Wednesday, 28 November 2012

ಕನ್ನಡ ಬೆಳೆಸಲು ಯುನಿಕೋಡ್ ಬಳಕೆ: ಯಾಕೆ, ಹೇಗೆ?ಮುಂಚೆ ಹೊಸ ಹೊಸ ಪುಸ್ತಕಗಳನ್ನು, ಪಾಕ್ಷಿಕ, ಮಾಸಿಕ, ಸಾಪ್ತಾಹಿಕ ಪತ್ರಿಕೆಗಳನ್ನು  ಅಂಗಡಿಗೆ ಹೋಗಿ ಕೊಂಡು ತಂದು ಓದುವುದು ಸರ್ವೇಸಾಮಾನ್ಯವಾಗಿತ್ತು. ಆದರೆ ತಾಂತ್ರಿಕ ಬೆಳವಣಿಗೆ ಮತ್ತು  ಆಧುನಿಕತೆಯೊಂದಿಗೆ ಜನರ 
ಜೀವನ ಶೈಲಿ ಕೂಡ ಬದಲಾಗಿದೆ. ಬಹು ಪಾಲು ಜನರಿಗೆ ಪುಸ್ತಕ, ಪತ್ರಿಕೆಗಳನ್ನು ಅಂಗಡಿಯಿಂದ ಕೊಂಡು ತಂದು ಓದುವ ವ್ಯವಧಾನವಿಲ್ಲ. ಈ ಇ-ಯುಗದಲ್ಲಿ ನಾವೆಲ್ಲಾ ಬಹು ಪಾಲು ಸಮಯವನ್ನು ಕಂಪ್ಯೂಟರ್ ನ ಎದುರೇ ಕಳೆಯುತ್ತೇವೆ. ಎಲ್ಲ ಮಾಹಿತಿಗಳೂ ಒಂದು ಕ್ಲಿಕ್ಕಿನಲ್ಲೇ ಸಿಗಬೇಕೆಂದು ಅಪೇಕ್ಷಿಸುತ್ತೇವೆ. ಈ ಪರಿಸ್ಥಿತಿಯಲ್ಲಿ ಸಮಕಾಲೀನ ಬರಹಗಾರರು ತಮ್ಮ ಛಾಪು ಮೂಡಿಸಬೇಕೆಂದರೆ ಈ  ಬದಲಾವಣೆಗೆ ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ.ತಾಂತ್ರಿಕ ಬೆಳವಣಿಗೆಗಳ ಉಪಯೋಗ ಪಡೆದುಕೊಂಡು ಕನ್ನಡ ಬರಹಗಳು ವಿಶ್ವವ್ಯಾಪಿ ಲಭ್ಯವಿರುವಂತೆ ಮಾಡುವುದು ಕನ್ನಡದ ಬೆಳವಣಿಗೆಗೆ ಬಲು ಅವಶ್ಯ. 

ಈ ದಿಶೆಯಲ್ಲಿ ಅವಶ್ಯಕವಾಗಿರುವುದು "ಯುನಿಕೋಡ್" ಬಳಕೆ. ಹಾಗಿದ್ದರೆ "ಈ ಯುನಿಕೋಡ್ ಎಂದರೆ ಏನು? ಇದರ ಬಳಕೆ ಕನ್ನಡವನ್ನು ಹೇಗೆ ಬೆಳೆಸುವುದು?" ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಾಮಾನ್ಯ. ಉದಾಹರಣೆಗೆ ನಾವು ಯಾರದೋ ಮನೆಗೆ ಹೋದಾಗ ನಮ್ಮ ಮೊಬೈಲ್ ನಲ್ಲಿ ಚಾರ್ಜ್ ಖಾಲಿಯಾದರೆ ಚಾರ್ಜರ್ ಇದೆಯಾ ಎಂದು ಕೇಳುತ್ತೇವೆ. ಅದಕ್ಕೆ ಅವರ ಪ್ರಶ್ನೆ- "ಯಾವ ಕಂಪೆನಿಯ ಚಾರ್ಜರ್?". ನಾವು ಯಾವುದೋ ಕಂಪೆನಿಯ  ಹೆಸರು ಹೇಳಿದ  ಮೇಲೆ-"ಅಯ್ಯೋ, ಆ ಕಂಪೆನಿಯ ಮೊಬೈಲ್ ಚಾರ್ಜರ್ ನಮ್ಮ ಮನೆಯಲ್ಲಿಲ್ಲ" ಎಂದು ಅವರು ಹೇಳಿದಾಗ- "ಎಲ್ಲ ಮೊಬೈಲ್ ಗಳಿಗೆ ಒಂದು ಸಾರ್ವತ್ರಿಕ ಚಾರ್ಜರ್ ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು" ಎಂದು ಅನಿಸದೇ ಇರುವುದಿಲ್ಲ. ಇದೇ ರೀತಿ ನಮ್ಮ ಮನೆಯ ಗಣಕ ಯಂತ್ರದಲ್ಲಿ ಯಾವುದೋ ಒಂದು ತಂತ್ರಾಂಶ ಉಪಯೋಗಿಸಿ ಒಂದು ಲೇಖನ ಟೈಪ್ ಮಾಡಿ ಅದನ್ನು ಪ್ರಿಂಟ್ ಮಾಡಿಸಲೆಂದು ಯಾವುದೋ ಸೈಬರ್ ಕೇಂದ್ರಕ್ಕೆ ಹೋದರೆ, ಆ ತಂತ್ರಾಂಶ ಅವನ ಬಳಿ ಇಲ್ಲದೇ ಕೊನೆಯಲ್ಲಿ ಸಾಮಾನ್ಯ ಮನುಷ್ಯ ಓದಲಾಗದ ವಿಚಿತ್ರ ಲಿಪಿ ಗೋಚರವಾಗಿ, "ಇದೇನು, ಕನ್ನಡ ಬರಹ ಪ್ರಿಂಟ್ ಮಾಡಿಸಲು ಇಷ್ಟು ಕಷ್ಟ ಪಡಬೇಕಾ?" ಎಂದು ಪೆಚ್ಚು ಮೋರೆ ಹಾಕಿಕೊಂಡು ಮನೆಗೆ ಬಂದ ಅನುಭವ ನಮ್ಮ ನಿಮ್ಮಲ್ಲಿ ಎಷ್ಟೋ ಜನರಿಗೆ ಆಗಿರುತ್ತದೆ. ಹೀಗಾಗದೆ, ಕನ್ನಡದಲ್ಲಿ ಬರೆದ ಕಡತವೊಂದನ್ನು, ಚೀನಾ ದೇಶಕ್ಕೆ ಕಳಿಸಿದರೂ ಅದು ಕನ್ನಡವೆಂದು ಅವರಿಗೆ ತಿಳಿಯಬೇಕು. ಇದಕ್ಕೆ ಪರಿಹಾರವೇ- "ಯುನಿಕೋಡ್" ಬಳಕೆ.

ಯುನಿಕೋಡ್ ಅಂದರೇನು?: ಯುನಿಕೋಡ್ ಎಂದರೆ ಒಂದು ಅಂತರರಾಷ್ತ್ರೀಯ ನಿರ್ದಿಷ್ಟಮಾನ. ಇದರ ಧ್ಯೇಯ - ಎಲ್ಲಾ ಮಾನವ ಭಾಷೆಗಳಲ್ಲಿ ಬೇಕಾಗುವ ಪ್ರತಿಯೊಂದು ಅಕ್ಷರಕ್ಕೂ ಒಂದು ಅನನ್ಯ  ಪೂರ್ಣಾಂಕ ಸಂಖ್ಯೆಯನ್ನು ಕೊಡುವುದು. ನಮಗೆ  ತಿಳಿದಿರುವಂತೆ ಕಂಪ್ಯೂಟರ್ ದ್ವಿಮಾನ ಸಂಖ್ಯಾ ಪದ್ಧತಿಯನ್ನು ಮಾತ್ರ ಅರ್ಥೈಸಿಕೊಳ್ಳುತ್ತದೆ. ಎಲ್ಲಾ ಮಾಹಿತಿಗಳೂ 1,0 ಗಳ ಸರಣಿಯಲ್ಲೇ ಶೇಖರವಾಗಿರುತ್ತವೆ. ಮತ್ತು ಇವುಗಳ ಜೋಡಣೆಯ ಕ್ರಮದ ಆಧಾರದ ಮೇಲೆ ಪ್ರತಿಯೊಂದು ಮಾಹಿತಿಯೂ ವಿಶಿಷ್ಥವಾಗುತ್ತದೆ. ಹೀಗಾಗಿ ಯಾವುದೇ ಅಕ್ಷರ, ಸಂಖ್ಯೆ ಅಥವಾ  ಚಿಹ್ನೆಯನ್ನು  ಒಂದು ಸಂಖ್ಯೆ ಪ್ರತಿನಿಧಿಸುತ್ತದೆ. ಹೀಗೆ ಪ್ರತಿಯೊಂದು ಅಕ್ಷರಕ್ಕೂ ಒಂದು ಸಂಖ್ಯೆಯನ್ನು ನಿಗದಿಪಡಿಸುವುದು ಎನ್‌ಕೋಡಿಂಗ್ ವ್ಯವಸ್ಥೆಗಳ ಉದ್ದೇಶ. ಯುನಿಕೋಡ್ ಬರುವ ಮುನ್ನ ಹೀಗೆ ಹಲವು ಎನ್ಕೋಡಿಂಗ್ ವ್ಯವಸ್ಥೆಗಳು ಜಾರಿಯಲ್ಲಿದ್ದವು. ಬೇರೆ ಬೇರೆ ತತ್ರಾಂಶಗಳು ಬೇರೆ ಬೇರೆ ಎನ್ಕೋಡಿಂಗ್ ವ್ಯವಸ್ಥೆಗಳನ್ನು ಉಪಯೋಗಿಸುತ್ತಿದ್ದವು. ಆದರೆ ಈ ಯಾವುದೇ ವ್ಯವಸ್ಥೆಗಳಲ್ಲಿ ಪ್ರಪಂಚದ ಎಲ್ಲ ಭಾಷೆಗಳ ಎಲ್ಲ ಅಕ್ಷರಗಳನ್ನು ಅನನ್ಯವಾಗಿ ಪ್ರತಿನಿಧಿಸುವ ಸಾಮರ್ಥ್ಯ  ಇರಲಿಲ್ಲ. ಮತ್ತು ಎರಡು ಎನ್ಕೋಡಿಂಗ್ ವ್ಯವಸ್ಥೆಗಳ ಮಧ್ಯೆ ಹೊಂದಾಣಿಕೆಯ ಸಮಸ್ಯೆಯೂ ಇತ್ತು. ಅಂದರೆ ನಮ್ಮ ಬರಹವನ್ನು ಒಂದು ವ್ಯವಸ್ಥೆಯಿಂದ ಇನ್ನೊಂದು ವ್ಯವಸ್ಥೆಗೆ ಬದಲಿಸುವುದು ಕಷ್ಟ ಸಾಧ್ಯವಾಗಿಬಿಟ್ಟಿತ್ತು. ಆದರೆ ಯುನಿಕೋಡ್ನಲ್ಲಿ ಜಗತ್ತಿನ ಪ್ರತಿಯೊಂದು ಭಾಷೆಗೂ ತನ್ನದೇ ಆದ ಅನನ್ಯ ಸಂಕೇತ ಶ್ರೇಣಿ ಇದೆ. ಸಾಮಾನ್ಯವಾಗಿ ಎಲ್ಲ ಎನ್ಕೋಡಿಂಗ್ ವ್ಯವಸ್ಥೆಗಳಲ್ಲಿ 8 ಬಿಟ್ ಗಳನ್ನು ಬಳಸಿದರೆ  ಯುನಿಕೋಡ್ 16 ಬಿಟ್ ಗಳನ್ನು ಬಳಸುವುದರಿಂದ ಇದಕ್ಕೆ ಸುಮಾರು 65000 ಮೂಲ ಅಕ್ಷರಗಳನ್ನು ಪ್ರತಿನಿಧಿಸುವ ಸಾಮರ್ಥ್ಯವಿದೆ. 

ಇತ್ತೀಚಿಗೆ ಇ-ಮೇಲ್, ಚಾಟ್ ಮತ್ತು ಬ್ಲಾಗ್ ಬರಹಗಳಲ್ಲಿ ಕನ್ನಡದ ಬಳಕೆ ಯುನಿಕೋಡ್ ನಲ್ಲೆ ನಡೆಯುತ್ತಿದೆ. ಕನ್ನಡ ಭಾಷೆ, ಸಾಹಿತ್ಯ ವಿಶ್ವವ್ಯಾಪಿಯಾಗಿ ಬೆಳೆಯಬೇಕಾದರೆ ಪುಸ್ತಕಗಳು ಇ-ಪುಸ್ತಕಗಳ ರೂಪದಲ್ಲಿ ಅಂತರ್ಜಾಲದಲ್ಲಿ ಲಭ್ಯವಿರಬೇಕಾದ್ದು ಅನಿವಾರ್ಯ. ಆದರೆ ಹಲವು ಭಾಷೆಗಳ ಜೊತೆ ಹೋಲಿಸಿ ನೋಡಿದರೆ ಅಂತರ್ಜಾಲದಲ್ಲಿರುವ ಕನ್ನಡ ಪುಸ್ತಕಗಳ ಸಂಖ್ಯೆ ನಗಣ್ಯ. ಕನ್ನಡದಲ್ಲಿ ಅಪಾರ ಸಂಪತ್ತಿದೆ. ಮುತ್ತು ರತ್ನ ವಜ್ರ ಸಮಾನ ಸಾಹಿತ್ಯ ಗಣಿಯಿದೆ. ಅದಮ್ಯ ಪ್ರತಿಭೆಗಳಿದ್ದಾರೆ. ಆದರೆ ಇವೆಲ್ಲ ವಿಶ್ವವ್ಯಾಪಿಯಾಗಬೇಕೆಂದರೆ ಅತಿ ದೊಡ್ಡ ಕನ್ನಡ ಇ- ಗ್ರಂಥಾಲಯ ಸ್ಥಾಪನೆಯಾಗಬೇಕು. ಇದು ಸಾರ್ವತ್ರಿಕವಾಗಲು ಯುನಿಕೋಡ್ ಬಳಕೆ ಅನಿವಾರ್ಯ. ಈ ನಿಟ್ಟಿನಲ್ಲಿ ಸರ್ಕಾರ ಕನ್ನಡಕ್ಕೆ "ಯುನಿಕೋಡ್ ಶಿಷ್ಠತೆ" ಕಡ್ಡಾಯ ಎಂದು ಪ್ರಕಟಿಸುವುದು ಕನ್ನಡದ ಬೆಳವಣಿಗೆಗೆ ಬಲು ಸಹಾಯಕಾರಿ. ಸರ್ಕಾರದ ಎಲ್ಲ ಕನ್ನಡ ಅಂತರ್ಜಾಲ ತಾಣಗಳು ಯುನಿಕೋಡ್ ಅನ್ನು ಬಳಸಿದರೆ ಜನಸಾಮಾನ್ಯರಿಗೆ ಬಹಳ ಅನುಕೂಲಕರ. ಈ ನಿಟ್ಟಿನಲ್ಲಿ ನಾಡಿನ ಹಲವು ಸಾಹಿತಿಗಳು, ಕನ್ನಡ ಪ್ರೇಮಿಗಳು ಶ್ರಮ ವಹಿಸುತ್ತಿದ್ದಾರೆ. ಸರ್ಕಾರ ಮತ್ತು ಎಲ್ಲ ಕನ್ನಡಿಗರು ಈ ಬಳಕೆಯನ್ನು ವ್ಯಾಪಕವಾಗಿ ಕಾರ್ಯರೂಪಕ್ಕೆ ತಂದು ತನ್ಮೂಲಕ ಇ-ಯುಗದಲ್ಲಿ ಕನ್ನಡದ ಬೆಳವಣಿಗೆಗೆ ಹೊಸ ಕ್ರಾಂತಿ ಮಾಡೋಣ. 

1 comment:

  1. ಯುನಿಕೋಡ್ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಕಳೆದ ನವಂಬರ್ ಒಂದರಂದು ಶ್ರೀಯುತ ಕಂಬಾರರು ಸ್ವಪ್ನ ಪುಸ್ತಕ ಭಂಡಾರ ೫೬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾನ್ಯ ಜಗದೀಶ್ ಶೆಟ್ಟರ್ ಮತ್ತು ಮಾಜಿ ಕೇಂದ್ರ ಸಚಿವರೊಬ್ಬರನು ಈ ಬಗ್ಗೆ ಒತ್ತಾಯಿಸಿದ್ದು ಕಂಡಾಗ ಇನ್ನಷ್ಟು ತಿಳಿಯುವ ಹಂಬಲವಿತ್ತು. ನೀವು ಅದನ್ನು ಪೂರೈಸಿದಿರಿ. ಈ ಬಗ್ಗೆ ಹೆಚ್ಚಿನ ಗಮನ ನೀಡೋಣ. ಏನಾದರೂ ಸಾಧಿಸೋಣ.

    ReplyDelete