Thursday 20 December 2012

ಆಸ್ಪತ್ರಾಯಣ


ಕರಾವಳಿಯ ತಪ್ಪಲಿನ ಒಂದು ಪುಟ್ಟ ಊರು ಶಿರಾಲಿ. ಅಲ್ಲಿ ಸರಾಫ್ ಡಾಕ್ಟ್ರು ಬಹಳ ಫೇಮಸ್. ಅವರು  ಆ ಊರಿನಲ್ಲಿಯೇ ಹುಟ್ಟಿ ಬೆಳೆದದ್ದರಿಂದ ಅಲ್ಲಿಯ ಜನರ ಮನಸ್ಸನ್ನು ಚೆನ್ನಾಗಿ ಬಲ್ಲವರು. ಊರು ಮತ್ತು ಊರಿನ ಸುತ್ತ ಇರುವ ಹತ್ತಾರು ಹಳ್ಳಿಗಳಲ್ಲಿ ಇರುವ ಬಹುತೇಕ ಜನರು ಕೃಷಿಕರು. ಅಂದರೆ ಆರ್ಥಿಕವಾಗಿ ಅಷ್ಟೇನೂ ಉತ್ತಮ ಸ್ಥಿತಿಯಲ್ಲಿ ಇಲ್ಲದಿರುವವರೆಂದೇ  ಹೇಳಬಹುದು. ಮಳೆಯಾದರೆ ಬೆಳೆ. ಇಲ್ಲದಿದ್ದರೆ ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುವುದೊಂದೇ ದಾರಿ. ಆದರೆ ಕಾಯಿಲೆ ಹೇಳಿ ಕೇಳಿ ಬರುತ್ತದೆಯೇ? ಎಲ್ಲಾದರೂ ಕೊಂಚ ಆರೋಗ್ಯದಲ್ಲಿ ಏರು ಪೇರಾದರೂ ಇವರಿಗೆ ಥಟ್ಟಂತ ನೆನಪಾಗುವುದು ನಮ್ಮ ಸರಾಫ್ ಡಾಕ್ಟ್ರು.

ಆಸ್ಪತ್ರೆಯೆಂದರೆ ನಮಗೆ ಥಟ್ಟನೆ ತಲೆಗೆ ಬರುವುದು, ಹೊರಗೆ ಟೋಕನ್ ಕೊಡಲು ಕುಳಿತಿರುವ ಕಾಂಪೌಂಡರ, ಗಂಟೆಗಟ್ಟಲೆ ಕಾದು ರೂಮಿನ ಒಳಗೆ ಹೋದ ಮೇಲೆ ಗಂಭೀರವಾಗಿ ಪರೀಕ್ಷಿಸಿ ಇಂಜೆಕ್ಷನ್ ಕೊಡುವ ಡಾಕ್ಟ್ರು, ಆಮೇಲೆ ನೂರಾರು ರೂಪಾಯಿ ಬಿಲ್ಲು. ಆದರೆ ಸರಾಫ್ ಡಾಕ್ಟರರ ಆಸ್ಪತ್ರೆ ಬಹಳ ವಿಭಿನ್ನ. ಆಸ್ಪತ್ರೆಯ ಒಳಗೆ ಹೋಗುತ್ತಲೇ ಅಲ್ಲೇ ಡಾಕ್ಟ್ರು ಕುಳಿತಿರುವುದು ಕಾಣುತ್ತದೆ. ಅವರ ಸುತ್ತಲೂ ಹತ್ತಾರು ರೋಗಿಗಳು. ಟೋಕನ್ ತೆಗೆದುಕೊಳ್ಳಲು ಸಾಲುಗಳಿಲ್ಲ. ರೋಗಿಗಳ ಮತ್ತು ಅವರ ಜೊತೆಗೆ ಬಂದವರ ಮುಖದಲ್ಲಿ ಅವ್ಯಕ್ತ ಭಯ ಕೂಡ ಇಲ್ಲ. ಬಂದವರಲ್ಲಿ ಹಿಂದೂ, ಮುಸಲ್ಮಾನ್, ಕ್ರಿಸ್ಚಿಯನರೆಲ್ಲರೂ ಇದ್ದಾರೆ. ಆದರೆ ಅಲ್ಲಿ ಯಾವುದೇ ಭೇದ ಭಾವಗಳಿಲ್ಲ. ಹಳ್ಳಿಗರ ಮುಗ್ಧತೆ, ಸರಾಫ್ ಡಾಕ್ಟರರ ಹಾಸ್ಯಪ್ರಜ್ಞೆ ಒಗ್ಗೂಡಿ ಸೃಷ್ಟಿಯಾದ ವಿನೋದಮಯ, ಸೌಹಾರ್ದ ವಾತವಾರಣದಿಂದಲೇ  ರೋಗಿಯ ಅರ್ಧ ರೋಗ ಮಾಯ. ಇನ್ನು ಗುಳಿಗೆ, ಇಂಜೆಕ್ಷನ್ ಕೊಟ್ಟು ಹತ್ತಿಪ್ಪತ್ತು ರೂಪಾಯಿ ಬಿಲ್ಲು ಮಾಡುವ ಡಾಕ್ಟ್ರು ಎಲ್ಲಿ ಸಿಗ್ತಾರೆ ಹೇಳಿ?! ಅಲ್ಲಿಗೆ ರೋಗಿಯ ಪೂರ್ಣ ರೋಗ ಮಾಯ.

ಹೀಗೆ ಪ್ರತಿದಿನ ಅಲ್ಲಿ ಹತ್ತಾರು ಹಾಸ್ಯಮಯ ಘಟನೆಗಳು ನಡೆಯುತ್ತಿರುವುದು ಸಾಮಾನ್ಯ. ರೋಗಿಗೆ ಪರೀಕ್ಷೆ ಮಾಡಿದ ಕೂಡಲೇ ಅವರ ಪೂರ್ಣ ಹೆಸರನ್ನು ಪಟ್ಟಿಯ ಮೇಲೆ ಬರೆದುಕೊಂಡು, ಕಾಯಿಲೆಯ ವಿವರವನ್ನು ಬರೆದಿಡುವ ಪದ್ಧತಿ ಇದೆ. ಗುಡಿಹಿತ್ತಲಿನ ಮಾದೇವಿಗೆ ಎರಡು ದಿನಗಳಿಂದ ಭಾರೀ ಜ್ವರ. ಇನ್ನು ಕಡಿಮೆಯಾಗುವ ಸೂಚನೆಯಿಲ್ಲ ಎಂದು ತಿಳಿದದ್ದೇ, ಡಾಕ್ಟ್ರ ಬಳಿ ಓಡಿ ಬಂದಳು. ತುಂಬಾ ರಶ್ ಇತ್ತು. ಡಾಕ್ಟ್ರು ಅವಳನ್ನು ಕರೆದರು. ಪರೀಕ್ಷೆ ಮಾಡಿದ್ದಾಯಿತು. ಇನ್ನು ಅವಳ ಹೆಸರು ಬರೆದುಕೊಳ್ಳಬೇಕು. "ನಿನ್ನ ಹೆಸರು ಹೇಳೇ" ಅಂದ್ರು ಡಾಕ್ಟ್ರು. ಅದಕ್ಕೆ ಅವಳು ಕೂಡಲೇ- "ಮಾದೇವಿ" ಎಂದಳು. ಇನ್ನು ಗಂಡನ ಹೆಸರು ಬೇಕಲ್ಲವೇ? ಹಳ್ಳಿಯಲ್ಲಿ ಗಂಡನ ಹೆಸರನ್ನು ನೇರವಾಗಿ ಹೇಳದೆ ಇರುವ ಪದ್ಧತಿ ಇದೆ. ಇದು ಡಾಕ್ಟರಿಗೆ ಹಲವು ಬಾರಿ ಕಿರಿಕಿರಿ ತಂದಿದ್ದೂ ಇದೆ. ಗಂಡನ ಹೆಸರು ಕೇಳಿದೊಡನೆ ಮಾದೇವಿಯ ಮುಖ ನಾಚಿ ಕೆಂಪಾಯಿತು. ಅವಳ ಬಾಯಿಂದ ಮಾತೇ ಇಲ್ಲ. ಡಾಕ್ಟರಿಗೆ ಸಿಟ್ಟು ಬಂದು- "ಗಂಡನ ಹೆಸರು ಹೇಳ್ತೀಯ , ಅಥವಾ ಡಬಲ್ ಬಿಲ್ ಮಾಡಲಾ?" ಎಂದು ಬ್ಲ್ಯಾಕ್ಮೇಲ್ ಮಾಡಿದ ಕೂಡಲೇ ಅವಳ ಬಾಯಿಂದ ಮಾತು ಹೊರಟಿತು. "ಅದೇ ರಾ, ತಿರುಪತಿಲಿ ಇರ್ತ್ನಲ್ಲಾ ಅವ್ನು" ಅಂದಳು. ಡಾಕ್ಟರಿಗೆ ಕೂಡ ಈ ಥರದ ಒಗಟು ಬಿಡಿಸುವುದು ಅಭ್ಯಾಸ ಆಗಿ ಹೋಗಿತ್ತು. "ತಿಮ್ಮಪ್ಪ" ಎಂದು ಮೌನವಾಗಿ ರೆಜಿಸ್ಟರ್ ಮೇಲೆ ಬರೆದುಕೊಂಡರು. "ಮತ್ತೇನಾದ್ರು ಕಾಯಿಲೆ ಉಂಟಾ ನಿನಗೆ?" ಎಂದು ಡಾಕ್ಟ್ರ ಮುಂದಿನ ಪ್ರಶ್ನೆ. " ಬಿರೆಡ್ ಬಟರ್ ಕಾಯಿಲೆ ಒಂದು ಉಂಟು ಒಡ್ಯಾ. ಒಂದು ವರ್ಷದಿಂದ ಗುಳಿಗೆ ತಗೊಳ್ತಾ ಇದ್ದೆ" ಅಂತ ಹೇಳಿದ ಕೂಡಲೇ ಎಲ್ಲರೂ ಒಮ್ಮೆ ಗೊಳ್ಳನೆ ನಕ್ಕರು. ಮಾದೇವಿಗೆ ಏನಾಯಿತೆಂದೇ ತಿಳಿಯಲಿಲ್ಲ. ಡಾಕ್ಟರಿಗೆ ಗೊತ್ತಾಯ್ತು ಆಕೆ ಹೇಳುತ್ತಿರುವುದು ಬಿ.ಪಿ. ಕಾಯಿಲೆಯ ಬಗ್ಗೆ ಎಂದು. ಆದರೂ ತಿಳಿಯದಂತೆ- "ಅಯ್ಯೋ ಮಾರಾಯ್ತಿ, ಅದು ಎಂತ ನಮೂನೆಯ ಕಾಯಿಲೆಯೇ? ನಾನು ಇಷ್ಟು ವರ್ಷ ಸರ್ವಿಸ್ನಲ್ಲಿ ಇಂಥ ಕಾಯಿಲೆ ಹೆಸರು ಕೇಳಲಿಲ್ಲ. ಇದ್ಕೆ ದೆವ್ವ ಕಾಣೂದೆ ಲಾಯ್ಕು" ಅಂದು ಅಲ್ಲೇ ಪಕ್ಕದಲ್ಲಿದ್ದ ಶೆಲ್ಫ್ ಮೇಲಿಂದ ಎರಡು ಮೂರು ಥರದ ಮಾತ್ರೆಗಳನ್ನು ತೆಗೆದರು. ಮಾದೇವಿಯ ಮುಖದಲ್ಲಿ ಏನೋ ತೃಪ್ತಿ ಇರಲಿಲ್ಲ. ಹಳ್ಳಿಯಲ್ಲಿ ಇಂಜೆಕ್ಷನ್ ತೆಗೆದುಕೊಳ್ಳುವುದು ಒಂದು ಫ್ಯಾಶನ್. ಇಂಜೆಕ್ಷನ್ ತೆಗೆದುಕೊಂಡು ಬಿಟ್ಟರೆ ಕ್ಷಣದಲ್ಲಿ ಕಾಯಿಲೆ ಓಡಿ ಹೋಗುವುದೆಂಬ ನಂಬಿಕೆ ಜನರಿಗೆ. ಆದರೆ ಅಗತ್ಯ ಇದ್ದಲ್ಲಿ ಮಾತ್ರ ಇಂಜೆಕ್ಷನ್ ಕೊಡುವುದು ಸರಾಫ್ ಡಾಕ್ಟರರ ಪದ್ಧತಿ. ಹೆದರಿ ಹೆದರಿಯೇ ಹೇಳಿದಳು- "ನಂಗೆ ಹಿಂದುಸ್ತಾನ್ ಕೊಡ್ರಾ ಒಡ್ಯಾ". ಡಾಕ್ಟರರ ಹಾಸ್ಯಪ್ರಜ್ಞೆ ಬಹಳ ಚುರುಕು. "ನನ್ ಹತ್ರ ಹಿಂದುಸ್ತಾನ್ ಇದ್ರೆ ನಾನಿಲ್ಲಿ ಇರ್ತಿದ್ನಾ ಮಾರಾಯ್ತಿ. ಯಾರ್ ಹತ್ರವೂ ಹೇಳಲಿಕ್ಕೆ ಹೋಗಬೇಡಾ. ಪೊಲೀಸರು ಬಂದು ಹಿಡ್ಕೊಂಡು ಹೋಗೂರು" ಎಂದು ಹೇಳಿ ಗುಳಿಗೆ ಕೊಟ್ಟು ಅವಳನ್ನು ಕಳಿಸಿದ್ದಾಯಿತು.

ಅಷ್ಟರಲ್ಲಿ ಆಸ್ಪತ್ರೆಯ ಹೊರಗೆ ಒಂದು ರಿಕ್ಷ ಬಂತು. ಇಬ್ಬರು ಸೇರಿ ಒಬ್ಬ ಹೆಂಗಸನ್ನು ಒಳಗೆ ಕರೆದುಕೊಂಡು ಬಂದರು. ಕತ್ತಿ ತಾಗಿ  ಕೈಗೆ ದೊಡ್ಡ ಗಾಯ ಆಗಿತ್ತು. ಮಂಚದ ಮೇಲೆ  ಅವಳನ್ನು ತಂದು ಮಲಗಿಸಿದರು. ಅದು ಸೀರಿಯಸ್ ಕೇಸ್ ಆಗಿದ್ದರಿಂದ ಡಾಕ್ಟ್ರು ಉಳಿದವರನ್ನು ಬಿಟ್ಟು ಅವಳ ಕಡೆ ಹೋದರು. ಅವಳ ಮನೆಯವರು, ಅಕ್ಕ ಪಕ್ಕದವರು ರಕ್ತ ಬರಬಾರದೆಂಬ ಕಾರಣಕ್ಕೆ ಗಾಯದ ಮೇಲೆಲ್ಲಾ ಚಾ ಸೊಪ್ಪು ಹಾಕಿದ್ದರು. ಹೀಗೆ ಗಾಯವಾದರೆ ಚಾ ಸೊಪ್ಪು ಹಾಕುವುದು ಹಳ್ಳಿಯಲ್ಲಿ ವಾಡಿಕೆ. ಅದನ್ನು ನೋಡಿದ್ದೇ ತಡ, ಡಾಕ್ಟ್ರಿಗೆ ಕೆಟ್ಟ ಕೋಪ ಬಂತು. ಕೋಪದಲ್ಲೂ ಹಾಸ್ಯ ತರುವ ಅವರು- "ಸ್ವಲ್ಪ ಸಕ್ಕರೆ ಮತ್ತು ಹಾಲು ಹಾಕಿ ಬಿಟ್ಟಿದ್ರೆ ಚಾ ನೇ ಆಗಿ ಹೋಗ್ತಿತ್ತಲ್ಲೋ!" ಎಂದು ಅವಳ ಮಗನ ಕಡೆ ನೋಡಿ ಬೈದರು. ಅವನು ನಗಬೇಕೋ, ಸುಮ್ಮನೆ ನಿಂತುಕೊಳ್ಳಬೇಕೋ ತಿಳಿಯದೆ ಕಕ್ಕಾಬಿಕ್ಕಿಯಾದ. ಗಾಯವನ್ನೆಲ್ಲ ಸ್ವಚ್ಛ ಮಾಡಿ ಮುಗಿದ ಮೇಲೆ "ದೊಡ್ಡ ಗಾಯ ಇದೆ, ಹೊಲಿಗೆ ಹಾಕಬೇಕು" ಎಂದು ಡಾಕ್ಟ್ರು ಹೇಳಿದ್ರು. "ಹೊಲಿಗೆ" ಎಂಬ ಶಬ್ದ ಆ ಹೆಂಗಸಿನ ಕಿವಿಗೆ ಬಿದ್ದಿದ್ದೇ  ತಡ ಅವಳ ಮೈಯಲ್ಲಿ ಅವ್ಯಕ್ತ ಶಕ್ತಿಯೊಂದು ಹೊಕ್ಕಿಬಿಟ್ಟಿತು. ಆ ಶಕ್ತಿ ಆ ಊರ ದೇವಿಯಂತೆ. ಕೂತಲ್ಲಿಯೇ ಕುಣಿದಾಡಲಾರಂಭಿಸಿದಳು. ಹೊಲಿಗೆ ಬೇಡವೆಂದು ಕೂಗಲಾರಂಭಿಸಿದಳು. ಅವಳ ಮೈಮೇಲೆ ದೇವಿ ಬಂದಿದೆ ಎಂದು ತಿಳಿದದ್ದೇ ತಡ, ಆಸ್ಪತ್ರೆಯಲ್ಲಿ ಇರುವವರೆಲ್ಲಾ ಹೋಗಿ ಅವಳ ಕಾಲಿಗೆ ಬಿದ್ದು ನಮಸ್ಕರಿಸಲು ಶುರು ಮಾಡಿದರು. ಕ್ಷಣದಲ್ಲಿ ಆಸ್ಪತ್ರೆ ದೇವಸ್ಥಾನವಾಗಿ ಹೋಯಿತು. ಅದನ್ನು ನಿಯಂತ್ರಣಕ್ಕೆ ತರಲೆಂದು ಉಗ್ರ ಸ್ವರದಲ್ಲಿ ಡಾಕ್ಟ್ರು ಕಿರುಚಿದರು- "ಈಗ ನೀವು ಹೀಗೇ ಮಾಡ್ತಿದ್ರೆ ನನಗೆ ದೆವ್ವ ಮೈ ಮೇಲೆ ಬರ್ತದೆ. ಒಂದು ಸಲ ಮೈಮೇಲೆ ಬಂತು ಅಂದ್ರೆ ನಿಮ್ಮಲ್ಲಿ ಯಾರನ್ನೂ ಬಿಡುವುದಿಲ್ಲ . ಹೀಗೆ ತಪರಾಕಿ ಬಾರಿಸ್ತೇನೆ ಅಂದ್ರೆ ಜೀವನ ಪೂರ್ತಿ ನೆನಪಿರಬೇಕು." ಡಾಕ್ಟ್ರು ಬಿಟ್ಟ ತಿರುಗುಬಾಣದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದಷ್ಟೇ ಅಲ್ಲ, ಅವಳ ಮೈಮೇಲೆ ಬಂದ ದೇವಿ ಕೂಡ ಓಡಿ ಹೋಗಿದ್ದಳು!

ಅಷ್ಟರಲ್ಲಿ ಸಂಜೆ ಏಳಾಗಿತ್ತು. ಆಸ್ಪತ್ರೆ ಮುಚ್ಚುವ ಸಮಯ. ಡಾಕ್ಟರಿಗೆ ಸುಸ್ತಾಗಿ ಮನೆಗೆ ಹೋಗುವ ತವಕವಿದ್ದರೂ, ರೋಗಿಗಳಿಗೆ ಅಲ್ಲಿಂದ ಕದಲುವ  ಮನಸ್ಸಿರಲಿಲ್ಲ. ಆಸ್ಪತ್ರೆಯ ಈ ವಾತಾವರಣದ ಮಧ್ಯೆ ತಮ್ಮ ಕಾಯಿಲೆಯನ್ನೇ ಮರೆತು ಹೋಗಿದ್ದರು ಅವರು. ಇನ್ನು ಮನೆಗೆ ಹೋದರೆ- "ಜ್ವರ, ಮೈ ಕೈ ನೋವು ಜಾಸ್ತಿಯಾಗುವುದೋ, ಇನ್ನೂ ಸ್ವಲ್ಪ ಹೊತ್ತು ಇಲ್ಲೇ ಇದ್ದರೆ ಕಾಯಿಲೆ ಪೂರ್ಣ ಗುಣವಾಗುತ್ತಿತ್ತೇನೋ" ಎಂದು ಮನಸ್ಸಲ್ಲಿ ಮಂಡಕ್ಕಿ ತಿನ್ನುತ್ತ, ಮನಸ್ಸಿಲ್ಲದ ಮನಸ್ಸಿನಿಂದ ಮನೆ ಕಡೆ ಹೆಜ್ಜೆ ಹಾಕಿದರು. 

4 comments:

  1. ಪರೇಶ್
    ತಿಳಿ ಹಾಸ್ಯದಲ್ಲಿ ಆಸ್ಪತ್ರಾಯಣ ತುಂಬಾನೇ ಚೆನ್ನಾಗಿದೆ.
    ಮುಂದುವರಿಯುತ್ತದಲ್ವಾ,,...?

    ReplyDelete
  2. ಹದವಾದ ಹಾಸ್ಯ ಮಿಶ್ರಿತ ಬರಹ. ಮೆಚ್ಚುಗೆಯಾಯ್ತು.

    ಹಳ್ಳಿ ಹೆಂಗಸಿನ ಅಮಾಯಕತೆ ಮತ್ತು ವೈದ್ಯರ ತಾಳ್ಮೆಯನ್ನು ಪರೀಕ್ಷಿಸಿದ ಘಟನೆ.

    ReplyDelete
  3. ತುಂಬಾ ಚೆಂದ ಇದೆ ಗೆಳಯ .. ಆದರೆ ಮುಂದಿನ ಬಾರಿ ಮತ್ತೊಂದಿಷ್ಟು ಹೆಚ್ಚಿಗೆ ಸಂಭಾಷಣೆಗಳು ಇರಲಿ.. ಮಾತಿನಲ್ಲಿ ಬಳಸಿದ ಕನ್ನಡ ಭಾಷೆಯ ಸೊಗಡು ತುಂಬಾ ಸೊಗಸಾಗಿದೆ .. :)

    ReplyDelete
  4. ಮಾತಿನಲ್ಲಿನ ಹಾಸ್ಯದ ವಿಶೇಷತೆ ಮತ್ತು ಸುತ್ತಮುತ್ತಲಿನ ವಾತಾವರಣವನ್ನು ವಿವರಿಸುವ ನಿಮ್ಮ ನಿರೂಪಣಾ ವಿಧಾನದಲ್ಲೂ ಕೂಡ ಒಳ್ಳೆಯ ಹಾಸ್ಯವಿದೆ .. :)

    ReplyDelete