Saturday, 6 October 2012

ಬಲಿಪಶು


"ಮಲ್ಲೆ ಹೂವು, ಜಾಜಿ ಹೂವು....ತನನಾನ...ತನನನಾ" ಎಂಬ ವಿಶಿಷ್ಠ ಧಾಟಿ ಮತ್ತು ಧ್ವನಿಯ ಕೂಗು ಅಂದೂ ನನ್ನ  ಕಿವಿಗಪ್ಪಳಿಸಿತ್ತು. ಶನಿವಾರ, ಆಫೀಸಿಗೆ  ರಜೆ ಎಂದು ಆರಾಮವಾಗಿ ಮಲಗಿದ್ದೆ. ಏಳುವ ಆಲೋಚನೆ ಕೂಡ ಇರಲಿಲ್ಲ. ಆದರೆ ಅವನ ಆ ಕೂಗು ಕೇಳಿದೊಡನೆ ಏನೋ ಒಂದು ಹೊಸ ಉತ್ಸಾಹದ ಚಿಲುಮೆ ಬಂದಂತಾಗಿ ಎದ್ದೆ. ಪ್ರತಿ ದಿನವೂ ಇದೇ ಕಥೆ. ಆ ಧ್ವನಿಯಲ್ಲಿ ಏನೋ ತಾಕತ್ತಿದೆ. ಹಾಸಿಗೆಗೆ ಒತ್ತಿಕೊಂಡು ಮಲಗಿದ್ದ ದೇಹಕ್ಕೆ ಹೊರಗೆ  ಸ್ವಚ್ಛಂದ ಪ್ರಪಂಚವಿದೆಯೆಂದು ಅರಿವು ಮಾಡಿಸುವ ಸಂಗೀತವದು. ಎದ್ದು ಮುಖ ತೊಳೆದುಕೊಂಡು ತಿಂಡಿ ಮಾಡಲು ಹೊರಟೆ. ಪ್ರತಿದಿನ ಹೋಗುವ ಹೋಟೆಲ್ ಗೆ ಹೋದರೆ ಬಾಗಿಲು ಮುಚ್ಚಿತ್ತು. ಕಾವೇರಿ ವಿವಾದದ ನ್ಯಾಯಕ್ಕಾಗಿ ಅಂದು ಬೆಂಗಳೂರು ಬಂದ್. ನಮ್ಮದೋ, ಬ್ಯಾಚುಲರ್ ರೂಮು. ಮನೆಯಲ್ಲೇ ಏನಾದರೂ ಮಾಡಿಕೊಳ್ಳೋಣವೆಂದರೆ ಏನೂ ಸಾಮಾನುಗಳಿಲ್ಲ. ಹೊಟ್ಟೆಗೇನು ಗತಿ!? ಎಂದು ಯೋಚನೆ ಮಾಡುತ್ತಿರುವಾಗಲೇ, ಆ ಹೋಟೆಲ್ ನವನು ರಸ್ತೆಯಲ್ಲಿ ಸಿಕ್ಕಿದ- "ನೀವು ಮಾಮೂಲು ಗಿರಾಕಿಗಳು ಸ್ವಾಮೀ, ನಿಮ್ಮ ಹೊಟ್ಟೆ ಹಸಿದಿರುವುದನ್ನು ನೋಡಲು ನಮಗೆ ಸಾಧ್ಯವೇ" ಎಂದು ಇಡ್ಲಿ ಪಾರ್ಸೆಲ್ ಕಟ್ಟಿ ಕೊಟ್ಟ. ಜೀವ ಬಂದಂತಾಯ್ತು. 

ಮನೆಯಲ್ಲೇ ಆಲಸಿಯಾಗಿ ಬಿದ್ದುಕೊಂಡು ಹೇಗೋ ಆ ದಿನ ಕಳೆದಿದ್ದಾಯಿತು. ಮರುದಿನ ಬೆಳಿಗ್ಗೆ ಸಮಾರಂಭವೊಂದಕ್ಕೆ ಹೋಗುವುದು ನಿಶ್ಚಯವಾಗಿತ್ತು. ಬೇಗ ಏಳಬೇಕಾಗಿತ್ತು. ದಿನವೂ ಎಚ್ಚರವಾಗುತ್ತದಲ್ಲ. ಇನ್ನು ಅಲಾರಂ ಯಾಕೆ ಇಡುವುದು ಎಂದು ಹಾಗೆಯೇ ಮಲಗಿದೆ. ಬೆಳಿಗ್ಗೆ ನಾನು ಕಣ್ಣು ತೆರೆಯುವಾಗ ಗಂಟೆ ಹತ್ತಾಗಿತ್ತು. ಯಾಕೋ ದಿನ ಬಹಳ ಮಂಕಾಗಿರುವಂತೆ ಕಂಡಿತು. ಏನೋ ಕೊರತೆಯಿದೆ ಅನಿಸಿತು. "ದಿನವೂ ಕಂಚಿನ ಕಂಠದಿಂದ ಕೂಗುತ್ತ ಹೂ ಮಾರುವ ಆ ಹೂವಪ್ಪ ಇಂದ್ಯಾಕೆ ಬಂದಿಲ್ಲ? ಬಂದಿದ್ದರೂ ನನ್ನ ಗಾಢ ನಿದ್ದೆಯ ನಡುವೆ ನನಗೆ ಧ್ವನಿ ಕೇಳಿರಲಿಕ್ಕಿಲ್ಲವೇ?" ಎಂದು ಯೋಚನೆ ಮಾಡುತ್ತಲೇ, ಎದ್ದು ಮುಖ ತೊಳೆದೆ. ಆಗಲೇ ತಡವಾಗಿತ್ತು. ಆ ಕಾರ್ಯಕ್ರಮಕ್ಕೆ ಹೋಗುವುದು ಕಷ್ಟ ಸಾಧ್ಯವಾಗಿತ್ತು. ಇರಲಿ, ತಿಂಡಿಯಾದರೂ ಮಾಡಿ ಬರೋಣ ಎಂದು ಹೊರಟೆ. 

ಸುಮ್ಮನೆ ಹೋಗಿ-"ನಿನ್ನೆ ಬಂದ್ ಹೇಗಿತ್ತು ಸ್ವಾಮೀ. ಫುಲ್ ನಷ್ಟವೇ ?" ಎಂದು ಕೇಳಿದೆ. "ಹ್ಮ್ಮ್. ತುಂಬಾ ನಷ್ಟವಾಯಿತು. ಶನಿವಾರ ಬೇರೆ. ಒಳ್ಳೆ ವ್ಯಾಪಾರದ ದಿನ. ಬಿಡಿ, ಯಾರ ಹತ್ತಿರವೂ ಹೊಡೆಸಿಕೊಳ್ಳಲಿಲ್ಲವಲ್ಲ ಪುಣ್ಯಕ್ಕೆ. ಹೂ ಮಾರುವವನಿಗೊಬ್ಬನಿಗೆ ಚೆನ್ನಾಗಿ ಥಳಿಸಿದರಂತೆ" ಎಂದು ಆ ಹೋಟೆಲ್ ನವನು ಹೇಳಿದಾಗ ಒಂದು ಕ್ಷಣ ಬಾಯಿಂದ ಮಾತೇ ಹೊರಡಲಿಲ್ಲ. ಅವನೇ ಮುಂದುವರಿಸಿದ- " ತಮಿಳಿನವನಂತೆ ಸರ್. ಇಲ್ಲಿ ಬಂದು ವರ್ಷಗಳೇ ಆಗಿವೆ. ನಮ್ಮ ಲೇ ಔಟ್ ನಲ್ಲಿ ಐದು ವರ್ಷಗಳಿಂದ ಹೂ ಮಾರುತ್ತ ಇದ್ದಾನೆ. ನಮಗಿಂತ ಚೆನ್ನಾಗಿ ಕನ್ನಡ ಮಾತಾಡ್ತಾನೆ. ಪಾಪ ಗಾಡಿ ತಳ್ಳಿಕೊಂಡು ಹೋಗುವವನು ಅವ್ನು. ಅಂಗಡಿ ಏನಾದ್ರೂ ಇದ್ದೀಯ ಅವನದ್ದು! ನಿನ್ನೆ ಬಂದ್ ಇದ್ರೂ  ಹೂ ಮಾರ್ತ ಇದ್ದ ಅಂತ ಹೊಡೆದಿದ್ದಾರೆ. ಇದು ಸುಮ್ಮನೆ ಹೇಳಲಿಕ್ಕೆ ಒಂದು ಕಾರಣ ಅಷ್ಟೇ. ತಮಿಳಿನವನು ಅಂತ ಹೊಡೆದಿರ್ತಾರೆ. ಪಾಪ ಕಾವೇರಿ ನೀರು ಅವನೇನೂ ಬಿಟ್ನಾ ಅಲ್ಲಿ ಹೋಗಿ. ಅವನಿಗೆ ಇವೆಲ್ಲಾ ವಿಷಯಗಳ ಅರಿವು ಕೂಡ ಇದೆಯೋ ಇಲ್ಲವೋ ಪಾಪ!"

ನಾನು ಏನೂ ಮಾತಾಡದೆ ರೂಮಿನ ಕಡೆ ಹೆಜ್ಜೆ ಹಾಕಿದೆ. ಇವೆಲ್ಲ ಘಟನೆಗಳಿಗೆ ಕಾರಣವಾದ ಭೃಷ್ಟ ಮಂತ್ರಿಗಳು ಪ್ರತಿಭಟನೆಯ ಭಾಷಣ ಮಾಡಿ ಎ.ಸಿ. ರೂಮಿನಲ್ಲಿ ಗುಂಡು ಹೊಡೆಯುತ್ತಿದ್ದರೆ, ಏನೂ ತಿಳಿಯದ ಆ ಹೂವಪ್ಪ ಆಸ್ಪತ್ರೆಯಲ್ಲಿ ನೋವಿನಿಂದ ನರಳಾಡುತ್ತಿದ್ದ.

1 comment: