Tuesday 5 February 2013

ಪಯಣ

ಕಾಯುತ್ತಿದ್ದರೆಲ್ಲ ನಿಲ್ದಾಣದಲಿ ರೈಲಿಗೆ,
ಕುಳಿತಿರುವರು ಕೆಲ ಜನ ಜಗಲಿಗೆ 
ತಲೆಯೊಡ್ಡಿ, 
ರಿಸರ್ವೇಶನ್ ಆಗಿದೆಯೆಂದು ಮನ ನಿರಾಳ;
ಎಸಿಯಲಿ ತಣ್ಣಗೆ ಮಲಗುವ ಹಿಗ್ಗು 
ಕೆಲವರದಾದರೆ, 
ಸ್ಲೀಪರ್ ಆದರೂ ಸಿಕ್ಕಿತೆಂಬ ಖುಷಿ ಕೆಲವರದು.

ಇನ್ನು ಹಲವು ಅತೃಪ್ತ ಆತ್ಮಗಳು,
ಓಡಾಡುತಿವೆ ಅತ್ತಿಂದಿತ್ತ, ಇತ್ತಿಂದತ್ತ
ದೂರದಿಂದ ಸೈರನ್ ಕೇಳಿದಂತನಿಸಿದ್ದೇ ತಡ,'
ಓಡುವರು ಪ್ಲಾಟ್ಫಾರ್ಮ್ ನ ಅಂಚಿಗೆ
ಜನರಲ್ ಬೋಗಿಯ ಜನ ಜಂಗುಳಿ ಸೀಳಿ
ಹೋಗಬೇಕೊಳಗೆ,
ಹೊಡೆದಾಡಿ ಸೀಟು ಸಿಕ್ಕರೆ ಪುಣ್ಯ;
ಬೋಗಿ ತುಂಬಿ, ಇರುವೆಗೂ ಜಾಗವಿಲ್ಲ,
ಹೊರಗೆ ಹಲವರು ನಿರಾಶರಾಗಿರೆ,
ಒಳಗೆ ನಿಂತವನೆಂದ-
"ನಿಲ್ಲಲಾದರೂ ಸಿಕ್ಕಿತಲ್ಲ ನಾ ಧನ್ಯ"

ಪಯಣ ಆರಂಭ
ರೈಲು ಹೊರಟಿತು ಗಮ್ಯದೆಡೆ.
ಎಸಿಯಲ್ಲಿದ್ದರೂ ಅವನಿಗೆ ನಿದ್ದೆಯೇ ಇಲ್ಲ
ಬ್ಯಾಗು ತೆಗೆದು ನುಂಗಿದನೆರಡು ಮಾತ್ರೆ;
ಅಲ್ಲಿ ಜನರಲ್ ಬೋಗಿಯಲ್ಲೊಬ್ಬನಿಗೆ
ನಿಂತಲ್ಲಿಯೇ ಗಡದ್ದು ನಿದ್ದೆ.

ಅಂತೂ ಬಂತು ಕೊನೆಯ ನಿಲ್ದಾಣ,
ಎಸಿ ಬೋಗಿಯಿಂದಿಳಿದ ಶ್ರೀಮಂತ ಮಡದಿಗೆಂದ-
"ಅಯ್ಯೋ ಎಂತ ಸೆಕೆ, ಹೊಲಸು ನರಕ";
ಸ್ಲೀಪರ್ ನಿಂದ ಇಳಿದವ ತಟಸ್ಥ;
ಜನರಲ್ ಬೋಗಿಯವನಿಗೆ ಒಮ್ಮೆಲೇ
ಸ್ವಾತಂತ್ರ್ಯ ಸಿಕ್ಕಂತನಿಸಿ ಹೇಳಿದ-
"ಈ ಜಗ ಸ್ವರ್ಗ";

ಎಲ್ಲ ನಡೆದರು ಅವರವರ ದಾರಿ ಹಿಡಿದು
ರೈಲು ತಯಾರು ಮತ್ತೊಂದು ಪಯಣಕೆ

4 comments:

  1. ಎಲ್ಲರೂ ಕಾಣಸಿಗುತ್ತಾರೆ ಈ 'ಬೋಗಿ'ಯೊಳಗೆ.. ತಣ್ಣಗೆ ತಲೆಯಾನಿಸಿಕೊಳ್ಳುವವರು, ಕಿಟಕಿಯ ಗಾಳಿಗೆ ಮುಖವೊಡ್ಡಿಕೊಳ್ವವರು, ಬಾಗಿಲ ಹಿಡಿ ಹಿಡಿದು ಸಾಗುವ ದಾರಿಯ ದೂರವವಳೆವವರು, ನಿಂತಲ್ಲಿ ನಿಲ್ಲಲಾಗದವರು, ಕೂತಲ್ಲಿಂದ ಮೂರು ಸಲ ಎದ್ದು ಬರುವವರು, ತೂಕಡಿಸುವವರು, ಮಧ್ಯೆ ತೂರುವವರು, ಹಾರಿ ಕಣ್ಮರೆಯಾಗುವವರು!

    ರೈಲಿಗೇನು ... ಹಳಿಯ ಮೇಲೆ ಓಡುವದಷ್ಟೇ ಗೊತ್ತದಕೆ... ನಡೆಸುವವನೊಬ್ಬ ಮುಂದೆ.. ಕೂತವನಿಗೆ ಕಾಣದಂತೆ!

    ಚೆನ್ನಾಗಿದೆ ರೈಲು ಪ್ರಯಾಣ, ಸುಖಕರವಾಗಿರಲಿ ಎನ್ನುವ ಆಶಯ ನನ್ನದೂ ದಾರಿಯುದ್ದಕೂ!

    ReplyDelete
  2. ರೈಲುಗಳ ಜಗತ್ತನ್ನು ರುಚಿಕಟ್ಟಾಗಿ ಬಿಡಿಸಿಟ್ಟ ನಿಮ್ಮ ಒಳ್ಳೆಯ ಕವಿತೆಗೆ ನನ್ನ ಮೆಚ್ಚುಗೆ ಇದೆ.

    ReplyDelete
  3. ಚೆನ್ನಾಗಿದೆ ಕವನ... ಎಲ್ಲರ ಪಯಣ ಸುಖವಾಗಿದ್ದರೆ ಚೆನ್ನ

    ReplyDelete