Wednesday 13 February 2013

ಹಾಸ್ಟೆಲ್ ನಲ್ಲಿ ಒಂದು ವೆಲೆ೦ಟೈನ್ ಡೇ


ದಿನವೂ ರಾತ್ರೆ ಊಟದ ಬಳಿಕವೇ ನಮ್ಮ ದಿನ ಶುರುವಾಗುವುದಿತ್ತು. ಹರಟೆ, ಗಲಾಟೆ, ಪಿಚ್ಚರು, ಸೀರಿಯಲ್ಲೂ, ಕಂಪ್ಯೂಟರ್ ಗೇಮ್ಸ್ ಅಂತ ಶುರು ಹಚ್ಚಿಕೊಂಡರೆ ಮುಗಿಯುವುದು ಪ್ರಾತಃ ಕಾಲಕ್ಕೆ. ಇನ್ನು ಕೆಲವೇ ಕೆಲವು ಆತ್ಮಗಳು ಈ ಹೊತ್ತಿನಲ್ಲಿ ಕಿವಿಗೆ ಮೊಬೈಲ್ ನ ಇಯರ್ ಫೋನ್ ಹಾಕಿಕೊಂಡು ಅತ್ತಿಂದಿತ್ತ ಇತ್ತಿಂದತ್ತ ಹೋಗುತ್ತಿದ್ದುದು. ಇಂಥವರನ್ನು ನೋಡಿ "ಅಯ್ಯೋ ಪಾಪ" ಅನ್ನುತ್ತಿದ್ದ ನಾವು, ಆ ದಿನ ಇವರ ಬಗ್ಗೆ ಹೊಟ್ಟೆ ಉರಿದುಕೊಂಡಿದ್ದಕ್ಕೆ ಅರ್ಥ ಇತ್ತು. ಆ ದಿನ "ಪ್ರೇಮಿಗಳ ದಿನ".

ಮಧ್ಯರಾತ್ರಿ ಮೂರಾಗಿತ್ತೇನೋ. ರಾಜೇಶ, ಮಹೇಶ, ಮಾಮು, ಕ್ಯಾಪ್ಟನ್ ಎಲ್ಲರೂ ಗುಂಪು ಕಟ್ಟಿಕೊಂಡು ರೂಮಿನ ಕಡೆ ಬಂದರು. ಬಂದಿದ್ದೇ ಮಾಮು ಶುರು ಹಚ್ಚಿಕೊಂಡ- " ನಾಳೆ ನಾನು ಕಾಲೇಜಿಗೆ ಬರಲ್ಲ ಮಗಾ. ಎಲ್ಲ ಹುಡ್ಗೀರು ಕಾಯ್ಕೊಂಡು ಕೂತವ್ರಂತೆ ನಂಗೆ ಪ್ರಪೋಸ್ ಮಾಡ್ಬೇಕು ಅಂತ. ನನಗಾಗಲ್ಲ ಯಾರ ಮನಸೂ ನೋಯಿಸಲಿಕ್ಕೆ. ಹುಡ್ಗೀರ ಕಣ್ಣೀರು ನೋಡಕ್ಕಾಗಲ್ಲ ಮಚ್ಚ ನಂಗೆ. ಅದ್ಕೆ ಹಾಸ್ಟೆಲ್ನಲ್ಲಿ  ಇರೋದೇ ಒಳ್ಳೇದು ಅಂದ್ಕೊಂಡೆ". ಅಷ್ಟು ಹೇಳುವಷ್ಟರಲ್ಲೇ ಕ್ಯಾಪ್ಟನ್ ಬಾಯಿ ತೆಗೆದ- "ಏ ಮಾಮು, ಮತ್ತೊಂದ್ ಮಾತು ಬಾಯಿಂದ ಬಂದ್ರೆ ಸಾಯ್ಸಿ ಬಿಡ್ತೀನಿ. ಮಕಾ ನೋಡ್ಕೋ ನಿಂದು. ಒಂದು ಹುಡುಗಿಯಾದ್ರೂ ಕಣ್ಣೆತ್ತಿ ನೋಡ್ತಾಳೆ ಏನ್ಲಾ ನಿಂಗೆ?". ಮಾಮು ಸುಮ್ಮನಾದ. ಈಗ ರಾಜೇಶನ ಕಥೆ ಶುರು- "ಅಲ್ಲ ಮಾರಾಯ. ನಮ್ಮ ಕ್ಲಾಸಲ್ಲೇ ನೋಡು. ಇದ್ದ ಹುಡ್ಗೀರೆಲ್ಲ ಕಮಿಟೆಡ್ದು. ಹುಡ್ಗ್ರೆಲ್ಲ ಸಿಂಗಲ್ಲು. ಅದು ಹ್ಯಾಂಗ್ಲಾ ಸಾಧ್ಯ. ಅವರು  ಯಾರ ಜೊತೆ ಕಮಿಟೆಡ್ ಆಗ್ತಾರೆ ಅಂತ. ನಮ್ಮಲ್ಲಿ ಏನು ಕಮ್ಮಿ ಇದೆ  ಅಂತ". ಈ ದೊಡ್ಡ ಸಮಸ್ಯೆ ನಮ್ಮೆಲ್ಲರನ್ನೂ ಸುಮಾರು ಹೊತ್ತು ಕಾಡಿತು. ಆಲೋಚನೆ ಮಾಡಿದರೂ ಉತ್ತರ ಮಾತ್ರ ಸಿಗಲಿಲ್ಲ. 

ನಮ್ಮೆಲ್ಲರ ಈ ಚಿಂತೆ, ಚಿಂತನೆಗಳ ಮಧ್ಯದಲ್ಲಿ ಮಹೇಶ ಮಾತ್ರ ಏನೂ ತಿಳಿಯದಂತೆ ಬೇರೆ ಯಾವುದೋ ಲೋಕದಲ್ಲಿ ಕಳೆದುಹೋಗಿದ್ದ. ಸುಮಾರು ದಿನಗಳಿಂದ ಒಬ್ಬಳ ಜೊತೆ ಅವನ ಚಕ್ಕರ್ ನಡೀತಾ ಇದೆ ಅನ್ನುವ ಸಂಶಯ ನಮ್ಮೆಲ್ಲರ ಮನದಲ್ಲಿತ್ತು. ಕೈಯ್ಯಲ್ಲಿ ಯಾವಾಗಲೂ ಫೋನು. ಮೆಸೇಜ್ ಮಾಡಿ ಮಾಡಿ  ಅವನ ಫೋನಿನ ಕೀ ಪ್ಯಾಡ್ ಕೈಗೆ ಬರುವಂತಾಗಿತ್ತು. ನಮ್ಮ ಹತ್ತಿರ ಮಾತನಾಡುವುದು ಕೂಡ ಕಡಿಮೆ ಮಾಡಿ ಬಿಟ್ಟಿದ್ದ. ಊಟ, ತಿಂಡಿ, ನಿದ್ದೆ ಎಲ್ಲವನ್ನೂ ತ್ಯಾಗ ಮಾಡಿ ಕಳೆದೆರಡು ತಿಂಗಳುಗಳಲ್ಲೇ ಮೊಬೈಲ್ ಕಂಪೆನಿಯ ಲಾಭ  ಡಬಲ್ ಮಾಡಿದ್ದ. ಈ ವೆಲೆ೦ಟೈನ್  ಡೇ ಗೆ ಪ್ರಪೋಸ್ ಮಾಡುವುದೇ ಎಂದು ತೀರ್ಮಾನ ಮಾಡಿ ಕೂತಿದ್ದ. ಅಂತೂ ಇಂತೂ ಆ ಸುದಿನ ಬಂದಾಗಿತ್ತು. ಗ್ರೀಟಿಂಗ್ಸ್ ಕಾರ್ಡು, ಗಿಫ್ಟು ಎಲ್ಲ ನಮಗೆ ಗೊತ್ತಿಲ್ಲದಂತೆಯೇ ತಂದು ಇಟ್ಟಿದ್ದ. ಯಾವಾಗ ಬೆಳಗಾಗುವುದು ಎಂಬ ಆಲೋಚನೆಯಲ್ಲಿಯೇ ಮೈ ಮರೆತು ಹೋಗಿದ್ದ. 

ಅಂತೂ ಇಂತೂ ಬೆಳಗಾಯಿತು. ಎಲ್ಲರೂ ಕ್ಲಾಸಿನ ಕಡೆ ಹೊರಟೆವು. ಆದರೆ ಆ ದಿನ ಒಂದು ವಿಶೇಷ ಹುರುಪಿತ್ತು. ಏನಾದರೂ ಚಮತ್ಕಾರಿ ಘಟನೆ ನಡೆಯಬಹುದೆಂಬ ಆಸೆ ಕೂಡ ಇತ್ತು. ಆ ದಿನ ಶನಿವಾರ ಆದ್ದರಿಂದ ೧೨ ಘಂಟೆಗೆ ಕ್ಲಾಸ್ ಮುಗಿದಿತ್ತು. ಕ್ಲಾಸ್ ಮುಗಿದ ಕೂಡಲೇ  ಕ್ಯಾಂಟೀನ್ ಬಳಿ ಬಾ ಎಂದು ಮಹೇಶ ಆಗಲೇ ಅವಳಿಗೆ ಮೆಸೇಜ್ ಮಾಡಿದ್ದ. ಅವನ ಹಿಂದೆಯೇ ನಾವೂ ಕ್ಯಾಂಟೀನ್ ಕಡೆ ಓಡಿದೆವು. ಏನಾಗುವುದೋ, ಪ್ರಪೋಸ್ ಮಾಡುವುದೆಂದರೆ ಹೇಗಿರುವುದೋ ಎಂಬ ಕುತೂಹಲ ಒಂದೆಡೆಯಾದರೆ, ನಮ್ಮ ಮಹೇಶ ಕಮಿಟೆಡ್ ಆಗಿ ಬಿಡ್ತಾನಲ್ಲ ಎಂಬ ಹೊಟ್ಟೆ ಉರಿ ಒಂದು ಕಡೆ. ಐದು ನಿಮಿಷ ಅವರು ಏನೋ ಮಾತನಾಡಿಕೊಂಡರು. ಏನು ಗುಸು ಗುಸು ಮಾಡಿದರೋ ನಮಗೆ ಕೇಳಲಿಲ್ಲ. ವಾಪಸ್ ಬಂದ ಮಹೇಶನ ಬಾಯಿಂದ ಒಂದು ಮಾತೂ ಬರಲಿಲ್ಲ. ಸುಮ್ಮನೆ ಹಾಸ್ಟೆಲ್ ಕಡೆ ಹೆಜ್ಜೆ ಹಾಕಿದೆವು.

ಹಾಸ್ಟೆಲ್ ರೂಂ ಒಳಗೆ ಬಂದವನೇ ಮಹೇಶ ಬ್ಯಾಗಿನಲ್ಲಿದ್ದ ಗ್ರೀಟಿಂಗ್ ಮತ್ತು ಗಿಫ್ಟ್ ಗಳನ್ನು ತೆಗೆದು ಎಸೆದು.-"ನಾ ನೋಡಿದೆ. ಅವಳೂ ನೋಡಿದಳು. ನಾ ನಕ್ಕೆ. ಅವಳೂ ನಕ್ಕಳು. ನಾ ಮೆಸೇಜ್ ಮಾಡಿದೆ. ಅವಳೂ ಮಾಡಿದಳು. ನಾ ಪ್ರೀತಿಸಿದೆ. ಅವಳೂ ಪ್ರೀತಿಸಿದಳು. ಆದರೆ  ನನ್ನನ್ನಲ್ಲ"ಎಂದ. ಆಗಲೇ ಕವಿಯಾಗಿಬಿಟ್ಟಿದ್ದ. ಅವನನ್ನು ಎಳೆದುಕೊಂಡು ಊಟಕ್ಕೆ ಹೋದೆವು. "ಈ ಹುಡ್ಗೀರ್ ಹಿಂದೆ ಹೋಗಬೇಡ ಮಚ್ಚ. ಆರಾಮಾಗಿರು. ನಿನ್ನ ಹಣೇಲಿ ಮತ್ಯಾವದೋ ಒಳ್ಳೆ ಹುಡ್ಗೀನ ಆ ಬ್ರಹ್ಮ ಬರ್ದವ್ನೆ.ಅದ್ಕೇ ಅವ್ಳು ಹೋದಳು. ಇನ್ನು ಮುಂದಿನ  ವೆಲೆ೦ಟೈನ್ ಡೇ ತನಕ ಆರಾಮಾಗಿರು.ನಮಗೇನು ಈಗ ಹುಡ್ಗೀರು ಇದ್ದಾರ? ಅವ್ಳೆಲ್ಲಾದರೂ ಸಿಕ್ಕಿದ್ರೆ ನೀನು ನಮ್ಮನ್ನು ಬಿಟ್ಟೇ ಹೋಗ್ತಿದ್ದೆ. ಒಳ್ಳೆಯದೇ ಆಯ್ತು ಬಿಡು."ಎಂದು ಸಮಾಧಾನ ಮಾಡಿದ ಮೇಲೆ ಸ್ವಲ್ಪ ಸುಧಾರಿಸಿಕೊಂಡ. ಮತ್ತದೇ ಹಳೆಯ ದಿನಚರಿ. ಅದೇ ಲ್ಯಾಪ್ಟಾಪ್, ಅದೇ ಹರಟೆ. ಹೀಗೆ ಆ ದಿನ ಮುಗಿದಿತ್ತು.

1 comment:

  1. flash backಗೆ ಕರೆದೊಯ್ದ ಪರೇಶೂ ಜಿಂದಾಬಾದ್...

    ReplyDelete