿತು. ಪೂಜೆ ಮಾಡಿಸಿದ್ದಾಯಿತು. ಅಂತೂ ಇಂತೂ ಗರ್ಭಿಣಿಯಾದಳು. ಮಾಸ್ತಪ್ಪನಿಗೆ ಗಂಡು ಬೇಕೆಂದು ಜೋರು ಆಸೆ. ಆದರೆ ರತ್ನಮ್ಮ ಹೆತ್ತಿದ್ದು ಹೆಣ್ಣು ಮಗುವನ್ನು. ಸ್ವಲ್ಪ ಅಸಮಾಧಾನ ಇದ್ದರೂ, ಮಗು ಎನ್ನುವುದು ಆಯಿತಲ್ಲ ಎಂದು ಮತ್ತೆ ಸುಧಾರಿಸಿಕೊಂಡ ಮಾಸ್ತಪ್ಪ. ನಾಮಕರಣ ಮುಗಿಯಿತು.

ಆದಿನ ರಾತ್ರಿ ತನ್ನ ಮಾಮೂಲಿ ಗುಂಪಿನ ಜೊತೆ ಮಾಸ್ತಪ್ಪ ಇಸ್ಪೀಟು ಆಡಲು ಹೋದ. ಅವನ ಸ್ನೇಹಿತ ತಿಮ್ಮಪ್ಪ ಏನೋ ಕೆಲಸವಿದೆಯೆಂದು ಬಂದಿರಲಿಲ್ಲ. ಇಲ್ಲದಿದ್ದರೆ ಎಲ್ಲಿ ಹೋಗುವುದಿದ್ದರೂ ಅವರು ಜೊತೆಗೇ ಹೋಗುವುದು. ಇಸ್ಪೀಟಿನ ಜೊತೆ ಕುಡಿತ ಶುರುವಾಯಿತು. ಅದು ಇದು ಎಂದು ಮಾತುಕತೆಗಳೆಲ್ಲಾ ನಡೆದವು. ಅಷ್ಟರಲ್ಲೇ ಮಾದೇವ ಕುಹಕ ನಗುವಾಡುತ್ತಾ ಹೇಳಿದ- "ನೀ ಬಿಡಪ್ಪ, ಏನೂ ಮಾಡದೆ ಅಪ್ಪ ಆಗಿ ಬಿಟ್ಟಿದ್ದೀಯ.ನಿನ್ನ ತೋಟದಲ್ಲಿ ಯಾರೋ ನೀರು ಬಿಟ್ಟು ಹೋದರು. ಯಾರದೋ ಶ್ರಮ, ಯಾರ್ಗೋ ಸುಖ. ನಿನ್ನ ಕೈಗೆ ಮಗು" ಎಂದು ಹಾಗೇ ಸುಮ್ಮನಾಗಿಬಿಟ್ಟ. ಮಾಸ್ತಪ್ಪ ಕೆಂಡಾಮಂಡಲನಾಗಿ ಮಾದೇವನಿಗೆ ಹೊಡೆಯಲು ಹೋದ. ಎಲ್ಲರೂ ಅವನ್ನು ಹಿಡಿದು ತಡೆದರು. "ನಿನ್ನ ಹೆಂಡತಿಯದ್ದು ಮತ್ತೆ ತಿಮ್ಮಪ್ಪನ ಸಂಬಂಧದ ಬಗ್ಗೆ ಇಡೀ ಊರೇ ಮಾತಾಡ್ತಾ ಇದೆ. ನೀನು ಇವನಿಗೆ ಹೊಡೆದು ಇವನೊಬ್ಬನ ಬಾಯಿ ಮುಚ್ಚೋದರಿಂದ ಏನು ಪ್ರಯೋಜನ ಉಂಟು?" ಎಂದು ರಂಗಪ್ಪ ಹೇಳಿದಾಗ ಕೈಯ್ಯಲ್ಲಿದ್ದ ಸಾರಾಯಿ ಗ್ಲಾಸನ್ನು ಕೆಳಗೆ ಎಸೆದು ಅಲ್ಲಿಂದ ಹೋಗೇ ಬಿಟ್ಟ.

ತಿಮ್ಮಪ್ಪ ಅವನ ಒಳ್ಳೆಯ ಗೆಳೆಯ. ಆಗಾಗ ಮನೆಗೆ ಬಂದು ಹೋಗುತ್ತಿದ್ದ. ರತ್ನಮ್ಮಳ ಜೊತೆಗೂ ಒಳ್ಳೆಯ ಸಲಿಗೆಯಿಂದಿದ್ದ. ರತ್ನಮ್ಮ 'ಅಣ್ಣ' ಎಂದೇ ಅವನನ್ನು ಕರೆಯುತ್ತಿದ್ದದ್ದು. ಮಾಸ್ತಪ್ಪನ ತಲೆಯಲ್ಲಿ  ಎಂದಿಗೂ ಅವರ ಬಗ್ಗೆ ಕೆಟ್ಟ ಆಲೋಚನೆಗಳು ಸುಳಿದೂ ಇರಲಿಲ್ಲ. ಆದರೆ ಊರವರ ಗುಸು ಗುಸು ಕೇಳಿದ ಮೇಲೆ ಅವನ ಬುದ್ಧಿಗೆ ಗ್ರಹಣ ಹಿಡಿದಾಗಿತ್ತು. ಎರಡು ಮೂರು ದಿನಗಳು ಕಳೆದವು. ಅವನು ಒಳಗೇ ಕೋಪ ಇಟ್ಟುಕೊಂಡು ಜ್ವಾಲಾಮುಖಿಯಾಗಿದ್ದ. ಮಗುವಿನ ಮುಖ ನೋಡಿದರೆ ತಿಮ್ಮಪ್ಪನೇ ಕಾಣುತ್ತಿದ್ದ. ಆದರೂ ಊರವರ ಮಾತು ಸುಳ್ಳಿರಬಹುದು ಎಂಬ ಆಲೋಚನೆ,  ಅವನ ಮನದ ಮೂಲೆಯಲ್ಲಿ ಇತ್ತು. ಆದಿನ ಮೇಸ್ತ್ರಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ. ತಿಮ್ಮಪ್ಪ ಮೈ ಹುಷಾರಿಲ್ಲ ಎಂದು ಕೆಲಸಕ್ಕೆ ಹೋಗಿರಲಿಲ್ಲ. ಕಾಲು ತೊಳೆದು ಮನೆಯೊಳಗೇ ಹೋಗುತ್ತಲೇ,.ಮಗುವಿನ ಜೊತೆ ಆಟ ಆಡುತ್ತಿದ್ದ ತಿಮ್ಮಪ್ಪನನ್ನು ಕಂಡ. ಒಳಗಿದ್ದ ಜ್ವಾಲಾಮುಖಿ ಒಂದೇ ಸಲ ಹೊರಬಂದಿತ್ತು. ಏನು, ಎತ್ತ ಎಂದು ಆಲೋಚನೆ ಮಾಡುವ ವ್ಯವಧಾನವನ್ನು ಕೂಡ ಕಳೆದುಕೊಂಡು ಹೆಂಡತಿಯ ಕತ್ತು  ಹಿಡಿದು ಹೊರಗೆ ದಬ್ಬಿದ. ಕೋಪದ ತೀವ್ರತೆಯಲ್ಲಿ ಮನುಷ್ಯತ್ವವನ್ನೇ ಮರೆತು ಮಗುವನ್ನೂ ಅವಳೆಡೆ ಎಸೆದ. ಅದು ನೆಲದ ಮೇಲೆ ಬಿದ್ದ ಪೆಟ್ಟಿಗೆ, ರತ್ನಮ್ಮನ ಬುದ್ಧಿ ಸ್ವಾಧೀನ ಕಳೆದುಕೊಂಡಾಗಿತ್ತು. 

*****************

ಎಲ್ಲ ಕಳೆದುಕೊಂಡು, ಏನು ನಡೆದಿದೆ ಎನ್ನುವುದನ್ನೇ ಮರೆತು ಅಲೆಮಾರಿಯಾಗಿ ಅಲೆಯುತ್ತಿದ್ದ ಅವಳಿಗೆ ನೆಲೆಯಾದ ಊರು ಶಿರಾಡಿ. ಈಗವಳ ದೇಹದಲ್ಲಿ ತ್ರಾಣವಿರಲಿಲ್ಲ. ವಯಸ್ಸು ಕೂಡ ಆಗಿತ್ತು. ಯಾರೋ ಊರವರು ಅವಳ ತಲೆಯಿಂದ ರಕ್ತ ಹರಿಯುತ್ತಿರುವುದನ್ನು ನೋಡಿ ಸರ್ಕಾರಿ ಆಸ್ಪತ್ರೆಗೆ ಕೂಡ ಸೇರಿಸಿದ್ದಾಯಿತು. ಊರ ಜನರೆಲ್ಲಾ ಆಸ್ಪತ್ರೆಗೆ ನೋಡಲು ಹೋದರು. ಬಹುಶಃ ಯಾವ ದೊಡ್ಡ ಮನುಷ್ಯನನ್ನು ನೋಡಲೂ ಅಷ್ಟು ಜನ ಹೋಗುತ್ತಿದ್ದರೋ ಇಲ್ಲವೋ. ಐದಾರು ದಿನಗಳು ಕಳೆದವು. ಅವಳು ಕೊನೆಯುಸಿರೆಳೆದಳು.  ಅವಳ ಅಧ್ಯಾಯ ಅಂತ್ಯವಾಯಿತು.  ಅದೆಷ್ಟೋ ವರ್ಷಗಳ ಕಾಲ  ತಾನೊಬ್ಬಳು ಈ ಪ್ರಪಂಚದಲ್ಲಿ ಬದುಕಿದ್ದೇನೆ, ತನ್ನದೂ ಒಂದು ಸಂಸಾರ ಇತ್ತು ಎಂಬ ಪ್ರಜ್ಞೆಯೂ ಇರದ "ಇಡೂರು ಮಳ್ಳಿ"ಯ ನಿಧನವಾರ್ತೆ ಫೋಟೋದೊಂದಿಗೆ  ಎಲ್ಲ ಪತ್ರಿಕೆಗಳಲ್ಲಿ ಬಂದಿತ್ತು. ಸಾವಿನೊಂದಿಗೆ ಮತ್ತೂ ಪ್ರಖ್ಯಾತಳಾಗಿಬಿಟ್ಟಳು.6 comments:

 1. ಹೌದು, ಈ ಅನುಮಾನ, ಸಣ್ಣ ಮಾತುಗಳು ಅನ್ಯರ ಜೀವನವನ್ನೇ ನಾಶಮಾಡಬಹುದು.ಆದರೂ ಮನುಜನ ಮಾತು ಕಡಿಮೆ ಆಗುವುದಿಲ್ಲ.

  ReplyDelete
 2. ಹನಿಗವನಗಳಷ್ಟೇ ಅಲ್ಲ ಬರಹಗಳಲ್ಲೂ ನೀವು ಪಕ್ವವಾಗುತ್ತಿದ್ದೀರಿ. ಸಂತೋಷದ ವಿಚಾರ.

  ReplyDelete
 3. ಕಥೆ ಹೃದಯ ವಿದ್ರಾವಕವಾಗಿದೆ.ಇಡೂರ ಮಳ್ಳಿ ಇಹಲೋಕ ತ್ಯಜಿಸಿದರೂ ಅವಳು ಜೀವಂತವಾಗಿ ಜನಮಾನಸದಲ್ಲುಳಿದ ರೋಚಕ ಕಥೆ ಕಣ್ಣ್ಮನಗಳನ್ನು ಆರ್ದಗೊಳಿಸುತ್ತದೆ.ಅತ್ಯಂತ ಅಚ್ಚುಕಟ್ಟಾಗಿ,ಹೃದಯಸ್ಷರ್ಷಿಯಾಗಿ ಒಪ್ಪೋರಣವಾಗಿ ಕಥೆಯನ್ನು ಹೆಣೆದಿದ್ದೀರಿ.ಓದಲು ಆನಂದವಾಯಿತು.ಅಭಿನಂದನೆಗಳು.

  ReplyDelete
 4. ಚೆನ್ನಾಗಿದೆ ಪರೇಶ್ ಜೀ... ಕಥೆ ಹೇಳುವುದರಲ್ಲಿ ಇಲ್ಲಿ ಜಾಣ್ಮೆಯಿದೆ... ಮುಂದಿನ ಕಥೆಯನ್ನು ಇನ್ನೂ ಅಚ್ಚುಕಟ್ಟುಗೊಳಿಸಿ... :)

  ReplyDelete
 5. ಕಥೆ ಬರೆಯುವುದು ಮುಖ್ಯವಲ್ಲ. ಆ ಕಥೆಗೆ ಓದಿಸಿಕೊಂಡು ಹೋಗುವ ಗುಣದ ಜೊತೆಗೆ ಕುತೂಹಲವನ್ನು ಕಾಯ್ದುಕೊಂಡು ಹೋಗುವ ಶಕ್ತಿಯಿರಬೇಕು. ಆಗಲೇ ಅದೊಂದು ಶಕ್ತ ಕಥೆ ಎನಿಸಿಕೊಳ್ಳುವುದು. ಈ ನಿಟ್ಟಿನಲ್ಲಿ ಪರೇಶ್ ಯಶಸ್ವಿಯಾಗಿದ್ದಾರೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಕಥೆಯನ್ನು ಓದುತಿದ್ದಂತೆ ನಡೆದ ಅಥವಾ ಕಲ್ಪಿಸಿಕೊಂಡು ಬರೆದ ಸನ್ನಿವೇಶಗಳು ಹಾಗೆ ಕಣ್ಣಿಗೆ ಕಟ್ಟುವಂತೆ ತೋರುವುದು ಈ ಕಥೆಯ ವಿಶಿಷ್ಟತೆ ಎನ್ನಬೇಕು. ಇಡೂರು ಮಳ್ಳಿಯ ದುರಂತ ಕಥೆ ಮನಸನ್ನು ಆರ್ಧ್ರಗೊಳಿಸಿತು.

  ReplyDelete
 6. ಓದಿಸಿಕೊಂಡೂ ಹೋಗುವಷ್ಟು ತಾಕತ್ತು ನಿಮ್ಮ ಬರವಣಿಗೆಗಿದೆ ಪರೇಶಣ್ಣ. ಒಬ್ಬ ಬುದ್ದಿ ಸ್ವಾಧೀನ ಕಳೆದುಕೊಂಡ ಹೆಣ್ಣು ಮಗಳೊಬ್ಬಳ ಕರುಣಾಜನಕ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ತೆರೆದಿಟ್ಟಿದ್ದೀರಿ. ನನಗೆ ನಮ್ಮೂರಿನ ಸಾರಾಯಿ ಶಂಕ್ರಮ್ಮ ನೆನಪಾದಳು. ಆಕೆಯೂ ಹೀಗೆಯೇ, ಗಂಡ ಬೇರೆ ಹೆಂಗಸಿನ ಸಹವಾಸ ಮಾಡಿ ತನ್ನನ್ನು ಹೊಡೆದು-ಬಡಿದು ಹೊರ ಹಾಕಿದ ಎಂಬ ಕಾರಣಕ್ಕೆ ಬುದ್ದಿ ಸ್ವಾಧೀನ ಕಳೆದುಕೊಂಡ ಅವಳು ಯಾವಾಗಲೂ ಸರಾಯಿ ಅಂಗಡಿಯ ಅಕ್ಕ ಪಕ್ಕದಲ್ಲೇ ಅಡ್ಡಾಡುತ್ತಿದ್ದಳು. ಸಾರಾಯಿ ಕುಡಿದು ತೂರಾಡುವವರನ್ನು ಮತ್ತು ರಗಳೆ ಮಾಡುವವರನ್ನು ಬೈಯುತ್ತಿದ್ದಳು. ಚಿಕ್ಕವರಾಗಿದ್ದ ನಮಗೆಲ್ಲಾ ಸೋಜಿಗದ ಪ್ರತಿಮೆ ಆ ಶಂಕ್ರಮ್ಮ. ಚೆನ್ನಾಗಿದೆ ಕಥೆ, ಮೆಚ್ಚಿದೆ.

  ReplyDelete