Sunday, 13 January 2013

ಸಣ್ಣಿ ಸಿಂಗಾಪುರಕ್ಕೆ ಹೋದಳು"ನಾಳೆ ನನ್ನ ಮಗ ಬೆಂಗಳೂರಿನಿಂದ ಬರ್ತಿದ್ದಾನೆ. ಅದು ಇದು ಅಂತ ಕೆಲಸ ಇರ್ತದೆ. ಬೇಗ ಬಾ. ಮತ್ತೆ ಮನೆಯಲ್ಲಿ ಕೆಲಸ ಇದೆ ಅಂತ ಬೇಗ ಓಡಿ ಹೋಗಲಿಕ್ಕಿಲ್ಲ. ಸ್ವಲ್ಪ ಪುರಸೊತ್ತು ಮಾಡ್ಕೊಂಡೇ ಬಾ." ಎಂದು ಆಫೀಸರ್ ನ ಗತ್ತಿನಲ್ಲಿ ವಿಜಯಕ್ಕ  ತನ್ನ ಮನೆಯ ಕೆಲಸದಾಕೆ ಸಣ್ಣಿಗೆ ಆರ್ಡರ್ ಮಾಡಿದರು. "ಆಯ್ತಮ್ಮ. ಬರ್ತೇನೆ. ನಮ್ಮದೂ ಮನೆ ಕೆಲಸ ಇರ್ತದಲ್ಲ. ದನ, ಕರು , ಮನೆಯ ಅಡಿಗೆ ಕೆಲಸ, ಗದ್ದೆ ಕೆಲಸ ಅಂತ ಒಂದಾ ಎರಡಾ?" ಎಂದು ಸಣ್ಣಿ ಕೂಡ ದೊಡ್ಡದಾಗಿ ಕಥೆ ಹೇಳಿದಳು. ಆದರೂ ಬೆಂಗಳೂರಿಂದ ವಿಜಯಕ್ಕನ ಮಗ ಬರುತ್ತಿದ್ದಾನೆ ಎಂದೊಡನೆ ಇವಳು  ಮನದೊಳಗಗೇ  ಮಂಡಕ್ಕಿ ಕಲಸಿದಳು. ಆತ ಬೆಂಗಳೂರಿನಿಂದ ಬರುವಾಗ ಚಾಕಲೇಟು ಅದು ಇದು ಎಂದು ತರುವುದುಂಟು. ಇನ್ನು ವಿಜಯಕ್ಕ ಒಂದು ಎರಡು ಅಂತ ಬ್ಯಾಂಕಲ್ಲಿ ದುಡ್ಡು ಲೆಕ್ಕ ಮಾಡುವ ವರಸೆಯಲ್ಲಿ ಲೆಕ್ಕ ಮಾಡಿ, ಆಮೇಲೆ ಇಷ್ಟು ಬೇಡ ಜಾಸ್ತಿಯಾಯಿತು ಎಂದು ಒಂದೆರಡನ್ನು ಒಳಗೆ ಇಟ್ಟು ಭಾರತ ರತ್ನ ಪುರಸ್ಕಾರ ಕೊಡುವಂತೆ ಬಹಳ ಗತ್ತಿನಿಂದ ಸಣ್ಣಿಗೆ ಕೊಡುವುದುಂಟು. ಆಕೆಗೋ ಖುಷಿ. ಬೆಂಗಳೂರಿನ ಚಾಕಲೇಟು ಎಂದು ಎಲ್ಲರಿಗೂ ತೋರಿಸಿ ಮಕ್ಕಳಿಗೆ ಕೊಟ್ಟು ಆ ಮಕ್ಕಳು ಅದನ್ನು ಊರಿಡೀ ತೋರಿಸಿ ತಿನ್ನುವ ಸಂಭ್ರಮ ಕೇಳಲಿಕ್ಕೆ ಉಂಟೇ?!

ಶಿರೂರಿನಲ್ಲಿ ತಕ್ಕ ಮಟ್ಟಿಗೆ ಶ್ರೀಮಂತ ವಿಜಯಕ್ಕನ ಗಂಡ ಪುತ್ತು ರಾಯರು. ಕಿರಾಣಿ ಅಂಗಡಿ. ಒಳ್ಳೆ ವ್ಯಾಪಾರ ಕೂಡ ಇತ್ತು. ವಿಜಯಕ್ಕನಿಗೆ ಕೊಚ್ಚಿಕೊಳ್ಳುವ ಸ್ವಭಾವ. ಯಾವುದೇ ಮದುವೆ, ಮುಂಜಿ ಇರಲಿ ಮೈ ತುಂಬಾ ಒಡವೆ ಹಾಕಿಕೊಂಡು ಹೋಗಿ ಕೂತು ಮಗನ ಮತ್ತು ತನ್ನ ಶ್ರೀಮಂತಿಕೆಯ  ಹೊಗಳಿಕೆ ಮಾಡಿಕೊಳ್ಳಲು ಶುರು ಮಾಡಿದಳೆಂದರೆ, ಬಂದವರೆಲ್ಲಾ ಕಿವಿಯಲ್ಲಿ  ಹತ್ತಿ ಇಟ್ಟುಕೊಳ್ಳುವುದೊಂದು ಬಾಕಿ. "ಇವಳ ವ್ಯಾಪಾರ ಬೇಡ" ಎಂದು ಇವರು  ಹತ್ತಿರ ಬಂದ ಕೂಡಲೇ  ಊರ ಹೆಂಗಸರು ಓಡಿ ಹೋಗುವುದೂ ಉಂಟು. ಆದರೆ ಯಾರು ಕೇಳಲಿ, ಬಿಡಲಿ ಇವರ ಕೊಚ್ಚಿಕೊಳ್ಳುವಿಕೆ ಬೊಂಬಾಯಿ ಬಸ್ಸಿನಂತೆ ಒಂದೇ ವೇಗದಲ್ಲಿ ಸಾಗುತ್ತಲೇ ಇರುತ್ತದೆ. ಅದಕ್ಕೆ ಇವರಿಗೆ "ಬೊಂಬಾಯಿ ಬಸ್ಸು" ಎಂಬ ಅಂಕಿತ ನಾಮ ಕೂಡ ಊರ ಹೆಂಗಸರು ಇಟ್ಟಿದ್ದಾರೆ. ಇವರು ಬಂದ ಕೂಡಲೇ "ಬೊಂಬಾಯಿ ಬಸ್ಸು ಬಂತು. ಬದಿಗೆ ಹೋಗ್ರೀ. ಬಂದು ಆಟಕಾಯಿಸಿಕೊಂಡರೆ ಮನೆಗೆ ಹೋಗುವುದು ಡೌಟ್  ಉಂಟು" ಎಂದು ಹೆಂಗಸರು ಗುಸು ಗುಸು ಮಾಡುವುದಿದೆ. 

ಇನ್ನು ಮಗ ರಮೇಶ  ಬುದ್ಧಿವಂತ ಹುಡುಗ . ಒಳ್ಳೆಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿ ಬೆಂಗಳೂರಿನಲ್ಲಿ ಒಳ್ಳೆಯ ಕೆಲಸಕ್ಕೆ ಸೇರಿದ. ಮತ್ತೆ ಹೊಗಳಿಕೆ ಕೇಳಬೇಕೆ? ಆದರೆ ಊರವರ್ಯಾರೂ ಇವರ ಮಾತುಗಳಿಗೆ ಅಷ್ಟು ತೂಕ ಕೊಡದೇ ಇದ್ದುದರಿಂದ ಆಗಾಗ ಬೇಜಾರಾಗಿ ಸುಮ್ಮನೆ ಕುಳಿತುಕೊಳ್ಳುವುದಿದೆ. ಇವರ ಗುಣಗಾನವನ್ನು ಬಹಳ ಆಸಕ್ತಿಯಿಂದ ಕೇಳುವವಳೆಂದರೆ ಒಬ್ಬಳೇ- ಅವಳು ಸಣ್ಣಿ. ಒಂದು ತುಂಡು ಭೂಮಿ ಇದೆ. ಮಳೆ ಸರಿಯಾಗಿ ಬಂದ್ರೆ ಬೆಳೆ. ಎರಡು ಹಸು ಸಾಕಿದ್ದಾಳೆ. ವಿಜಯಕ್ಕನ ಮನೆಯಲ್ಲಿ ಕೆಲಸ ಮಾಡಲು ಶುರು ಮಾಡಿ ಹತ್ತು ವರ್ಷವಾಯಿತೇನೋ. ಶುರುವಿನಲ್ಲಿ  ನೂರು ರೂಪಾಯಿ ಸಂಬಳ ಕೊಡುತ್ತಿದ್ದರು. ಅಂತೂ ವಿಜಯಕ್ಕ ದೊಡ್ಡ ಮನಸ್ಸು ಮಾಡಿ, ತನ್ನದು ಉದಾರ ಮನೋಭಾವತೆ ಎಂಬಂತೆ ತೋರಿಸಿ ಇನ್ನೂರು ರೂಪಾಯಿ ಗೆ ಸಂಬಳ ಏರಿಸಿದರು. ಮನೆಯ ಕೆಲಸವನ್ನೆಲ್ಲಾ  ಮುಗಿಸಿ, ಅದು ಸಾಲದೆಂಬಂತೆ ಪ್ರತಿದಿನ ವಿಜಯಕ್ಕನ ಬಡಾಯಿ ಕೇಳುವ ದೊಡ್ಡ ಕೆಲಸವನ್ನು ಕೂಡ ಸಣ್ಣಿ ಮಾಡಬೇಕು. 

ಆ ದಿನ ಎಂದಿನಂತೆ ಶುರು ಹಚ್ಚಿಕೊಂಡರು ವಿಜಯಕ್ಕ- "ಇಲ್ಲಿ ಎಂತ ಸೆಕೆ ಮಾರಾಯ್ತಿ. ಅಲ್ಲಿ ಸೆಕೆ ಎಂಬ ಶಬ್ದ ಇಲ್ಲ. ಯಾವಾಗಲೂ ತಂಪು. ಇನ್ನು ಸೆಕೆ ಅನ್ನೋದು ಏನಾದ್ರೂ ಆದ್ರೆ ಮಗನ ಮನೆಯಲ್ಲಿ ಏರ್ ಕಂಡೀಶನ್ ಉಂಟಲ್ಲ. ಅದು ಹಾಕಿ ಕೂತರೆ ಫ್ರಿಜ್ ಒಳಗೆ ಕುಳಿತ ಥರ ಆಗ್ತದ್ಯೇ. ನಿದ್ದೆ ಹೇಗೆ ಬರ್ತದೆ ಗೊತ್ತುಂಟ? ಇನ್ನು ಹೊರಗೆ ತಿರುಗಾಡಲಿಕ್ಕೆ ಕಾರ್ ಉಂಟು. ಏನೂ ಕರ್ಕರೆ ಇಲ್ಲ. ಮತ್ತೆ ರಸ್ತೆ ಏನಂತೀಯೇ ಮಾರಾಯ್ತಿ. ನೆಲದ ಮೇಲಲ್ಲದೆ ಗಾಳಿಯಲ್ಲೂ ರಸ್ತೆ ಮಾಡಿದ್ದಾರೆ. ಏನೋ 'ಫ್ಲೈ ಒವರ್ ' ಅಂತೆ. ಇನ್ನು ಏನಾದ್ರೂ ಸಾಮಾನು ಖರೀದಿ ಮಾಡ್ಬೇಕಂದ್ರೆ ಇಲ್ಲಿ ರೀತಿ ಒಂದಕ್ಕೆ ಶೆಟ್ಟರ ಅಂಗಡಿಗೆ, ಒಂದಕ್ಕೆ ಭಟ್ಟರ ಅಂಗಡಿಗೆ ಹೋಗುವ ಪ್ರಶ್ನೆಯೇ ಇಲ್ಲ. "ಮಾಲ್ " ಅಂತ ಇರ್ತದೆ. ಅಲ್ಲಿ ಹೋದರೆ ಕೊತ್ತಂಬರಿ ಸೊಪ್ಪಿನಿಂದ ಹಿಡಿದು, ಅದನ್ನು ಇಡಲಿಕ್ಕೆ ಫ್ರಿಜ್ ವರೆಗೆ ಎಲ್ಲಾ ಸಿಗ್ತದೆ. ಎಷ್ಟು ದೊಡ್ಡ ಇರ್ತದೆ ಅಂತೀಯೇ ಅದು. ನಾಲ್ಕೈದು ಮಾಳಿಗೆ. ಮೆಟ್ಟಿಲು ಹತ್ತುವ ತ್ರಾಸು ಕೂಡ ಇಲ್ಲ. ಹೋಗಿ ನಿಂತರೆ ಸಾಕು ಅದು  ತನ್ನಿಂದ ತಾನೇ ಮೇಲೆ ಹೋಗ್ತದೆ. ನಮ್ಮ ಹಳ್ಳಿಯ ಥರಾನ ಮಾರಾಯ್ತಿ? ಅಲ್ಲಿ ಹೋಗಲಿಕ್ಕೆ ಕೂಡ ಪುಣ್ಯ ಮಾಡಿರಬೇಕು" ಎನ್ನುವಷ್ಟರಲ್ಲಿ ಸಣ್ಣಿ ಇವನ್ನೆಲ್ಲ ಊಹೆ ಮಾಡಿಕೊಂಡು ತನ್ನದೇ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದಳು. ಮತ್ತೆ ಹೊರ ಬಂದು- "ನಿಮ್ಮದೇ ಅದೃಷ್ಟ ಅಮ್ಮ. ನಮ್ಮಂಥ ಬಡವರಿಗೆ ಜೀವನದಲ್ಲಿ ಒಂದ್ಸಲ ಆದರೂ ಇಂಥ ಊರು ನೋಡುವ ಭಾಗ್ಯ ಇದೆ ಅಂತ ನನಗೆ ಅನಿಸುವುದಿಲ್ಲ. ಇಷ್ಟರವರೆಗೆ ನಾನು ನೋಡಿದ ಊರುಗಳಲ್ಲಿ ಕುಂದಾಪುರವೇ ದೊಡ್ಡ ಊರು" ಎಂದು ಸಣ್ಣಿ ಹೇಳಿದೊಡನೆ ವಿಜಯಕ್ಕ ಹೆಮ್ಮೆಯಿಂದ ಬೀಗಿ ಒಂದು ಜಂಭದ ನಗೆ ಬೀರಿದರು. 

ಒಂದೆರಡು ವರ್ಷಗಳು ಕಳೆದವು. ಸಣ್ಣಿಯ ಮಗಳೂ ಪ್ರಾಯಕ್ಕೆ ಬಂದಿದ್ದಳು. ನೋಡಲಿಕ್ಕೂ ತಕ್ಕ ಮಟ್ಟಿಗೆ ಚೆನ್ನಾಗಿದ್ದಳು. ಅವಳಿಗೆ ಹುಡುಗ ನೋಡಲು ಶುರು ಮಾಡಿದ್ದರು. ಎರಡು ಮೂರು ಬಾರಿ ವಿಜಯಕ್ಕನ ಬಳಿ "ಸಂಬಂಧ ಹುಡುಕಲು ಸಹಾಯ ಮಾಡಿ"ಎಂದು ಕೇಳಿದಾಗ ವಿಜಯಕ್ಕ- "ಅವಳು ಜಾಸ್ತಿ ಓದಲೂ ಇಲ್ಲ. ನಿಮ್ಮ ಹತ್ರ ವರದಕ್ಷಿಣೆ ಕೊಡುವಷ್ಟು  ಶಕ್ತಿ ಸಹ ಇಲ್ಲ. ಊರಲ್ಲಿ ಇರುವ ಯಾವುದಾದರೂ ಹುಡ್ಗನ್ನ ನೋಡ್ವಾ" ಎಂದು ಹೇಳಿದ್ದುಂಟು. ಅಂತೂ ಇಂತೂ ನೆಂಟಸ್ತನ ಆಯ್ತು. ಎಣಿಸಿದ್ದಕ್ಕಿಂತ ನೂರು ಪಟ್ಟು ಒಳ್ಳೆಯ ಸಂಬಂಧ ಸಿಕ್ಕಿತ್ತು. ಹುಡುಗ ಡಿಪ್ಲೋಮಾ ಮಾಡಿ ಸಿಂಗಾಪುರದಲ್ಲಿ ಕೆಲಸಕ್ಕಿದ್ದ. ಅಪ್ಪ ಅಮ್ಮ ಇಲ್ಲ. ಮಾಮನ ಮನೆಯಲ್ಲಿ ಬೆಳೆದಿದ್ದ. ಒಳ್ಳೆಯ ಸಂಬಳ ಕೂಡ ಇತ್ತು. "ವರದಕ್ಷಿಣೆ ಬೇಡ. ಮದುವೆ ಮಾಡಿಸಿಕೊಟ್ಟರೆ ಸಾಕು" ಅಂದಿದ್ದ. ಈ ಸುದ್ದಿ ಕೇಳಿ ವಿಜಯಕ್ಕನಿಗೆ ಕರೆಂಟ್ ಶಾಕ್ ಹಿಡಿದಂತೆ ಆಗಿ ಹೋಯಿತು. ಸತ್ಯವೋ, ಸುಳ್ಳೋ ಎಂದು ವಿಚಾರಣೆ ಕೂಡ ನಡೆಸಿ ಸತ್ಯವೆಂದು ಗೊತ್ತಾದ  ಕೂಡಲೇ ಸುಮ್ಮನಾಗಿ ಹೋದರು. 

ಮಗಳು ಗರ್ಭಿಣಿ ಎಂಬ ಸುದ್ಧಿ ಬಂತು ಸಣ್ಣಿಗೆ. "ಅಲ್ಲಿ ಬರಲಿಕ್ಕೆ ಆಗುವುದಿಲ್ಲ. ನೀವೇ ಇಲ್ಲಿ ಬನ್ನಿ. ಟಿಕೆಟ್ ತೆಗೆಸುತ್ತೇನೆ. ಇಲ್ಲಿ ನಿಮ್ಮ ಮಗಳನ್ನು ನೋಡಿಕೊಳ್ಳಲು ಅಂತ ಸಹ ಯಾರೂ ಇಲ್ಲ" ಎಂದು ಅಳಿಯ ಫೋನ್ ಮಾಡಿ ಹೇಳಿದ. ಆ ದಿನವೇ ಸಂಜೆ ಸಣ್ಣಿ ವಿಜಯಕ್ಕನ ಮನೆಗೆ ಹೋಗಿ ಸುದ್ಧಿ ಹೇಳಿ "ಕೆಲಸ ಬಿಡುತ್ತೇನೆ" ಎಂದಳು. ವಿಜಯಕ್ಕನಿಗೆ ಒಮ್ಮೆಲೇ ಅವಮಾನವಾದಂತಾಗಿ ಕೋಪ ನೆತ್ತಿಗೇರಿತು. "ಎಂತ, ನಾವು ನೋಡದಿದ್ದ ಸಿಂಗಾಪುರನಾ ಅದು? ಹೋಗು. ನನಗೇನು ಕೆಲಸದವರು ಸಿಗೋದಿಲ್ಲ ಅಂದುಕೊಂಡೆಯಾ. ದುಡ್ಡು ಕೊಟ್ಟರೆ ಎಷ್ಟು ಬೇಕು ಅಷ್ಟು ಜನ ಸಿಗ್ತಾರೆ" ಎಂದು ಸಿಡುಕಿ ಒಳಗೆ ನಡೆದು ಬಿಟ್ಟರು ವಿಜಯಕ್ಕ. ಕೂಡಲೇ ಮಗನಿಗೆ ಫೋನ್ ಹಚ್ಚಿ - "ಈ ಸಿಂಗಾಪುರ ಅಂದರೆ ನಿನ್ನ ಬೆಂಗಳೂರಿಗಿಂತ ದೊಡ್ಡ ಊರಾ ಮಾರಾಯ? ಎಲ್ಲಿ ಬರ್ತದೆ ಅದು ?"ಎಂದು ಕೇಳಿದರು. "ಅದು ಭಾರೀ ಚಂದ ಊರು. ಅಂತ ಊರು ಪ್ರಪಂಚದಲ್ಲೇ ಇಲ್ಲ. ಇಲ್ಲಿಂದ ಅಲ್ಲಿ ವಿಮಾನದಲ್ಲೇ ಹೋಗಬೇಕು" ಎಂದ ಅವರ ಮಗ. ವಿಜಯಕ್ಕ ಒಮ್ಮೆಲೇ ಗರ ಬಡಿದಂತವರಾಗಿ ಫೋನ್ ಇಟ್ಟರು.  "ನಮ್ಮ ಮನೆಯಲ್ಲಿ ಕೆಲಸ ಮಾಡ್ತಿದ್ದ ಈ ಸಣ್ಣಿ ಸಿಂಗಾಪುರಕ್ಕೆ ಹೋಗುವುದು ಅಂದ್ರೆ ಏನು?! ಅದೂ ವಿಮಾನದಲ್ಲಿ." ಎಂದು ಯೋಚನೆ ಮಾಡುತ್ತಾ ವಿಜಯಕ್ಕ ಹತ್ತು ದಿನ ನಿದ್ದೆ ಮಾಡಲೇ ಇಲ್ಲ. ಅಷ್ಟರಲ್ಲಿ ಶಿರೂರಿನ ಸಣ್ಣಿ ಸಿಂಗಾಪುರದಲ್ಲಿದ್ದಳು.

No comments:

Post a Comment