Monday, 28 January 2013

ಬ್ಯಾಚುಲರ್ ಆತ್ಮಕಥೆ


ರವಿವಾರ ಮಧ್ಯಾಹ್ನ ೧೨ ಘಂಟೆ. ಆಗಿನ್ನೂ ನನಗೆ ಬೆಳಗಾಗಿರಲಿಲ್ಲ. ಹಿಂದಿನ ದಿನ ಗಡದ್ದಾಗಿ ವೀಕೆಂಡು ಪಾರ್ಟಿ ಮುಗಿಸಿ ಮನೆಗೆ ಬಂದು ಅಲ್ಲೇ ಹಾಸಿಗೆಯ ಮೇಲಿದ್ದ ನನ್ನ ಬಿಡಾರವನ್ನು ಪಕ್ಕದಲ್ಲೇ ಇದ್ದ ಕುರ್ಚಿಯ ಮೇಲಿಟ್ಟು ನಿದ್ದೆಗೆ ಜಾರಿದ್ದಷ್ಟೇ ನೆನಪು. ಅಲ್ಲೇ ನನ್ನ ಬಲಗೈ ಕೆಳಗೆ ಅಪ್ಪಚ್ಚಿಯಾಗಿದ್ದ ಫೋನಿಗೆ ಅಚಾನಕ್ ನಡುಕ ಶುರುವಾಗಿತ್ತು. ಥಟ್ಟನೆ ಎಚ್ಚರವಾಗಿ ನಿದ್ದೆಗಣ್ಣಲ್ಲೇ ಫೋನ್ ಎತ್ತಿದೆ. ಆ ಕಡೆಯಿಂದ ನನ್ನಪ್ಪನ ದನಿ. ನಿದ್ದೆಯಲ್ಲಿದ್ದವನ ಮುಖದ ಮೇಲೆ ನೀರು ಹಾಕಿದರೆ ಹೇಗಾಗುತ್ತದೋ ಹಾಗಾಯ್ತು. ಕೂಡಲೇ ಎದ್ದು ಕೂತೆ. "ಇನ್ನೂ ಎದ್ದಿಲ್ಲವೇನೋ" ಎಂದರು. "ಇಲ್ಲಪ್ಪ. ಬೆಳಿಗ್ಗೆ ಆರಕ್ಕೇ  ಎದ್ದು, ಮನೆ ಎಲ್ಲ ಕ್ಲೀನ್ ಮಾಡಿ, ಸ್ನಾನ ಮಾಡಿ, ಬಟ್ಟೆ ಒಗೆದು, ಊಟ ಮಾಡಿ ಹಾಗೇ  ಸ್ವಲ್ಪ ನಿದ್ದೆ ಹತ್ತಿತು" ಎಂದೆ. ನಾನು ಬಿಡುತ್ತಿರುವುದು ಎಕ್ಷ್ಪ್ರೆಸ್ ರೈಲು ಎಂದು ಅವರಿಗೆ ಗೊತ್ತಿತ್ತಾದರೂ ಅದರ ಬಗ್ಗೆ ಏನನ್ನೂ ಹೇಳಲಿಲ್ಲ. "ಅಬ್ಬ ಬದುಕಿದೆ ಬಡ ಜೀವವೇ" ಎಂದುಕೊಳ್ಳುತ್ತಿದ್ದಂತೆ ಆ ಕಡೆಯಿಂದ ಮತ್ತೊಂದು ಶಾಕಿಂಗ್ ನ್ಯೂಸ್- "ಈ ಬುಧವಾರ ನಾನು, ನಿನ್ನಮ್ಮ  ಬೆಂಗಳೂರಿಗೆ ಬರುತ್ತಿದ್ದೇವೆ. ನಿನ್ನ ಮನೆಯಲ್ಲೇ  ಉಳಿದುಕೊಳ್ಳುತ್ತೇವೆ" ಎಂದು. ಬಾಯಿಂದ ಶಬ್ಧಗಳೇ ಹೊರಡಲಿಲ್ಲ. ಹೇಗೋ ಕಷ್ಟ ಪಟ್ಟು "ಹ್ಮ್ಮ್" ಎಂದೆ.

ಒಮ್ಮೆ ಕತ್ತು ತಿರುಗಿಸಿ ಸುತ್ತಲೂ ನೋಡಿದೆ. ನನ್ನ ರೂಮಿಗಿಂತ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಎಷ್ಟೋ ಸ್ವಚ್ಛವಾಗಿದೆಯೇನೋ  ಅನಿಸಿತು. ಎಲ್ಲ  ಸರಿ ಮಾಡಿ ರೂಮನ್ನು ಅಚ್ಚುಕಟ್ಟಾಗಿ ಜೋಡಿಸಬೇಕೆಂಬ ಆಲೋಚನೆ ತಲೆಯಲ್ಲಿ ಬಂದಿದ್ದೇ ತಡ, ಜೋರಾಗಿ ಅಳು ಬರಲಾರಂಭಿಸಿತು. ಮುಖ ತೊಳೆದುಕೊಳ್ಳಲು ಬಾತ್ ರೂಂ ಗೆ ಓಡಿದೆ. ಅಷ್ಟು ದಿನ ಬಹಳ ಸುಂದರವಾಗಿಯೇ ಕಾಣುತ್ತಿದ್ದ ನನ್ನ ಬಾತ್ ರೂಂ ಅಂದು ಯಾವ ಸಾರ್ವಜನಿಕ ಶೌಚಾಲಯಗಳಿಗೂ ಕಮ್ಮಿಯಿಲ್ಲ ಅನಿಸಿತು. ಸೋಮವಾರ, ಮಂಗಳವಾರ ಆಫೀಸ್ ಇದೆ. ಅಪ್ಪ ಅಮ್ಮ ಬರುವುದು ಬುಧವಾರದ ದಿವಸ. ಸ್ವಚ್ಛ ಮಾಡುವುದಿದ್ದರೆ ಆ ದಿನ, ಅಂದರೆ ರವಿವಾರವೇ ಮಾಡಿ ಮುಗಿಸಬೇಕು. ಕೆಲಸಕ್ಕೆ ಕೈ ಹಾಕುವ ಮುನ್ನ ಸ್ವಲ್ಪ ಸುಧಾರಿಸಿಕೊಳ್ಳೋಣ ಎಂದು ಆಲೋಚನೆ ಮಾಡಿ ಕುರ್ಚಿಯ ಮೇಲಿದ್ದ ನನ್ನ ಬಿಡಾರವನ್ನೆಲ್ಲ ಮತ್ತೆ ಹಾಸಿಗೆಯ ಮೇಲೆಸೆದು ಕುರ್ಚಿಯ ಮೇಲೆ ಕೂತೆ. 

ತಲೆ ಬ್ಲ್ಯಾಂಕ್ ಆಗಿತ್ತು. ಎಲ್ಲಿಂದ "ಸ್ವಚ್ಛ ಮಾಡಲು ಶುರು ಮಾಡುವುದು?!" ಎಂಬುದೇ ಆಗ ನನ್ನ ಎದುರಿದ್ದ ಅತಿ ದೊಡ್ಡ ಪ್ರಶ್ನೆಯಾಗಿತ್ತು. ಬೆಡ್ ರೂಂ ಮೊದಲೋ, ಹಾಲ್ ಮೊದಲೋ, ಬಾತ್ ರೂಂ ಮೊದಲೋ ಎಂದು ಯೋಚನೆ ಮಾಡುತ್ತಿರುವಾಗ- "ಒಹ್ ಮನೆಯಲ್ಲಿ ಅಡುಗೆ ಕೋಣೆ ಕೂಡ ಇದೆ" ಎಂದು ಛಕ್ಕನೆ ನೆನಪಾಯಿತು. ಯೋಚನೆ ಜಾಸ್ತಿಯಾಗಿ ತಲೆ ತಿರುಗಿದಂತಾಯ್ತು. ಇಂಥ ಪರಿಸ್ಥಿತಿಯಲ್ಲಿ ಕೆಲಸ ಶುರು ಮಾಡುವುದು ಸರಿಯಲ್ಲ. ಸ್ವಲ್ಪ ಊಟ ಮಾಡಿ, ಮಲಗಿ ಎದ್ದು ಫ್ರೆಶ್ ಆಗಿ ಆಮೇಲೆ ನೋಡೋಣ ಎಂಬ  ಆಲೋಚನೆ ಬಂದಿದ್ದೇ ತಡ, ಪಿಜ್ಜಾ ಆರ್ಡರ್ ಮಾಡಿ ದಿಂಬಿಗೆ ತಲೆ ಕೊಟ್ಟೆ. ಪಿಜ್ಜಾ ದವನು ಬಂದು ಎಬ್ಬಿಸಿದ. ಬಹಳ ಹಸಿವು ಕೂಡ ಆಗಿತ್ತು. ಬಕ ಬಕ ತಿಂದು ಮುಗಿಸಿ ಅವ ತಂದಿದ್ದ ನ್ಯಾಪ್ಕಿನ್ ನಲ್ಲಿ ಕೈ ಒರೆಸಿಕೊಂಡು ಮತ್ತೆ ನಿದ್ದೆಗೆ ಜಾರಿದೆ. ಮತ್ತೆ ಕಣ್ಣು ತೆರೆಯುವಷ್ಟರಲಿ ಸೂರ್ಯ ಮುಳುಗಾಗಿತ್ತು. 

"ಅಯ್ಯಯ್ಯೋ" ಎಂದು ಎದ್ದು ಹಾಲ್  ಕಡೆ  ಓಡಿದೆ. ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸಾಮಾನುಗಳ ನಡುವೆ ಕಸಬರಿಗೆ ಹುಡುಕುತ್ತಲೇ ಸುಸ್ತಾಗಿ ಹೋದೆ. ಒಂದು ದೊಡ್ಡ ಚಾದರ ತೆಗೆದುಕೊಂಡು ನೆಲದ ಮೇಲೆ ಹಾಸಿದೆ. ಎಲ್ಲ ಸಾಮಾನುಗಳನ್ನು ಅದರ ಮೇಲೆ ಹಾಕಿ ಗಂಟು ಕಟ್ಟಿ ಅಟ್ಟದ ಮೇಲೆ ಚೆಂಡು ಎಸೆದಂತೆ ಎಸೆದೆ. ಕೊನೆಗೂ ಕಸಬರಿಗೆ ಸಿಕ್ಕಿತು. ಕೈಯ್ಯಲ್ಲಿ ಕಸಬರಿಗೆ ಹಿಡಿದು ವರ್ಷವೇ ಆಗಿತ್ತೇನೋ! "ಅಯ್ಯೋ ಇಷ್ಟೆಲ್ಲಾ ಸ್ವಚ್ಛ ಮಾಡಬೇಕಲ್ಲ" ಎಂಬ ಚಿಂತೆ ಒಂದೆಡೆಯಾದರೆ, "ನಾನು ಕಸಬರಿಗೆ ಹಿಡಿದು ಕೆಲಸ ಮಾಡುತ್ತಿದ್ದೇನೆ" ಎಂಬ ಖುಷಿ, ಉತ್ಸಾಹ ಇನ್ನೊಂದೆಡೆ. ಗಣಪತಿಯನ್ನು ನೆನೆಸಿಕೊಂಡು ಸ್ವಚ್ಚತೆಯ ಕಾರ್ಯಕ್ಕೆ ನಾಂದಿ ಹಾಡಿದೆ. ಮಧ್ಯೆ ಮಧ್ಯೆ ಮೂಲೆಯಿಂದ ಜಿರಳೆಗಳು ಸರ್ರನೆ ಬಂದು ನನ್ನನ್ನು ಅಣಕಿಸಿಕೊಂಡು ಹೋಗುತ್ತಿದ್ದವು. ಪಕ್ಕದಲ್ಲೇ ಒಂದು ದೊಡ್ಡ ಇರುವೆಯ ಸಾಲು ನನ್ನ ಕಾರ್ಯ ವೈಖರಿಗೆ ಮನಸೋತು "ಗೌರವ ವಂದನೆ" ನೀಡುತ್ತಿದ್ದವು. 

ಅಂತೂ, ಇಂತೂ ಹಾಲ್  ಮತ್ತು ಬೆಡ್ ರೂಂ ಸ್ವಚ್ಛ ಮಾಡುವ ಕೆಲಸ ಮುಗಿಯಿತು. ಒಮ್ಮೆ ಅಲ್ಲೇ ನಿಂತು ನೋಡಿದೆ. ನನ್ನ ಬೆನ್ನನ್ನು ನಾನೇ ತಟ್ಟಿಕೊಂಡು ಅಡುಗೆ ಮನೆಯ ಕಡೆ ಹೋದೆ. ಅದು ನಮ್ಮ ಮನೆಯೊಳಗೇ ಇದ್ದರೂ ನಾನೆಂದೂ ಹೋಗದಿರುವ ಪ್ರದೇಶ. ಕೊನೆಯ ಸಲ ಅಲ್ಲಿ ಯಾವಾಗ ಹೋಗಿದ್ದೆ ಅನ್ನುವ ನೆನಪು ಕೂಡ ಇಲ್ಲ. ಒಳಗೆ ಹೊಕ್ಕಿದ್ದೇ ತಡ, ಎಷ್ಟೋ ವರ್ಷಗಳಿಂದ ತೊಳೆಯದೇ ಬೇಸಿನ್ ನಲ್ಲಿ ಬಿದ್ದಿದ್ದ ಪಾತ್ರೆಗಳ ವಾಸನೆಗೆ ಅರ್ಧ ಮೈಲಿ ದೂರ ಓಡಿದೆ. ಪೊಲೀಸರು ಗುಂಪನ್ನು ಚದುರಿಸಲು ಟಿಯರ್ ಗ್ಯಾಸ್ ಬಳಸುವ ಬದಲು ಇದನ್ನೇ ಬಳಸುವುದು ಜಾಸ್ತಿ ಪರಿಣಾಮಕಾರಿ ಎಂದು ಆ ಕ್ಷಣದಲ್ಲಿ ನನಗೆ ಅನಿಸಿದ್ದುಂಟು.  ಏನೇ ಆಗಲಿ ಸ್ವಚ್ಛ ಮಾಡಿಯೇ ತೀರುತ್ತೇನೆಂಬ  ಪಣ ತೊಟ್ಟು, ಒಂದು ಟವೆಲ್ ತೆಗೆದುಕೊಂಡು ಅದಕ್ಕೆ ಸುಗಂಧ ದ್ರವ್ಯ ಸಿಂಪಡಿಸಿ ಮೂಗು  ಮುಚ್ಚುವಂತೆ ಮುಖಕ್ಕೆ ಕಟ್ಟಿಕೊಂಡು ಅಡುಗೆ ಮನೆಯ ಕಡೆ ದಿಟ್ಟ ಹೆಜ್ಜೆ ಹಾಕಿದೆ. ವಾಸನೆಯ ಪ್ರಮಾಣ ಸ್ವಲ್ಪ ಕಮ್ಮಿಯಾಗಿತ್ತು. ನಿಮಿಷದಲ್ಲಿ ಪಾತ್ರೆಗಳನ್ನೆಲ್ಲ ತೊಳೆದು, ಅಲ್ಲಿ ಬಿದ್ದಿದ್ದ ಮ್ಯಾಗಿ ನೂಡಲ್ಸ್ ನ ಚೂರುಗಳನ್ನು, ಕವರ್ ಗಳನ್ನೆಲ್ಲ ಹೊರಗೆಸೆದು ಸ್ವಚ್ಛ ಮಾಡಿದ್ದು ಕೂಡ ಆಯ್ತು. ಅಷ್ಟರಲ್ಲಿ ಸುಸ್ತಾಗಿದ್ದರೂ ಬಾತ್ ರೂಂ ಕೂಡ ತೊಳೆದು ಮುಗಿಸಿ, ಸ್ನಾನ ಮಾಡಿ ನಿರಾಳವಾಗಿ ಕುರ್ಚಿಯ ,ಮೇಲೆ ಬಂದು ಕೂತೆ. "ಮಿಶನ್ ಅಕಂಪ್ಲಿಶ್ದ್" ಎಂದು ಜೋರಾಗಿ ಒಮ್ಮೆ  ಕೂಗಿ  ನನ್ನ ಸ್ವಚ್ಚವಾದ ಮನೆಯನ್ನು ನೋಡಿ ಹಿರಿ ಹಿರಿ ಹಿಗ್ಗಿದ್ದೂ ಆಯ್ತು.

"ಬುಧವಾರ" ನಿಧಾನವಾಗಿ ಬರಲಿ ಎಂದು ಬೇಡಿಕೊಳ್ಳುತ್ತಿದ್ದ ನನಗೆ, ಮನೆ ಸ್ವಚ್ಛವಾಗಿದ್ದೇ  ತಡ ಆದಷ್ಟು ಬೇಗ ಬುಧವಾರ ಬರಲೆಂಬ ಗಡಿಬಿಡಿ ಶುರುವಾಯಿತು . "ಅಪ್ಪ , ಅಮ್ಮ ಯಾವಾಗ ಬರುತ್ತಾರೋ. ಯಾವಾಗ ಮನೆಯನ್ನು ಇಷ್ಟು ಸ್ವಚ್ಚವಾಗಿಟ್ಟ ಮಗನನ್ನು ನೋಡಿ ಹೆಮ್ಮೆ ಪಡುತ್ತಾರೋ?!" ಎಂದು ಮನಸ್ಸಲ್ಲೇ ಮಂಡಕ್ಕಿ ತಿನ್ನುತ್ತ ಕುಳಿತೆ.ಅಂತೂ ಬುಧವಾರ ಬಂತು. ಬೆಳಿಗ್ಗೆ ಎದ್ದು ಮನೆಗೆಲ್ಲಾ ಹೊಸತಾಗಿ ತಂದಿದ್ದ ಏರ್ ಫ್ರೆಶ್ನರ್ ಸಿಂಪಡಿಸಿ ಅಪ್ಪ ಅಮ್ಮನನ್ನು ಕರೆದುಕೊಂಡು ಬರಲು ಮೆಜೆಸ್ಟಿಕ್ ಗೆ ಓಡಿದೆ. ಮನೆಯ ಹತ್ತಿರ ಬರುತ್ತಿದ್ದಂತೆಯೇ ಒಂದು ರೀತಿ ಭಯ. ಪಬ್ಲಿಕ್ ಪರೀಕ್ಷೆಯ ಫಲಿತಾಂಶಕ್ಕೆ ಕಾಯುವಾಗ ಸಹ ಈ ರೀತಿಯ ಸ್ಥಿತಿ ಬಂದಿರಲಿಲ್ಲ. ಆದರೂ ಶಭಾಸಗಿರಿ ತೆಗೆದುಕೊಳ್ಳುತ್ತೇನೆಂಬ ಅತಿ ವಿಶ್ವಾಸ ಕೂಡ ಇತ್ತು. ಅಂತೂ ಆ ಘಳಿಗೆ ಬಂದಾಗಿತ್ತು. ಮನೆಯ ಬಾಗಿಲು ತೆಗೆದು ಅಮ್ಮನ ಮುಖ ನೋಡಿದೆ. ಅಮ್ಮ ಇನ್ನೂ ಒಳಗೇ ಬಂದಿರಲಿಲ್ಲ. ಅಷ್ಟರಲ್ಲೇ ಶುರು ಮಾಡಿದರು ನನ್ನ ಗುಣಗಾನ - "ಏನಿದು ಮನೆಯೋ, ಮಾರ್ಕೆಟ್ಟೋ? ಮನೆ ಇಟ್ಟುಕೊಳ್ಳುವ ರೀತಿನಾ ಇದು? ಅಲ್ಲಿ ಕೆಳಗೆ ನೆಲದ ಮೇಲೆ ಧೂಳು ನೋಡು. ನಿನಗೆ ಬೇಗ ಮದ್ವೆ ಮಾಡೋದೇ ಸರಿ. ಆಗಲಾದರೂ ದಾರಿಗೆ ಬರಬಹುದು ನೀನು". ನನ್ನ ಶ್ರಮವೆಲ್ಲ ನೀರಿನಲ್ಲಿ ಹೋಮವಾದಂತೆ ಅನಿಸಿತು. ಮತ್ತೆ ಒಮ್ಮೆ ನನ್ನ ಮನೆಯ ಹಳೆಯ ರೂಪ ನೆನೆಸಿಕೊಂಡು- " ಆ ರೂಪದಲ್ಲಿ ಅಮ್ಮ ಏನಾದರೂ ನೋಡಿದ್ದರೆ ನನ್ನನ್ನು ಸಾಯಿಸಿಯೇ  ಬಿಡುತ್ತಿದ್ದರೇನೋ " ಎಂಬ ಆಲೋಚನೆಗೆ ಹೃದಯ ಜೋರಾಗಿ ಬಡಿದುಕೊಳ್ಳಲಾರಂಭಿಸಿತು.

5 comments:

 1. ಹಹ್ಹ.. ನನ್ನ ರೂಮಿಗೂ ನಿನ್ನೆ ಕಾಯಕಲ್ಪವಾಗಿದೆ.

  ReplyDelete
 2. ಹಹ್ಹಹ್ಹಾ ನಾನು ಅವಿವಾಹಿತನಾಗಿದ್ದಾಗ, ನಾನಿದ್ದ ರೂಮಿಗೆ ಇಟ್ಟಿದ್ದ ಹೆಸರು "ಗುಬ್ಬಚ್ಚೀ ಗೂಡು", ಹಳೆರಯದೆಲ್ಲ ನೆನಪಿಸುವ ಇಂತ ಲೇಖನಗಳಿಗೆ ಸುಸ್ವಾಗತ....

  ReplyDelete
 3. ಹೆ ಹೆ.. ಚನ್ನಾಗಿದೆ :-)

  ನಮ್ಮ ಪೀಜಿಯ ಕೆಲವು ರೂಮುಗಳೂ ಹೀಗೇ ಇರುತ್ತೆ. ಬ್ರಹ್ಮಚಾರಿಯ ರೂಮು ಅಂದ್ರೆ ಅವ್ಯವಸ್ಥೆಯ ಆಗರ ಅಂತಲೇ ಮಾತು !
  ಅದನ್ನ ಚೆನ್ನಾಗಿ ನಿರೂಪಿಸುವಂತಿದೆ ನಿಮ್ಮ ಬರಹ :-)

  ReplyDelete
 4. ಬ್ಯಾಚುಲರ್ ಪರೇಶಣ್ಣನ ಈ ಅವಾಂತರ ನೋಡಿಯೇ ಆದಷ್ಟು ಬೇಗಾ ಅಪ್ಪ-ಅಮ್ಮಾ ನಿಮ್ಮನ್ನು ಮದುಮಗನಾಗಿ ನೋಡಲು ಬಯಸುತ್ತಿದ್ದಾರೇನೋ?! ;) ಬ್ಯಾಚುಲರ್ ಗಳಿಗೆ ಅವರ ಮನೆಯಲ್ಲಿ ಕಟ್ಟಿಕೊಂಡ ಧೂಳೂ ಕಾವ್ಯದ ವಸ್ತುವಾಗಬಲ್ಲದೆಂದು ಓದಿದ್ದ ನೆನಪೂ ಈ ನಿಮ್ಮ ಬ್ಯಾಚುಲರ್ ಪುರಾಣದೊಂದಿಗೆ ಸೇರಿ ನಗೆಯೊನಲಿನ ಟಾನಿಕ್ ಕೊಟ್ಟಂತಾಯ್ತು. ಹಿಡಿಸಿತು. :)

  ReplyDelete
 5. ಜಯಪ್ರಕಾಶ್ ಇ1 February 2013 at 21:38

  ನನಗೆ ಸ್ವಲ್ಪ ಅರ್ಥವಾಯಿತು, ಮದುವೆ ಆಗೋಕ್ಕೆ ಆಸೆ ಇದ್ದರೆ ಮತ್ತು ಅಮ್ಮನ ಬಾಯಿಂದ "ಮದುವೆ ಮಾಡಬೇಕು" ಎನ್ನುವ ಪದಗಳ ಹೊರ ಹೊಮ್ಮಿಸುವುದಕ್ಕೆ ಈ ತರಹ ಇರ(ಮಾಡ)ಬೇಕು, ತಮ್ಮಾಅಸೆ ಬೇಗ ಕೈ ಗೂಡಲಿಯೆಂದು ಆಶಿಸುವೆ...- ಇಂತಿ ತಮ್ಮವ ----ಜೆಪಿ :)

  ReplyDelete