Thursday, 27 December 2012

ಹೀಗೊಬ್ಬ ಕ್ರಾಂತಿಕಾರಿ

ಚೌತಿಯ ರಜೆಗೆ ಊರಿಗೆ ಹೋಗಬೇಕಿತ್ತು. ಬಸ್ ಮುಷ್ಕರ ಇದ್ದುದರಿಂದ ಮೆಜೆಸ್ಟಿಕ್ ಗೆ ತಲುಪುವಷ್ಟರಲ್ಲೇ ಬಳಲಿ ಬೆಂಡಾಗಿದ್ದೆ. ನಿಗದಿತ ಸಮಯಕ್ಕಿಂತ ತಡವಾಗಿಯೇ ಬಸ್ ಬಂತು. "ಉಫ್" ಎನ್ನುತ್ತಾ ಲಗೇಜನ್ನೆಲ್ಲ ಒಳಗೆ ಹಾಕಿ ಏದುಸಿರು ಬಿಡುತ್ತ ಬಸ್ಸಿನೊಳಗೆ ಹೋಗಿ ಸೀಟಿನ ಮೇಲೆ ಕೂತಿದ್ದೇ ತಡ ನಿದ್ದೆ ಎಳೆಯತೊಡಗಿತು. ಬಸ್ಸು ಕೂಡ ಬಿಟ್ಟಿತು. ಇನ್ನೇನು ನಿದ್ದೆ ಬರುತ್ತದೆ ಅನ್ನುವಷ್ಟು ಹೊತ್ತಿಗೆ ಹಿಂದಿನ ಸೀಟಿನಿಂದ ಯಾರೋ ಬಡಬಡಿಸುತ್ತಿರುವುದು ಕೇಳಿತು. ನಿದ್ದೆಯಿಂದ ಹೊರಬಂದು ಹಿಂತಿರುಗಿ ನೋಡಿದೆ. ಒಬ್ಬ ಇಳಿವಯಸ್ಸಿನ ವ್ಯಕ್ತಿ. ಅರವತ್ತೋ, ಎಪ್ಪತ್ತೋ ಆಗಿರಬಹುದು ಅಂದುಕೊಳ್ಳಿ. ಗೌರವಾನ್ವಿತರಂತೆ ಕಾಣುತ್ತಿದ್ದರು. ಬಿಳಿ ಪಂಚೆ, ಬಿಳಿ ಶರ್ಟು, ಚಿನ್ನದ ವರ್ಣದ ಕನ್ನಡಕ, ಇವೆಲ್ಲದರೊಂದಿಗೆ ಮುಖದ ಮೇಲೆ ಗಾಂಭೀರ್ಯ ಎದ್ದು ಕಾಣುತ್ತಿತ್ತು. ಒಬ್ಬನೇ ಬಡಬಡಾಯಿಸುತ್ತಿದ್ದಾನೆ. ಅರವತ್ತಕ್ಕೆ ಅರಳು ಮರಳು ಎನ್ನುವುದನ್ನು ಕೇಳಿದ್ದೇನೆ. ಇದ್ದರೂ ಇರಬಹುದೇನೋ ಎಂದು ಮುಂದೆ ತಿರುಗಿ ಸುಮ್ಮನೇ ಒಂದು ಬಾರಿ ನಕ್ಕೆ. ಆಮೇಲೆ ಒಬ್ಬರೇ ಏನು ಮಾತಾಡಿಕೊಳ್ಳುತ್ತಿರಬಹುದು ಎಂಬ ಅತೀವ ಕುತೂಹಲ ಹುಟ್ಟಿಕೊಂಡು ಅವರ ಮಾತಿಗೆ ಕಿವಿ ಕೊಟ್ಟೆ."'ಈ ದೇಶ ಹಾಳಾಗುತ್ತಿರುವುದು ನಮ್ಮ ನಿರ್ಲಕ್ಷದಿಂದಲೇ. ಅಪರಾಧಿಗಳಿಗೆ ಗಲ್ಲು ಕೊಡಬೇಕು. ಅದು ಬಿಟ್ಟು ಅವರನ್ನ ತಲೆ ಎತ್ತಿಕೊಂಡು ಊರೊಳಗೆ ಓಡಾಡಲಿಕ್ಕೆ ಬಿಟ್ರೆ ನಮ್ಮ ದೇಶದ ಉದ್ಧಾರ ಸಾಧ್ಯವೇ? ದೇಶಕ್ಕೋಸ್ಕರ ಹೋರಾಟ ಮಾಡಿದ ಆ ಭಗತ್ ಸಿಂಗ್ ನೇಣಿಗೆ ತಲೆ ಕೊಟ್ಟು ಹೋದ. ದೇಶಕ್ಕೆ ಕಳಂಕ ತರೋ ಇಂಥವರು ಹೆದರಿಕೆ ಇಲ್ಲದೆ ಓಡಾಡಿಕೊಂಡಿದ್ದಾರೆ. ನಾನು ಬಿಡುವುದಿಲ್ಲ. ನೀವ್ ಯಾರ ಕಣ್ಣಿಂದ ಬೇಕಾದ್ರೂ ತಪ್ಪಿಸಿಕೊಳ್ಳಬಹುದು. ದೇವರ ಕಣ್ಣಿಂದ ತಪ್ಪಿಸಿಕೊಳ್ಳಲಿಕ್ಕೆ  ಸಾಧ್ಯ ಉಂಟಾ? ಇಲ್ಲ. ಖಂಡಿತ ಇಲ್ಲ." ಈ ಮಾತುಗಳನ್ನು ಕೇಳಿ ನನ್ನ ಮನಸ್ಸಿನ ಭಾವನೆಗಳು ಬದಲಾದವು. ಆ ವ್ಯಕ್ತಿಯ ಬಗ್ಗೆ ಗೌರವ ಜಾಸ್ತಿಯಾಯಿತು. ಅವರು ಹೇಳಿದ ಮಾತುಗಳೇ ಮನದಲ್ಲಿ ಮತ್ತೆ ಮತ್ತೆ ಕಾಡತೊಡಗಿದವು. ನಿದ್ದೆ ಓಡಿ ಹೋಗಿತ್ತು.

*********************

ಗೂನೂರು ಎಂಬ ಊರು. ಅಪ್ಪಟ ಹಳ್ಳಿಯೂ ಅಲ್ಲ, ಪಟ್ಟಣವೂ ಅಲ್ಲ. ಬದುಕಲು ಎಲ್ಲ ಥರದ ಅನುಕೂಲಗಳೂ, ಸಂಪನ್ಮೂಲಗಳೂ ಇರುವಂಥ ಊರು. ಉತ್ತಮ ಬಟ್ಟೆ ಅಂಗಡಿಗಳು, ಸ್ಕೂಟರ್ ಷೋ ರೂಂ ಮುಂತಾದವುಗಳೆಲ್ಲ ಇತ್ತೆಂದರೆ ನೀವೇ ಊಹೆ ಮಾಡಿಕೊಳ್ಳಿ ಎಷ್ಟು ದೊಡ್ಡ ಊರಿರಬಹುದೆಂದು. ಆ ಊರಿಗೆ ತಾಕಿಕೊಂಡೇ ಹತ್ತು ಹಲವಾರು ಹಳ್ಳಿಗಳಿವೆ. ಎಲ್ಲ ಹಳ್ಳಿಗಳೂ ಗೂನೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲೇ ಬರುವಂಥವು. ತಕ್ಕ ಮಟ್ಟಿಗೆ ಶಾಂತಿಯಿದ್ದ ಊರು. ಒಳಗೊಳಗೇ ಜಗಳ, ಗೌಜಿಗಳು ಇದ್ದರೂ ಬೂದಿ ಮುಚ್ಚಿದ ಕೆಂಡದಂತೆ. ಜನರು ಆರಾಮವಾಗಿ ಜೀವನ ನಡೆಸಿಕೊಂಡು ಹೋಗಲು ಅಡ್ಡಿ ಆತಂಕಗಳೇನೂ ಇಲ್ಲ. ಹಬ್ಬ ಹರಿದಿನಗಳು ಬಂತೆಂದರೆ ತಮ್ಮ ತಮ್ಮ ಕೇರಿಗಳಲ್ಲಿ ಜನರೆಲ್ಲಾ ಸೇರಿ ಒಟ್ಟಿಗೆ ಆಚರಣೆ ಮಾಡಿ ತಮ್ಮ ದುಡಿಮೆಯ ಆಯಾಸ ಕಳೆದುಕೊಂಡು ಹೊಸ ಹುರುಪು ತುಂಬಿಕೊಳ್ಳುವ ಪರಿಪಾಠವೂ ಉಂಟು.

ಊರ ಮೂಡಣದಲ್ಲಿ ಒಂದು ಚಿಕ್ಕ ಹಳ್ಳಿ. ಮೂಡಗೂನೂರು ಎಂದು ಜನರು ವಾಡಿಕೆಯಂತೆ ಕರೆದುಕೊಂಡು ಬಂದಿದ್ದಾರೆ. ಇಲ್ಲಿ ವಾಸವಾಗಿರುವ ೯೦ ಶೇಕಡಾ ಜನ ಒಂದು ಪರಿಶಿಷ್ಠ ಪಂಗಡಕ್ಕೆ ಸೇರಿದವರು. ಮುಖ್ಯವಾಗಿ ಗೇರು ಬೀಜವನ್ನು ತೆಗೆಯುವುದು ಇವರ ಕೆಲಸ. ಊರವರೆಲ್ಲ ಅಭ್ಯಾಸವೆಂಬಂತೆ 'ಗೇರು ಬೀಜದವರು'" ಅಂತೆಂದೇ ಕರೆಯುವುದು ಇವರನ್ನು. ಮೊದಲೆಲ್ಲ ಇವರಿಗೆ ಖಾನಾವಳಿಗೆ ಹೋದರೆ ಅವರದೇ ಪ್ರತ್ಯೇಕ ಪ್ಲೇಟ್, ಲೋಟಗಳು ಇರುವುದಂತೆ. ಎಲ್ಲರಿಂದ ದೂರ ಇರುವರಂತೆ. ಈಗ ಆ ಎಲ್ಲ ಪದ್ಧತಿಗಳು ಆಧುನಿಕತೆಯೊಂದಿಗೆ ಮಾಸಿ ಹೋದರೂ ಇವರಲ್ಲಿ ಅನಕ್ಷರಸ್ಥರ ಸಂಖ್ಯೆ ಜಾಸ್ತಿ ಇರುವುದರಿಂದ ಸಮಾಜದಲ್ಲಿ ಉತ್ತಮ ಸ್ಥಾನಮಾನವಿಲ್ಲ. ಇವರನ್ನು ಊರವರು ತಮ್ಮ ಸಮಾರಂಭಕ್ಕಾಗಲೀ, ಊರ ಹಬ್ಬಕ್ಕಾಗಲೀ ಕರೆಯುವ ಪರಿಪಾಠವಿಲ್ಲ. ಇವರು ಊರ ಕಡೆ ಜಾಸ್ತಿ ಕಾಣಸಿಗುವುದು ಪ್ರತಿ ವಾರದ ಸಂತೆಯ ದಿನ. ತಾವು ಮನೆಯಲ್ಲೇ ಬೆಳೆದ ತರಕಾರಿಗಳನ್ನು ಮಾರಲು ತಂದಿರುತ್ತಾರೆ. ಅದಲ್ಲದೆ ಗೇರು ಬೀಜದ ಸೀಸನ್ ನಲ್ಲಿ. ವಾಡಿಕೆ ಎಂಬಂತೆ ಕೆಲವರ ಮನೆಗೆ ಬಂದು ಗೇರು ಬೀಜ ಕೊಟ್ಟು ಅದರ ಬದಲಿಗೆ  ಸೀರೆ ತೆಗೆದುಕೊಂಡು ಹೋಗುವುದುಂಟು. 

ಊರ ಹೃದಯ ಭಾಗದಲ್ಲಿ ರಾಮ ಶಾಸ್ತ್ರಿಗಳ ಮನೆ ಇದೆ. ಮೊದಲಿನಿಂದಲೂ ಶ್ರೀಮಂತರು. ವಂಶ ಪಾರಂಪರಿಕವಾಗಿ ಬಂದ ಆಸ್ತಿಯೇ ಜಾಸ್ತಿ. ಮೊದಲಿನಿಂದಲೂ ಊರ ಪಂಚಾಯತಿಯ ಅಧ್ಯಕ್ಷರಾಗಿದ್ದರಿಂದ ಕೊಳ್ಳೆ ಹೊಡೆದದ್ದು ತುಂಬಾ ಇದೆ. ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾರ್ ಇದೆ. ಒಬ್ಬನೇ ಮಗ ವಿಘ್ನೇಶ. ಕಲಿತದ್ದು ಅಷ್ಟಕ್ಕಷ್ಟೇ. ಡಿಗ್ರೀ ಬೇಕು ಎಂಬ ಉದ್ದೇಶಕ್ಕೆ ಶತಾಯ ಗತಾಯ ಮಾಡಿ ೫ ವರ್ಷ ತೆಗೆದುಕೊಂಡು ಬಿ.ಎ. ಮುಗಿಸಿದ್ದ. ಹಳ್ಳಿಯಲ್ಲಿದ್ದರೂ ಪಟ್ಟಣಕ್ಕಿಂತ ಯಾವುದರಲ್ಲೂ ಕಡಿಮೆ ಇರಲಿಲ್ಲ ಇವನ ಐಷಾರಾಮಿ ಜೀವನ. ಜೇಬು ತುಂಬಾ ಹಣ. ತಿರುಗಾಡಲು ಇನೋವ ಕಾರು. ಜೊತೆಯಲ್ಲಿ ಚೇಲಾಗಳಂತೆ ತಿರುಗಾಡಲು ಊರಿನ ಇಬ್ಬರು ಪಡ್ಡೆ ಹೈಕಳು -ರಾಕೇಶ ಮತ್ತು ಮಂಜ. ಊರವರಿಗೆ ಇವರಿಂದ ತೊಂದರೆ ಕಡಿಮೆ. ಯಾಕೆಂದರೆ ಊರಿಗಿಂತ, ಊರಿಂದ ಸುಮಾರು ೫೦ ಮೈಲಿ ದೂರದಲ್ಲಿದ್ದ ಪಟ್ಟಣದಲ್ಲಿ ಇರುವುದೇ ಜಾಸ್ತಿ ಇವರು. ಅಲ್ಲಿ ಇಸ್ಪೀಟು, ಜೂಜು, ಹೆಣ್ಣಿನ ಸಂಘ ಎಲ್ಲ ಇತ್ತು. ಊರಿಗೆ ಬಂದಾಗ ಮಾತ್ರ ಕುಲ ಮತ್ತು ಅಪ್ಪನ ಹೆಸರಿನ ಹಣೆಪಟ್ಟಿ ಕಟ್ಟಿಕೊಂಡು ಮರ್ಯಾದಸ್ಥನಂತೆ ಅಡ್ಡಾಡುತ್ತಿದ್ದ. ಊರವರಿಗೆಲ್ಲ ಒಳಗೊಳಗೇ ಇವನ ಹಣೆಬರಹ ಗೊತ್ತಿದ್ದರೂ, ದೊಡ್ಡ ಜನ ಎಂಬ ಕಾರಣಕ್ಕೆ ಹೊರಗಿಂದ ಅಪಾರ ಗೌರವ ಕೊಡುತ್ತಿದ್ದರು.

ಗೇರು ಬೀಜದ ಸೀಸನ್ ಶುರುವಾಗಿತ್ತು. ಮೂಡುಗೂನೂರಿನ ಮಾದೇವಿ, ರಾಮ ಶಾಸ್ತ್ರಿಗಳ ಮನೆಗೆ  ಪ್ರತಿವರ್ಷ ಬಂದು ಗೇರು ಬೀಜ ಕೊಟ್ಟು ಸೀರೆ ತೆಗೆದುಕೊಂಡು ಹೋಗುವ ರೂಢಿ ಇತ್ತು. ರಾಮ ಶಾಸ್ತ್ರಿಗಳ ಹೆಂಡತಿ ಲಕ್ಷ್ಮಮ್ಮ ಆ ಸಮಯದೊಳಗಾಗಿಯೇ ಅವರಿಗೆಂದು ಹೊಸ ಸೀರೆ ತಂದಿಟ್ಟು ಆಗಿತ್ತು. ಲಕ್ಷ್ಮಮ್ಮ ಭಾವುಕ ಜೀವಿ. ಬಡವರ ಮೇಲೆ ಅನುಕಂಪ  ಜಾಸ್ತಿ. ವಿಘ್ನೇಶನ ನಡವಳಿಕೆಗಳು ಅವಳಿಗೆ ಚೂರೂ ಹಿಡಿಸುತ್ತಿರಲಿಲ್ಲ. ಆದರೂ ಏನೂ ಮಾಡುವಂತಿರಲಿಲ್ಲ. ಆಗಲೇ ಕೈ ತಪ್ಪಿ ಹೋಗಿದ್ದ. ಮಾದೇವಿ ಬರುತ್ತಾ ತನ್ನ ಮಗಳು ಪದ್ಮಳನ್ನು ಕರೆದುಕೊಂಡು ಬಂದಿದ್ದಳು. ಸಾಮಾನ್ಯವಾಗಿ ಇವರ ಪಂಗಡದಲ್ಲಿ ಹರೆಯದ ಹುಡುಗಿಯರು ಮನೆಯಿಂದ ಹೊರಗೆ ಬೀಳುವುದು ಕಡಿಮೆ. ಆದರೆ ಅವಳ ಮೈಗೆ ಹುಷಾರಿಲ್ಲದ್ದರಿಂದ ಡಾಕ್ಟರ್ ಹತ್ತಿರ ಹೋಗುವ ಕೆಲಸವೂ ಜೊತೆಗೇ ಆಗಲಿ ಎಂದು ಕರೆದುಕೊಂಡು ಬಂದಿದ್ದಳು. ಮರುದಿನ ಪಕ್ಕದೂರಿನಲ್ಲಿ ರಾಮಾ ಶಾಸ್ತ್ರಿಯವರ ಸಂಬಂಧಿಯೊಬ್ಬರ ಮದುವೆ ಇದ್ದುದರಿಂದ ಅದರ ತಯಾರಿಯ ಗಡಿಬಿಡಿಯಲ್ಲೇ ಇದ್ದರು ಲಕ್ಷ್ಮಮ್ಮ. ಅಷ್ಟರಲ್ಲೇ ಮಾದೇವಿ ಬರುವುದನ್ನು ನೋಡಿ, ಅವರನ್ನು ಹೊರಗೆ ಚಾವಡಿಯ ಮೇಲೆ ಕುಳಿತುಕೊಳ್ಳಲು ಹೇಳಿ, ಒಳಗೆ ಹೋದರು. ಅವರಿಗೆ ಮತ್ತೇನೋ ಕೆಲಸವಿದ್ದುದರಿಂದ, ಸೀರೆಯನ್ನು ವಿಘ್ನೇಶನ ಕೈಗೆ ಕೊಟ್ಟು ಅವರಿಗೆ ಸೀರೆ ಕೊಟ್ಟು ಕಳುಹಿಸು ಎಂದು ಹೇಳಿ ಅಡಿಗೆ ಮನೆ ಕಡೆ ಹೋದರು. ವಿಘ್ನೇಶ ಅಸಡ್ಡೆಯಿಂದಲೇ ಚಾವಡಿಯ ಕಡೆ ಹೋದ. ಆಗ ಅವನ ಕಣ್ಣಿಗೆ ಛಕ್ಕನೆ ಬಡಿದಿದ್ದು ಪದ್ಮಳ ಮುಖ. ಹೌದು, ಪದ್ಮ ಸುಂದರ ಹುಡುಗಿ. ಅವರ ಕೇರಿಯಲ್ಲೇ ಅವಳಷ್ಟು ಸುಂದರಿ ಯಾರೂ ಇಲ್ಲ.ಗೋಧಿ ಬಣ್ಣ, ದುಂಡು ಮುಖದೊಂದಿಗೆ, ಮೈ ಕೈ ತುಂಬಿಕೊಂಡಿದ್ದಳು. ಸ್ವಭಾವದಿಂದ ಬಹಳ ಮುಗ್ಧೆ. ಲೋಕಜ್ಞಾನವಿಲ್ಲ. ಊರ ಕೆಲ ಪಡ್ಡೆ ಹೈಕಳು ಅವಳ ಮೇಲೆ ಕಣ್ಣು ಹಾಕಿದ್ದೂ ಇದೆ. ಅವಳನ್ನು ನೋಡಿದೊಡನೆಯೇ ವಿಘ್ನೇಶನ ಮನದಲ್ಲಿ ಹುಚ್ಚು ಕಾಮನೆಗಳ ಪ್ರವಾಹವೇ ಹರಿಯಿತು. ಎರಡು ಕ್ಷಣ ಅಲ್ಲೇ ನಿಂತ . ಏನೇನೋ ಆಲೋಚಿಸಿದ. ಸೀರೆಯನ್ನು ಅಲ್ಲೇ ಪಕ್ಕಕ್ಕೆ ಎಸೆದು ಅವರ ಬಳಿ ಹೋಗಿ, "'ಅಮ್ಮ ಸೀರೆ ತಂದು ಇಟ್ಟಿಲ್ಲ. ಇವತ್ತು ತರ್ತಾರಂತೆ. ನಾಳೆ ಬಂದು ತೆಗೆದುಕೊಂಡು ಹೋಗು. ಮತ್ತೆ ಸುಮ್ಮನೇ ನೀನು ಬರ್ಬೇಕಂತಿಲ್ಲ. ನಿನ್ನ ಮಗಳನ್ನು ಕಳಿಸು. ಸಾಕು'" ಎಂದು ಒಳಗೆ ಹೋದ.

ಈಗಾಗಲೇ ಅವನ ಮನದಲ್ಲಿ ಹತ್ತು ಹಲವು ಆಲೋಚನೆಗಳು ಟಿಸಿಲೊಡೆದು ನಾಟ್ಯವಾಡುತ್ತಿದ್ದವು. ತಾನು, ತನ್ನತನವನ್ನೇ ಮರೆತು ಕಾಮ ಸಾಗರದಲ್ಲಿ ತೇಲಾಡುತ್ತ ಅನುಕ್ಷಣ ನಾಳೆಯ ನಿರೀಕ್ಷೆಯಲ್ಲಿ ಮೈಮರೆತಿದ್ದ. ಮರುದಿನ ಬೆಳಿಗ್ಗೆ ಎಲ್ಲ ಪಕ್ಕದೂರಿಗೆ ಹೋಗಲು ತಯಾರಾಗುತ್ತಿದ್ದರು. ವಿಘ್ನೇಶನೂ ಅವರ ಜೊತೆ ಹೋಗುವುದೆಂದಾಗಿತ್ತು.ಆದರೆ ಅವನ ಮನದಲ್ಲಿ ಈಗಾಗಲೇ ಬೇರೊಂದು ಕಾರ್ಯಕ್ರಮ ನಿಗದಿಯಾಗಿದ್ದರಿಂದ, ಪಟ್ಟಣದಲ್ಲಿ ಹೊಸ ಬಿಜಿನೆಸ್ಸಿನ ಒಂದು ತುರ್ತು ಕೆಲಸವಿದೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಂಡ. ಮನೆಯವರೆಲ್ಲ ಹೋದರು. ವಿಘ್ನೇಶನ ಕೈ ಕಾಲುಗಳು ಆಡುತ್ತಿರಲಿಲ್ಲ. ಏನು ಮಾಡಬೇಕೆಂದು ತಿಳಿಯದೆ ಆಕಡೆ ಈಕಡೆ ಅಡ್ಡಾಡುತ್ತ, ಪದ್ಮಳ ದಾರಿಯನ್ನೇ ಕಾಯುತ್ತಿದ್ದ. ಮತ್ತೆ ಮನದೊಳಗೆ- "'ನಾನು ಅವಳಿಗೆ ಮಗಳೊಬ್ಬಳನ್ನೇ ಕಳಿಸಲು ಹೇಳಿದ್ದೇನೋ ನಿಜ. ಆದರೆ ಜೊತೆಗೆ ಅವಳೂ ಬಂದರೆ ಏನು ಮಾಡುವುದು?'" ಎಂಬ ಆಲೋಚನೆಗಳು. ಹೀಗೆ ಆಲೋಚನೆಗಳ ಸುಳಿಯೊಳಗೆ ಬಿದ್ದಿರುವಾಗಲೇ ದೂರದಿಂದ ಪದ್ಮ ಬರುವುದು ಕಾಣಿಸಿತು. ಕಿಡಕಿಯಿಂದ ಬಗ್ಗಿ ಬಗ್ಗಿ ನೋಡಿದ- ಜೊತೆಗೆ ಮಾದೇವಿ ಎಲ್ಲಾದರೂ ಬಂದಿರಬಹುದೋ ಎಂದು. ಇಲ್ಲ. ಒಬ್ಬಳೇ ಬರುತ್ತಿದ್ದಳು. ಖುಷಿಯಿಂದ ಇದ್ದ ಜಾಗದಲ್ಲೇ ಒಮ್ಮೆ ಕುಣಿದ. ಚಾವಡಿಯ ಬಳಿ ಅವಳು ಬರುತ್ತಿದ್ದಂತೆಯೇ- '"ಒಳಗೆ ಬಾ, ಚಾ ಕುಡಿಯುವಿಯಂತೆ' ಎಂದು ಕರೆದ. ಅವಳು ಮುಜುಗರದಿಂದ ಬೇಡವೆಂಬಂತೆ ತಲೆ ಅಲ್ಲಾಡಿಸಿದಳು. ಮತ್ತೊಮ್ಮೆ ಕರೆದ. ಆಗ ಉಪಾಯವಿಲ್ಲದೆ ಹೋದಳು. ಮನೆಯಲ್ಲಿ ಯಾರೂ ಇಲ್ಲವೆಂದು ಅವಳಿಗೆಲ್ಲಿ ಗೊತ್ತಿತ್ತು ಪಾಪ! ವಿಘ್ನೇಶ ಒಳಗೆ ಹೋದವನೇ ಆತುರಾತುರದಿಂದ ಅಲ್ಲೇ ಪಕ್ಕದಲ್ಲಿ ಇಟ್ಟಿದ್ದ ಸೀರೆ ಎತ್ತಿಕೊಂಡ. ಅವಳ ಹತ್ತಿರ ಬಂದ. ಅವಳು ಧರಿಸಿದ ಕಪ್ಪು ಶಂಖದ ಸರವನ್ನು ಕುತೂಹಲದಿಂದ ನೋಡಿದಂತೆ ಮಾಡಿ, ಅವಳನ್ನು ಮುಟ್ಟಲೆಂದೇ ಅದರ ಮೇಲೆ ಕೈ ಹಾಕಿದ್ದ. ಮುಜುಗರ, ಹೆದರಿಕೆ ಎರಡೂ ಆಗಿ ಆಕೆ ಥಟ್ಟನೆ ದೂರ ಹೋದಳು. ಅವಳನ್ನು ಸುಧಾರಿಸಲು ವಿಘ್ನೇಶ- 'ಯಾಕೆ ಹೆದರುತ್ತೀ, ನಾನೇನು ಹುಲಿಯಲ್ಲ. ನಂಗೆ ಈ ಜಾತಿ ಧರ್ಮ ಎಲ್ಲದರ ಬಗ್ಗೆ ನಂಬಿಕೆ ಇಲ್ಲ. ಇರೋದು ಒಂದೇ ಜಾತಿ.ಅದು ಮನುಷ್ಯರ ಜಾತಿ."' ಎಂದು ಬೊಗಳೆ ಬಿಟ್ಟ. ಅವಳು ಹೆದರಿ ಹೆದರಿಯೇ- " 'ಸೀರೆ ಕೊಡಿ, ನಾನು ಹೋಗ್ತೇನೆ. ತಡ ಆಯ್ತು ನಂಗೆ"' ಎಂದು ಹೇಳಿದಾಗ, '"ಒಮ್ಮೆ ಸೀರೆ ಉಟ್ಟು ತೋರಿಸು ಮಾರಾಯ್ತಿ, ನಿನಗೆ ಒಪ್ತದಾ ನೋಡ್ವಾ. ಒಳಗಿನ ರೂಂ ಒಳಗೆ ಹೋಗಿ ಉಟ್ಟು ನೋಡು. ಆಮೇಲೆ ಎಲ್ಲಿ ಬೇಕಾದ್ರೂ ಹೋಗು"' ಎಂದು ಶತಾಯ ಗತಾಯ ಒತ್ತಾಯ ಮಾಡಿದ. ಅಲ್ಲಿಂದ ಮುಂದೆ ನಡೆದದ್ದು ದುರಂತ. ತನ್ನ ಉರಿಯ ಕಾಮದ ಕಣ್ಣುಗಳಿಂದ, ಅವಳ ಕನ್ಯತ್ವವನ್ನು ಸುಟ್ಟು ಹಾಕಿದ್ದ. ಅವಳ ಮುಗ್ಧತೆಯೇ ಅವಳಿಗೆ ಮುಳುವಾಯಿತು.ಅವಳು ಸುಧಾರಿಸಿಕೊಳ್ಳುವುದರ ಒಳಗೆ ಎಲ್ಲ ಮುಗಿದು ಹೋಗಿತ್ತು. 

ಈ ಘಟನೆಗೆ ಸಾಕ್ಷಿಯೆಂಬಂತೆ, ಒಂದು ಮುಗ್ಧ ಪಿಂಡ ಪದ್ಮಳ ಹೊಟ್ಟೆಯೊಳಗೆ ಮೊಳಕೆಯೊಡೆದಿತ್ತು. ದಿನದೊಳಗೆ ಊರಲ್ಲೆಲ್ಲ ಕಾಳ್ಗಿಚ್ಚಿನಂತೆ ಸುದ್ಧಿ ಹಬ್ಬಿತು. ಒಳಗೊಳಗೇ ಗುಸು ಗುಸು ನಡೆದರೂ ಮೇಲ್ನೋಟಕ್ಕೆ ಜನ ಏನೂ ತಿಳಿಯದಂತೆ ಆಡುತ್ತಿದ್ದರು. "'ದೊಡ್ಡ ಜನರ ವ್ಯಾಪಾರ, ನಮಗ್ಯಾಕೆ ಬೇಕು ಸ್ವಾಮೀ. ಪದ್ಮಳೋ, ಕೀಳು ಕುಲದವಳು. ಅವರಿಗೆ ನಡೆಯತ್ತೆ  ಇವೆಲ್ಲಾ. ಹೀಗಾಯ್ತು ಅಂತ ರಾಮ ಶಾಸ್ತ್ರಿಗಳ ಮಗನನ್ನ ಅವಳಿಗೆ ಕೊಟ್ಟು ಮದ್ವೆ ಮಾಡ್ಲಿಕ್ಕೆ ಆಗ್ತದೆಯೇ?'" ಎಂದು ಮಾತನಾಡಿ ತಮ್ಮ ತಮ್ಮ ಕೆಲಸ ತಾವು ನೋಡಿಕೊಳ್ಳುತ್ತಿದ್ದರು. ಇನ್ನು ಪದ್ಮಳ ಮನೆಯವರೋ, "'ನಮ್ಮಿಂದ ಏನಾಗ್ತದೆ. ಕೆಟ್ಟ ಘಳಿಗೇಲಿ ಏನೇನೆಲ್ಲ ಆಗ್ಹೋಯ್ತು. ಅವರೋ, ದೊಡ್ಡ ಜನ. ಎಲ್ಲ ಮುಚ್ಚಿ ಹಾಕ್ತಾರೆ. ಕಷ್ಟ ಅನುಭವಿಸೋರು ನಾವು. ಏನೂ ಮಾಡ್ದೆ ಹೋಗ್ಲಿ ಅಂತ ಕೂತ್ಕೊಂಡರು ಕಷ್ಟಾನೇ. ನ್ಯಾಯ ಬೇಕಂತ ಎದ್ದು ನಿಂತರೆ ಅದು ದೊಡ್ಡ ಕಷ್ಟ. ಒಟ್ಟಿನಲ್ಲಿ ನಮ್ಮ ಬದುಕಿಗೆ ಅರ್ಥ ಇಲ್ಲ"' ಎಂಬ ಧರ್ಮಸಂಕಟದಲ್ಲಿ ನರಳಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ನ್ಯಾಯಕ್ಕೋಸ್ಕರ ನಿರ್ಭೀತಿಯಿಂದ ಎದ್ದು ನಿಂತವರು ಸುಬ್ಬಾ ಶಾಸ್ತ್ರಿ ಎಂಬ ವ್ಯಕ್ತಿ. ಇವರು ರಾಮಾ ಶಾಸ್ತ್ರಿಗಳ ಮನೆಯಲ್ಲಿ ಲೆಕ್ಕಿಗರು.ವಯಸ್ಸು ಅರವತ್ತು ಇರಬಹುದು. ಅಪ್ಪಟ ಬ್ರಹ್ಮಾಚಾರಿ, ದೇಶಭಕ್ತ, ಶುದ್ಧ ವ್ಯಕ್ತಿತ್ವದ ಮನುಷ್ಯ. ಕೈಲಾಗದವರಿಗೆ ಸಹಾಯ ಮಾಡುವ ಸಜ್ಜನ. ಅನ್ಯಾಯದ ವಿರುದ್ಧ ಹೋರಾಡುವ ನಿಷ್ಠುರವಾದಿ. ರಾಮಾ ಶಾಸ್ತ್ರಿಗಳ ದಾಯಾದಿ ಕೂಡ ಹೌದು. ಊರಲ್ಲಿ ನಡೆಯುತ್ತಿರುವ ಮತ್ತು ರಾಮಾ ಶಾಸ್ತ್ರಿಗಳ ಮನೆಯಲ್ಲಿ ನಡೆಯುತ್ತಿದ್ದ ಮಾತುಕತೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸುಬ್ಬಾ ಶಾಸ್ತ್ರಿಗಳು ಇಕ್ಕಟ್ಟಿಗೆ ಸಿಲುಕಿದ್ದರು. "'ಉಪ್ಪು ತಿಂದ ಮನೆಯ ಮಗ. ಅವನ ವಿರುದ್ಧ ತಾನು ಎದ್ದು ನಿಲ್ಲುವುದೇ?'" ಎಂಬ ಆಲೋಚನೆ ಒಂದೆಡೆಯಾದರೆ, '"ಒಬ್ಬ ಅಮಾಯಕ ಹುಡುಗಿ, ಈ ಕ್ರೂರಿಯ ಕಾಮಕ್ಕೆ ಬಲಿಯಾಗಿದ್ದಾಳೆ. ಎಲ್ಲವನ್ನೂ ನೋಡಿಯೂ ನೋಡದಂತೆ ಸುಮ್ಮನಿರುವುದೇ?"' ಎಂಬ ಆಲೋಚನೆ ಮತ್ತೊಂದೆಡೆ. ಏನೇ  ಆಗಲಿ ಒಳಗೊಳಗೇ ಸಮಸ್ಯೆ ಬಗೆ ಹರಿಸೋಣ ಎಂದು ರಾಮಾ ಶಾಸ್ತ್ರಿಗಳ ಬಳಿ ಹೋಗುತ್ತಾನೆ. "  'ಒಬ್ಬ ಅಮಾಯಕ ಹುಡುಗಿಗೆ ನಿಮ್ಮ  ಮಗನಿಂದ ಅನ್ಯಾಯವಾಗಿದೆ. ಊರಿಗೇ ನ್ಯಾಯ ಹೇಳುವ ದೊರೆ ನೀವು. ನಿಮ್ಮ ಮನೆ ಮಾಡೇ ಸೋರುವುದು ಎಷ್ಟು ಸರಿ? ಆಗಿದ್ದು ಆಗಿ ಹೋಯಿತು ಶಾಸ್ತ್ರಿಗಳೇ. ಅವಳ ಹೊಟ್ಟೆಯಲ್ಲಿ ನಿಮ್ಮ ವಂಶದ ಕುಡಿ ಬೆಳೆಯುತ್ತಿದೆ. ಗೌರವಾನ್ವಿತವಾಗಿ ನಿಮ್ಮ ಮಗನ ಮತ್ತು ಮಾದೇವಿಯ ಮಗಳ ಮದುವೆ ಮಾಡಿಸಿ ದೊಡ್ಡ ಮನುಷ್ಯರಾಗಿ."' ಎಂದಾಗ, ರಾಮಾ ಶಾಸ್ತ್ರಿ  ದರ್ಪದಿಂದ-" ಹ್ಹ ಹ್ಹ ಹ್ಹ, ನೀನು ಹಾಸ್ಯ ಮಾಡುತ್ತಿಲ್ಲ ತಾನೇ. ಆ ಪಾಪದ ಪಿಂಡ ನಮ್ಮ ವಂಶದ ಕುಡಿಯೇ?! ಏನೋ ಕೆಟ್ಟ ಘಳಿಗೆ. ಮಗನಿಂದ ತಪ್ಪಾಯಿತು ಎಂದ ಮಾತ್ರಕ್ಕೆ ನನ್ನ ಮಗ, ಅಂದರೆ ಸಾಹುಕಾರ ರಾಮಾ ಶಾಸ್ತ್ರಿಯ ಮಗನನ್ನು, ಆ ಹೊಲೆಯನ ಮಗಳಿಗೆ ಕೊಟ್ಟು ಮದುವೆ ಮಾಡಬೇಕೇ?" ಎಂದ. ಸಿಟ್ಟಿನಿಂದ ಕೆಂಡವಾದ ಸುಬ್ಬಾ ಶಾಸ್ತ್ರಿ- 'ಮದುವೆ ಮಾಡುವ ವಿಷಯ ಬಂದಾಗ ಬಂದ ಈ ಜಾತಿ ಅಂತಸ್ತಿನ ಆಲೋಚನೆ, ನಿಮ್ಮ ಮಗ ಅವಳನ್ನು ಎಂಜಲು ಮಾಡುವಾಗ ಅವನ ತಲೆಯಲ್ಲಿ ಬಂದಿರಲಿಲ್ಲವೇ?' ಎಂದು ಅಲ್ಲಿಂದ ಹೊರಟೇ ಬಿಟ್ಟರು.

ಏನೇ ಆದರೂ ಆ ಹುಡುಗಿಗೆ ನ್ಯಾಯ ಒದಗಿಸಿಯೇ ತೀರುತ್ತೇನೆಂದು ಅವಳ ಮನೆಗೆ ಹೋಗಿ ಮನೆಯವರಿಗೆ ಧೈರ್ಯ ತುಂಬಿ ಕೋರ್ಟು ಮೆಟ್ಟಿಲು ಹತ್ತಿದರು. ಊರ ಕೆಲವು ಹಿರಿಯರ  ಬೆಂಬಲ ಕೇಳಿದರಾದರೂ, ಯಾರೂ ರಾಮಾ ಶಾಸ್ತ್ರಿಗಳ ವಿರುದ್ಧ ಎತ್ತು ಕಟ್ಟಿ ನಿಲ್ಲುವುದಕ್ಕೆ ತಯಾರಿರಲಿಲ್ಲ. ರಾಮಾ ಶಾಸ್ತ್ರಿಗಳ ರಾಜಕೀಯ ಶಕ್ತಿಯಿಂದ ಕೋರ್ಟಿನಲ್ಲಿ ಅವರು ಹಾಕಿದ್ದ ಕೇಸು ಜಾಸ್ತಿ ದಿನ ನಿಲ್ಲಲಿಲ್ಲ. ಆದರೂ ಸುಬ್ಬಾ ಶಾಸ್ತ್ರಿಗಳು ಪದ್ಮಳ ಕುಟುಂಬಕ್ಕೆ ಬೆನ್ನೆಲುಬಾಗಿ ಅವರಿಗೆ ಸ್ಥೈರ್ಯ ತುಂಬುತ್ತಲೇ ಇದ್ದರು. ಅವರಿಗೆ ನ್ಯಾಯ ದೊರಕಿಸಿ ಕೊಟ್ಟೇ ತೀರುತ್ತೇನೆಂಬ ಪಣ ತೊಟ್ಟರು. ಅವಳ ಹೊಟ್ಟೆಯೊಳಗಿರುವ ಮಗುವನ್ನು ತೆಗೆಸುವುದೆಂದು ಪದ್ಮಳ ಮನೆಯವರು ಆಲೋಚನೆ ಮಾಡಿದಾಗ, " 'ಇನ್ನೂ ಜಗವನ್ನೇ ಕಾಣದ, ಏನೂ ತಪ್ಪನ್ನು ಮಾಡದ ಆ ಮೊಗ್ಗನ್ನು ಚಿವುಟದಿರಿ. ನಿಮಗೆ ಬೇಡವಾದರೆ ಅದನ್ನು ನಾನು ದತ್ತು ತೆಗೆದುಕೊಂಡು ಸಾಕುತ್ತೇನೆ.'" ಎಂದು ಅವರಲ್ಲಿ ಧೈರ್ಯ ತುಂಬಿದ್ದಲ್ಲದೇ ಪದ್ಮಳ ಬಾಣಂತನದ ಖರ್ಚನ್ನೂ  ಸಹ ಇವರೇ ನೋಡಿಕೊಂಡರು. ಮುರಿದು ಬೀಳುತ್ತಿದ್ದ ಪದ್ಮಳ ಮನೆಯ ಕಂಬಗಳನ್ನು ತನ್ನ ಹೆಗಲು ಕೊಟ್ಟು ಮತ್ತೆ ನಿಲ್ಲಿಸಿದರು. 

***************************

'"ಒಬ್ಬನ ಜೀವ ತೆಗೆಯುವುದು ಎಷ್ಟು ತಪ್ಪೋ, ಒಂದು ಹೊಸ ಜೀವ ಹುಟ್ಟಿಸಿ ಅದನ್ನು ಅತಂತ್ರ ಮಾಡುವುದು ಅಷ್ಟೇ ತಪ್ಪು. ನೀವು ನಿಮ್ಮ ಎಲ್ಲ ಥರದ ರಾಜಕೀಯ ಶಕ್ತಿಗಳನ್ನು ಉಪಯೋಗಿಸಿಕೊಳ್ಳಬಹುದು. ಆದರೆ ನಾನು ಅದಕ್ಕೆ ಹೆದರುವವನಲ್ಲ. ಒಬ್ಬ ಅಪರಾಧಿ ಸ್ವಚ್ಛಂದವಾಗಿ ಓಡಾಡಿಕೊಂಡಿರುವುದನ್ನು ನೋಡಲು ನಿಮಗೆ ಸಾಧ್ಯವೇನೋ. ನನಗೆ ಸಾಧ್ಯವಿಲ್ಲ. ನಮ್ಮ ದೇಶ ಕೊಳೆತು ನಾರುವ ಗುಂಡಿಯಾಗಲು ನಾನು ಬಿಡಲಾರೆ. ದೇಶ ಉದ್ಧಾರವಗಬೇಕೆಂದರೆ ಒಬ್ಬೊಬ್ಬರು ಇಂಥ ಒಂದೊಂದು ಕಸವನ್ನಾದರೂ ತೆಗೆಯಲೇಬೇಕು. ನನಗೆ ವಯಸ್ಸಾಯ್ತು. ಆದರೆ ತೊಂದರೆ ಇಲ್ಲ. ಜೀವ ಇರುವರೆಗೆ ಹೊರಾಡ್ತೇನೆ. ನಾಳೆ ನಾನು ಸತ್ತರೆ ಇನ್ನೊಬ್ಬ ಹುಟ್ಟಬಹುದು ನನ್ನ ಹೋರಾಟ ಮುಂದುವರೆಸಿಕೊಂಡು ಹೋಗಲಿಕ್ಕೆ. ನೀನು ಹೈಕೋರ್ಟಿನಲ್ಲಿ ತಪ್ಪಿಸಿಕೊಂಡೆ. ಸುಪ್ರೀಂ ಕೋರ್ಟ್ಗೆ ಹೋಗ್ತೇನೆ. ಅಲ್ಲೂ ನಿಮ್ಮ ರಾಜಕೀಯ ನಡೆಯಬಹುದು. ಆದರೆ ಅಲ್ಲಿ ದೇವರ ಕೋರ್ಟ್ ಅಂತ ಇದ್ಯಲ್ಲ. ಅಲ್ಲಿ ನೀನಲ್ಲ ನಿನ್ನಪ್ಪನೂ ತಪ್ಪಿಸಿಕೊಳ್ಳಲಿಕ್ಕೆ ಸಾಧ್ಯ ಇಲ್ಲ"' ಎಂದು ನಿದ್ದೆಗೆ ಜಾರಿದ್ದರು  ಸುಬ್ಬಾ ಶಾಸ್ತ್ರಿಗಳು. ಬಸ್ಸು ಮಲೆನಾಡಿನ ಕಾಡಿನ ಮಧ್ಯೆ ಸಾಗುತ್ತಿತ್ತು. ಒಂದು ಕ್ಷಣ ಎಲ್ಲ ಸ್ಥಬ್ಧವಾಯಿತು. ಆಗ ಗಾಢ ಮೌನದಲ್ಲೂ ಕ್ರಾಂತಿ ಗೀತೆಯೊಂದು ನನ್ನ ಕಿವಿಗಪ್ಪಳಿಸಿತು. ನಿದ್ದೆ ಓಡಿ ಹೋಗಿತ್ತು.

1 comment:

  1. ಊರಿನ ಮರ್ಯಾದಸ್ಥರ ಮನೆಗಳಲ್ಲೇ ಹುಳುಕುಗಳು ಜಾಸ್ತಿ... ಕಥೆಯ ಕೆಲವು ವಾಸ್ತವ ಸಂಗತಿಗಳು ಕೂಡ.... ಉರಿಗೊಬ್ಬನಾದರು ಸುಬ್ಬಾ ಶಾಸ್ತ್ರಿ ಅಂತ ಕ್ರಾಂತಿಕಾರಿಗಳು ಬೇಕು...

    ReplyDelete